ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದ್ದು, ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಮಂಗಳವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿರಲಿದ್ದಾರೆ.
ತ್ರಿಸದಸ್ಯ ಪೀಠವು ಮಂಗಳವಾರ (ಆಗಸ್ಟ್ 20) ಈ ಪ್ರಕರಣದ ವಿಚಾರಣೆ ನಡೆಸಲಿದೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ, ಕೊಲೆ ಮತ್ತು ಸಂಬಂಧಿತ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸಲಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ಆಗಸ್ಟ್ 9 ರಂದು ವೈದ್ಯೆಯ ಮೃತದೇಹವು ಆರ್.ಜಿ. ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮರುದಿನ ಕೋಲ್ಕತ್ತಾ ಪೊಲೀಸರು ಓರ್ವನ ಬಂಧನ ಮಾಡಿದ್ದಾರೆ.
ವೈದ್ಯರುಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದು, ಆಗಸ್ಟ್ 13ರಂದು ಕೋಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಆದರೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ವೈದ್ಯರುಗಳು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.