ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿದರೆ ನನ್ನಷ್ಟು ಖುಷಿಪಡೋ ವ್ಯಕ್ತಿ ಬೇರೆ ಯಾರು ಇಲ್ಲ ಎಂದು ಶನಿವಾರ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಭಾನುವಾರ ನಾನು ಹಾಗೆ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ಖುಷಿ ಪಡುತ್ತೇನೆ ಎಂದು ನಾನು ಹೇಳಿಲ್ಲ. ಸಚಿವ ಪರಮೇಶ್ವರ ಅವರನ್ನು ಸಿಎಂ ಮಾಡಿದರೆ ಖುಷಿ ಪಡುತ್ತೇನೆ ಎಂದು ಹೇಳಿದ್ದೇನೆ. ಬೇಕಾದ್ರೆ ನನ್ನ ಬಳಿಯೂ ರೆಕಾರ್ಡ್ ಇದೆ ತೋರಿಸ್ತೀನಿ ಎಂದು ವಾದಿಸಿದರು.
ಸಿದ್ದರಾಮಯ್ಯ ಐದು ವರ್ಷ ಇದ್ದರೆ ಸಂತೋಷ ಪಡ್ತಿನಿ ಅಂತಾ ನಾನು ಹೇಳಿಲ್ಲ. ನಾನು ಹೇಳಿದ್ದು ಅವರ ಪಕ್ಷ ನಿರ್ಧಾರ ಮಾಡಿ ಸಚಿವ ಪರಮೇಶ್ವರ ಅವರನ್ನು ಸಿಎಂ ಮಾಡಿದ್ರೆ ನಾನು ಸಂತೋಷಪಡ್ತಿನಿ ಅಂತ ಎಂದು ಸ್ಪಷ್ಟಪಡಿಸಿದರು.
ಕಾನೂನು ಚೌಕಟ್ಟಿನಂತೆ ನಡೆದುಕೊಳ್ಳುವುದು ಅನುಭವಿ ರಾಜಕಾರಣಿಯ ಕರ್ತವ್ಯ. ರಾಜ್ಯಪಾಲರು ಕಾನೂನು ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿದ್ದಾರೆ. ಹಾಗಾಗಿ ಕಾನೂನಿನಂತೆ ನಡೆದುಕೊಂಡರೆ ಸಿದ್ದರಾಮಯ್ಯ ಮತ್ತು ಅವರ ಪಕ್ಷದ ವರ್ಚಸ್ಸು ಹೆಚ್ಚುತ್ತದೆ. ಒಂದು ಸತ್ಯ ಕಾನೂನು ತನ್ನದೆ ಕೆಲಸ ಮಾಡುತ್ತೆ. ಸಿದ್ದರಾಮಯ್ಯ ನುರಿತ ರಾಜಕಾರಣಿ.ಇಂತಹ ಸಂದರ್ಭದಲ್ಲಿ ಅವರ ಪಕ್ಷ ಹೇಳಬೇಕಾಗುತ್ತೆ. ರಾಜೀನಾಮೆ ಬಗ್ಗೆ ನಾವು ತೀರ್ಮಾನ ಮಾಡಲು ಆಗಲ್ಲ. ಪಕ್ಷ ತಿರ್ಮಾನ ಮಾಡಬೇಕು ಎಂದರು.
