ವಿಜಯಪುರದಲ್ಲಿ ಸೆಪ್ಟೆಂಬರ್ 5ರಂದು ಬಿಡುಗಡೆಯಾಗುತ್ತಿರುವ ವಿವಾದಾಸ್ಪದ ಆರ್‌ಎಸ್‌ಎಸ್ ವಚನ ದರ್ಶನ ಪುಸ್ತಕವನ್ನು ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ಸದಸ್ಯರು ವಿರೋಧಿಸಿದ್ದಾರೆ.
ವಿಜಯಪುರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಬಸವ ತತ್ವದ ಚಿಂತಕ ಜೆ ಎಸ್ ಪಾಟೀಲ ಅವರು ಮಾತನಾಡಿ, “ಶರಣ ಸಂಸ್ಕೃತಿಯನ್ನು ಮತ್ತು ಲಿಂಗಾಯತ ಧರ್ಮ ತತ್ವಗಳನ್ನು ನಾಶಪಡಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ವಚನ ದರ್ಶನ ಪುಸ್ತಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಬಸವ ಭಕ್ತರು ಹಾಗೂ ಲಿಂಗಾಯತರಿಗೆ ನೋವು ತಂದಿದೆ. ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾವು ಸಾತ್ವಿಕವಾಗಿ ವಿರೋಧಿಸುತ್ತೇವೆ” ಎಂದು ತಿಳಿಸಿದರು.
“ಪುಸ್ತಕವನ್ನು ಪ್ರತಿ ಜಿಲ್ಲೆಗಳಲ್ಲಿ 3 ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಹುನ್ನಾರ ಬಯಲಾಗಬೇಕಿದೆ. ಈ ಪುಸ್ತಕ ಬಿಡುಗಡೆಯಾದರೆ ನಾಡಿನಾದ್ಯಂತ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುತ್ತದೆ” ಎಂದು ಹೇಳಿದರು.
“ದಶಕಗಳಿಂದಲೂ ಎಂ ಆರ್ ಶ್ರೀನಿವಾಸಮೂರ್ತಿ, ಆರ್ ಆರ್ ದಿವಾಕರ, ಡಂಕಿನ್ ಝಳಕಿ, ರಾಜಾರಾಮ್ ಹೆಗಡೆ ಮುಂತಾದವರ ಮೂಲಕ ವಚನ ಚಳುವಳಿಯ ಆಶಯಗಳನ್ನು ಹಾಗೂ ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ಶರಣರ ಆಶಯಗಳನ್ನು ಸರ್ವಾಂಗೀಣ ಕ್ರಾಂತಿಯ ಹಿನ್ನೆಲೆಯಲ್ಲಿ ನೋಡದೆ ಸನಾತನ ವೈದಿಕ ದರ್ಶನದ ಚೌಕಟ್ಟಿನಲ್ಲಿ ಸೇರಿಸಿ ಅದೊಂದು ಶುಷ್ಕ ಭಕ್ತಿ ಚಳವಳಿ ಎಂಬಂತೆ ಬಿಂಬಿಸುವ ಪ್ರಯತ್ನದ ವಿರುದ್ದ ಬಸವಾನುಯಾಯಿಗಳು ಸಾತ್ವಿಕ ಹಾಗು ತಾತ್ವಿಕ ಆಕ್ರೋಶವನ್ನು ದಾಖಲಿಸುತ್ತಿದ್ದೇವೆ” ಎಂದು ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ಸದಸ್ಯರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ; ವಿವಿಧ ಸಂಘಟನೆಗಳ ಪ್ರತಿಭಟನೆ
ಶರಣ ಸಂಸ್ಕೃತಿ ಹಾಗೂ ಲಿಂಗಾಯತ ಧರ್ಮ ರಕ್ಷಣಾ ವೇದಿಕೆಯ ಸಂಚಾಲಕ ಡಾ ಜೆ ಎಸ್ ಪಾಟೀಲ, ಜಿ ಬಿ ಸಾಲಕ್ಕಿ, ಮನಗೂಳಿ ವಿರಕ್ತಮಠದ ವಿರೇಶಾನಂದ ಸ್ವಾಮೀಜಿ, ಕಲಕೇರಿ ಶಿವಾಚಾರ್ಯ ಸ್ವಾಮೀಜಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗುಳಿ, ಕಲ್ಲಪ್ಪ ಕಡೆಚೂರ, ಹನುಮಂತ ಚಿಂಚಲಿ, ಮಹಾದೇವಿ ಗೋಕಾಕ, ರಾಜೇಶ್ವರಿ ಅರನಾಳ ಸೇರಿದಂತೆ ಇತರರು ಇದ್ದರು.