ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಾಗರಿಕ ಸಮಾಜ

Date:

Advertisements
ಸಂತ್ರಸ್ತೆಯ ಪರವಾಗಿ ನಡೆಯುತ್ತಿರುವ ಹೋರಾಟ ನಮ್ಮ ಆತ್ಮಾವಲೋಕನಕ್ಕೆ ಅನುವು ಮಾಡಿಕೊಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಹೆಣ್ಣನ್ನು ನೋಡುವ ಗಂಡಸಿನ ಮಾನಸಿಕತೆ ಬದಲಾಗಬೇಕು. ಆಳುವ ಸರ್ಕಾರಗಳು ಜನತೆಯ ನಂಬಿಕೆ, ವಿಶ್ವಾಸ ಕಳೆದುಕೊಂಡಾಗ ನ್ಯಾಯಾಂಗ ಮಧ್ಯೆ ಪ್ರವೇಶಿಸಿರುವುದು ಅಸಹಾಯಕರಲ್ಲಿ, ಸಂತ್ರಸ್ತರಲ್ಲಿ, ದಮನಿತರಲ್ಲಿ ಧೈರ್ಯ ತಂದಿದೆ. ಆ ಧೈರ್ಯ ದುಪ್ಪಟ್ಟಾಗಲಿ.

ಕೋಲ್ಕತ್ತದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ 31ರ ಹರೆಯದ ವೈದ್ಯ ವಿದ್ಯಾರ್ಥಿನಿ ಮೇಲೆ ಆ. 9ರಂದು ನಡೆದ ಅತ್ಯಾಚಾರ – ಕೊಲೆ ಪ್ರಕರಣ ಸಂಬಂಧ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿದಾಗ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿದೆ. ಆ. 20ರಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಏತನ್ಮಧ್ಯೆ, ಘಟನೆ ಖಂಡಿಸಿ ಆ. 17ರಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರತಿಭಟನೆ ಹಮ್ಮಿಕೊಂಡಿದ್ದು, ಅದಕ್ಕೆ ವೈದ್ಯರಷ್ಟೇ ಅಲ್ಲ, ದೇಶದ ಜನತೆ ಕೂಡ ಕೈಜೋಡಿಸಿದ್ದಾರೆ. ಸಂತ್ರಸ್ತೆಯ ಪರ ಬೆಂಬಲ ಸೂಚಿಸಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ‘ಬೇಟಿ ಬಚಾವೋ’ ಎಂಬ ಘೋಷವಾಕ್ಯವನ್ನು ಪ್ರಧಾನಿ ಮೋದಿಯವರು ಪದೇ ಪದೆ ಉಚ್ಚರಿಸುತ್ತಲೇ ಇರುತ್ತಾರೆ. ಆದರೆ, ಮಹಿಳೆಯರ ಮೇಲಿನ ಅತ್ಯಾಚಾರ ಎನ್ನುವುದು ದೇಶದಲ್ಲಿ ಸಾಮಾನ್ಯ ಸಂಗತಿಯಾಗಿದೆ. ನ್ಯಾಷನಲ್ ಕ್ರೈಮ್ ರೆಕಾಡ್ಸ್ ಬ್ಯೂರೋ(ಎನ್ ಸಿಆರ್ ಬಿ) ಪ್ರಕಾರ 2021ರಲ್ಲಿ 31,677, 2022ರಲ್ಲಿ 31,000 ಕೇಸುಗಳು ದಾಖಲಾಗಿವೆ. ಅಂದರೆ, ಒಂದು ದಿನಕ್ಕೆ ಸರಾಸರಿ 86 ಅತ್ಯಾಚಾರಗಳು, 15 ನಿಮಿಷಕ್ಕೆ ಒಂದು ಅತ್ಯಾಚಾರ ದೇಶದಲ್ಲಿ ನಡೆಯುತ್ತಿದೆ.

Advertisements

ಆದರೆ ಎಲ್ಲೋ ಕೆಲವು ಅತ್ಯಾಚಾರ ಪ್ರಕರಣಗಳು ಮಾತ್ರ ಬಹಿರಂಗವಾಗುತ್ತವೆ, ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತವೆ, ರಾಷ್ಟ್ರವ್ಯಾಪಿ ಪ್ರಾಮುಖ್ಯತೆ ಪಡೆಯುತ್ತವೆ. ಅಂತಹ ಕೆಲವು ಅತ್ಯಾಚಾರಗಳಲ್ಲಿ ದೆಹಲಿಯ ನಿರ್ಭಯ, ಹೈದರಾಬಾದಿನ ಪಶುವೈದ್ಯೆ, ಉತ್ತರ ಪ್ರದೇಶದ ಹತ್ರಾಸ್ ಬಿಟ್ಟರೆ ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ, ನ್ಯಾಯವೂ ದೊರಕುವುದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಸಾಮಾನ್ಯವಾಗಿವೆ. ಅವು ಸುದ್ದಿಯೂ ಆಗುವುದಿಲ್ಲ, ಮಹತ್ವವನ್ನೂ ಪಡೆಯುವುದಿಲ್ಲ.

ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು, ದೌರ್ಜನ್ಯಗಳು ಮಹತ್ವ ಪಡೆಯಬೇಕಾದರೆ, ಸಂತ್ರಸ್ತರು ಮೇಲ್‌ಜಾತಿ, ಮೇಲ್‌ವರ್ಗಕ್ಕೆ ಸೇರಿದವರಾಗಿರಬೇಕಾಗುತ್ತದೆ. ಇಲ್ಲವೇ ಜನಪ್ರಿಯ ವ್ಯಕ್ತಿಯಾಗಿರಬೇಕಾಗುತ್ತದೆ. ಆಗ ಮಾಧ್ಯಮಗಳಲ್ಲಿ ಸುದ್ದಿಯಾಗಿ, ಪರ-ವಿರೋಧದ ಚರ್ಚೆಗಳಾಗಿ, ಕಾಯ್ದೆ- ಕಾನೂನುಗಳು ಮುನ್ನೆಲೆಗೆ ಬರುತ್ತವೆ. ನಂತರ ದೇಶದ ಜನ ಎಚ್ಚೆತ್ತು ಪ್ರತಿಭಟನೆಗಿಳಿಯುತ್ತಾರೆ. ಆಳುವ ಸರಕಾರಗಳಿಂದ ಆ ಕ್ಷಣಕ್ಕೆ ಕಠಿಣ ಕ್ರಮಗಳ ಕುರಿತು ಹೇಳಿಕೆಗಳು ಹೊರಬೀಳುತ್ತವೆ. ತದನಂತರ ಎಲ್ಲವೂ ಯಥಾರೀತಿ. ಹೀಗಾಗಿ ದೇಶದ ಮಹಿಳೆಯರ ರಕ್ಷಣೆ, ಭದ್ರತೆಯ ವಿಷಯದಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಕಣ್ಣೊರೆಸುವ ತಂತ್ರಕ್ಕೆ ತಲೆಬಾಗಿವೆ. ಅದು ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯಪಾಲರ ಕಚೇರಿಯು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನವನ್ನು ಈ ರಾಜ್ಯ ಸಹಿಸಲ್ಲ 

ಈಗ ಕೊಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ದೇಶಾದ್ಯಂತ ಸುದ್ದಿಯಾಗುತ್ತಿದೆ. ಕೃತ್ಯಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಆದರೆ ಸಂತ್ರಸ್ತೆಯ ಪೋಷಕರ ಪ್ರಕಾರ, ಇದು ಯಾರೋ ಒಬ್ಬನಿಂದ ಆದ ಕೃತ್ಯವಲ್ಲ, ಇದರ ಹಿಂದೆ ಹಲವರು ಶಾಮೀಲಾಗಿರುವ ಸಾಧ್ಯತೆಗಳಿವೆ ಎಂಬ ಹೇಳಿಕೆ ಬೇರೆ ಆಯಾಮವನ್ನು ಪಡೆಯುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಆಡಳಿತಾರೂಢ ರಾಜ್ಯ ಸರ್ಕಾರ, ನಿರ್ಲಕ್ಷಿಸಿದ್ದರಿಂದಾಗಿ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿರುವಾಗ, ಮಹಿಳೆಯಾಗಿರುವಾಗ ನಡೆದ ಕೃತ್ಯವನ್ನು ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬ ದೂರಿದೆ. ಅದು ವಿರೋಧ ಪಕ್ಷಗಳ ಕೈ-ಬಾಯಿಗೆ ಸಿಕ್ಕಿದೆ. ಪ್ರಕರಣದಲ್ಲಿ ರಾಜಕಾರಣ ಬೆರೆಯತೊಡಗಿದೆ. ರಾಜಕೀಯ ಪಕ್ಷಗಳ ಕ್ಷುಲ್ಲಕ ಆರೋಪ-ಪ್ರತ್ಯಾರೋಪಗಳನ್ನು ಇಲ್ಲಿಗೇ ನಿಲ್ಲಿಸಿ, ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ.

ಈ ನಡುವೆ, ಆ. 14ರಂದು ವೈದ್ಯಕೀಯ ಕಾಲೇಜಿನ ಮೇಲೆ ಹಲವು ದುಷ್ಕರ್ಮಿಗಳಿಂದ ದಾಳಿಯೂ ನಡೆದಿದೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ಹಿಂಸೆ, ದಾಂಧಲೆ ನಡೆದದ್ದು ವಿಷಾದಕರ. ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ನೀಡುವಾಗ ವೈದ್ಯರು ಯಾವುದೇ ಜಾತಿ, ಧರ್ಮಗಳ ಭೇದಭಾವವಿಲ್ಲದೇ ಕಾರ್ಯನಿರ್ವಹಿಸುತ್ತಾರೆ. ಎಂತಹ ಸಂದರ್ಭಗಳಲ್ಲೂ ತುರ್ತು ಮತ್ತು ಅಗತ್ಯ ಆರೋಗ್ಯ ಸೇವೆಗಳಿಗೆ ಮುಂದಾಗಿರುತ್ತಾರೆ. ಅಂತಹ ವೈದ್ಯರು ಯಾವುದೇ ಭಯವಿಲ್ಲದೇ ಕರ್ತವ್ಯ ನಿರ್ವಹಿಸುವಂತಹ ವಾತಾವರಣವನ್ನು ಸೃಷ್ಟಿಸುವುದು ಆಸ್ಪತ್ರೆ, ಆಡಳಿತ ಮಂಡಳಿ ಮತ್ತು ಸರ್ಕಾರಗಳ ಕರ್ತವ್ಯವಾಗಬೇಕಿದೆ.

ಕೋಲ್ಕತ್ತ ಹೈಕೋರ್ಟಿನ ಆದೇಶದ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳವು ತುರ್ತಾಗಿ ನ್ಯಾಯ ಒದಗಿಸುವುದನ್ನು ಖಾತ್ರಿಪಡಿಸಬೇಕು. ಕೇಂದ್ರ ಸರ್ಕಾರವು ಆರೋಗ್ಯ ವೃತ್ತಿಪರರಿಗೆ ರಕ್ಷಣೆ ಒದಗಿಸುವ ಕಾನೂನನ್ನು ಗಟ್ಟಿಗೊಳಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಮರುಕಳಿಸದಂತೆ, ದೀರ್ಘಕಾಲೀನ ಕಾಯ್ದೆ-ಕಾನೂನು ರಚಿಸಬೇಕು.

ಅಂತಿಮವಾಗಿ, ಮಹಿಳೆಯರಿಗೆ ಸುರಕ್ಷತೆ ಮತ್ತು ಸಮಾನತೆ ಬಗ್ಗೆ ಯೋಚಿಸುವುದು ಎಲ್ಲರದಾಗಬೇಕು. ಸಂತ್ರಸ್ತೆಯ ಪರವಾಗಿ ನಡೆಯುತ್ತಿರುವ ಹೋರಾಟ ನಮ್ಮ ಆತ್ಮಾವಲೋಕನಕ್ಕೆ ಅನುವು ಮಾಡಿಕೊಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಹೆಣ್ಣನ್ನು ನೋಡುವ ಗಂಡಸಿನ ಮಾನಸಿಕತೆ ಬದಲಾಗಬೇಕು. ಹೆಣ್ಣನ್ನು ಬರೀ ಭೋಗದ ವಸ್ತುವನ್ನಾಗಿ ಬಳಸುವುದು, ಪೂಜ್ಯನೀಯ ಭಾವನೆಯಿಂದ ನೋಡುವುದು, ಕಸಕ್ಕಿಂತ ಕಡೆಯಾಗಿ ಕಡೆಗಣಿಸುವುದು ಸಲ್ಲದು. ಆಕೆ ನಮ್ಮ ನಿಮ್ಮಂತೆ ಸೃಷ್ಟಿಯ ಸಹಜೀವಿ ಎನ್ನುವುದನ್ನು ಅರಿಯಬೇಕು. ಹಾಗೆಯೇ ವಿಕೃತಗೊಳ್ಳುತ್ತಿರುವ ವ್ಯವಸ್ಥೆಯನ್ನು ನಾಗರಿಕ ಸಮಾಜವನ್ನಾಗಿ ರೂಪಿಸುವುದು ಎಲ್ಲರ ಕರ್ತವ್ಯವಾಗಬೇಕು. ಸಮಾಜದ ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ಕಾಯ್ದೆ ಕಾನೂನಿನ ಭಯಕ್ಕಿಂತ ಆಂತರ್ಯದ ಬದಲಾವಣೆ ಬಹಳ ಮುಖ್ಯವಾಗಬೇಕು.

ಆಳುವ ಸರ್ಕಾರಗಳು ಜನತೆಯ ನಂಬಿಕೆ, ವಿಶ್ವಾಸ ಕಳೆದುಕೊಂಡಾಗ ನ್ಯಾಯಾಂಗ ಮಧ್ಯೆ ಪ್ರವೇಶಿಸಿರುವುದು ಅಸಹಾಯಕರಲ್ಲಿ, ಸಂತ್ರಸ್ತರಲ್ಲಿ, ದಮನಿತರಲ್ಲಿ ಧೈರ್ಯ ತಂದಿದೆ. ಆ ಧೈರ್ಯ ದುಪ್ಪಟ್ಟಾಗಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X