ಆರ್.ಎಸ್. ರಾಜಾರಾಂ ಎಂದರೆ ನವಕರ್ನಾಟಕ, ಎನ್ನುವಷ್ಟರ ಮಟ್ಟಿಗೆ ಬೆಸೆದು ಹೋಗಿದ್ದ ಈ ಮಹಾನುಭಾವ ಪುಸ್ತಕದ ಲೋಕಕ್ಕೆ ಅಪಾರ ಘನತೆಯನ್ನು ತಂದುಕೊಟ್ಟವರು. ಪುಸ್ತಕದೊಂದಿಗಿನ ಅವರ ಬೆಸುಗೆಯೇ ವಿನೂತನವಾದುದು. ತಮ್ಮ ಕಚೇರಿಗೆ ಯಾರೇ ಬರಲಿ, ಅವರಿಗೆ ಪುಸ್ತಕಗಳನ್ನು ಕೊಟ್ಟು, ಹೊಸ ಪುಸ್ತಕಗಳ ಬಗ್ಗೆ ತಿಳಿಸಿ ಅರಿವಿನ ಬೆಳಕು ಹಚ್ಚುತ್ತಿದ್ದರು.
ಪುಸ್ತಕ ಪ್ರೀತಿ ಮತ್ತು ಪುಸ್ತಕರುಚಿಯನ್ನು ನನ್ನಲ್ಲಿ ಹುಟ್ಟಿಸಿದ ಕಣ್ಮಣಿಗಳಲ್ಲಿ ಒಬ್ಬರಾದ ನವಕರ್ನಾಟಕದ ಆರ್.ಎಸ್. ರಾಜಾರಾಂ ಇನ್ನಿಲ್ಲ, ಎಂಬ ಸುದ್ದಿ ಬಂದು ಎರಗಿದೊಡನೆ ಮನಸ್ಸು ಮೂಕವಾಯಿತು. ಹೆಬ್ಬಾಳದ ಚಿತಾಗಾರದಲ್ಲಿ ಮೌನವಾಗಿ ಮಲಗಿದ್ದ ಅವರನ್ನು ಕಂಡಾಗ ಮನಸ್ಸು ರೋದಿಸಿತು. ಎಂಭತ್ತಮೂರು ವರ್ಷಗಳ ಸುದೀರ್ಘ ಬದುಕು ಬಾಳಿದ ನಮ್ಮ ನಡುವಿನ ಪುಸ್ತಕ ಸಂಸ್ಕೃತಿಯ ವೃಕ್ಷವೊಂದು ಉರುಳಿ ಬಿದ್ದಾಗ ಮನಸ್ಸಿನಲ್ಲಿ ಉಂಟಾಗುವ ತಳಮಳ, ನೋವು ಆವರಿಸಿತು. ಆಗ ಸಹಜವಾಗಿಯೇ ನೆನಪು ಹಿಂದಕ್ಕೆ ಜಾರಿತು.
ಅದು ಎಂಭತ್ತನೆಯ ಇಸವಿ. ಗುರುಗಳಾದ ಜಿ.ಆರ್. ಅವರೊಂದಿಗೆ ನಾನು ನವಕರ್ನಾಟಕ ಪುಸ್ತಕ ಮಳಿಗೆಗೆ ಎಡತಾಕುತ್ತಿದ್ದ ಸಮಯ. ಅಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದವರು ರಾಜಾರಾಂ. ಆತ್ಮೀಯವಾಗಿ ಮಾತನಾಡಿಸುತ್ತಾ ಹೊಸ ಪುಸ್ತಕ, ಸಮಕಾಲೀನ ರಾಜಕೀಯ, ಸಾಂಸ್ಕೃತಿಕ ಲೋಕದ ಬಗೆಗಿನ ವಿಮರ್ಶೆಯ ಕತೆಗಳನ್ನು ಪುಂಖಾನುಪುಂಖವಾಗಿ ಹೇಳುತ್ತಾ ನನ್ನ ಅರಿವನ್ನು ಹೆಚ್ಚಿಸುತ್ತಿದ್ದರು. ನನ್ನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ, ಭಗತ್ ಸಿಂಗ್‍ನ ‘ನಾನೇಕೆ ನಾಸ್ತಿಕ?’ ಪುಸ್ತಕವನ್ನು ಅನುವಾದಿಸಲು ಹೇಳಿದರು. ಅನುವಾದ ಮಾಡಿಕೊಟ್ಟೆ. ಅಲ್ಲಿಂದ ನನ್ನ ನವಕರ್ನಾಟಕದೊಂದಿಗಿನ ಅಕ್ಷರ ಪಯಣ ಇಂದಿಗೂ ಅವ್ಯಾಹತವಾಗಿ ನಡೆದು ಬಂದಿದೆ. ನನ್ನ ಪ್ರಕಟಿತ ಪುಸ್ತಕಗಳಲ್ಲಿ ಸುಮಾರು ಅರ್ಧದಷ್ಟನ್ನಾದರೂ ನವಕರ್ನಾಟಕ ಪ್ರಕಟಿಸಿದೆ. ಅದಕ್ಕೆ ಕಾರಣರು ಮುಖ್ಯವಾಗಿ ರಾಜಾರಾಂ.
ಕನ್ನಡ ಸಾರಸ್ವತ ಲೋಕಕ್ಕೆ 6000ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ನೀಡಿರುವ, ಪುಸ್ತಕಗಳ ಮೂಲಕ ಮನುಷ್ಯ ಕುಲದ ಸೇವೆಯ ಧ್ಯೇಯವಿರಿಸಿಕೊಂಡು 1960ರಲ್ಲಿ ಆರಂಭವಾದ್ದು ನವಕರ್ನಾಟಕ ಪ್ರಕಾಶನ ಸಂಸ್ಥೆ. ಆರಂಭದಲ್ಲಿ ಬಿ.ವಿ. ಕಕ್ಕಿಲ್ಲಾಯ, ಎಸ್.ಆರ್.ಭಟ್, ಎಂ.ಎಸ್. ಕೃಷ್ಣನ್, ಎಂ.ಸಿ. ನರಸಿಂಹನ್, ಸಿ.ಆರ್. ಕೃಷ್ಣರಾವ್ ಮುಂತಾದವರ ಸದಾಶಯದ ಫಲವಾಗಿ ಜನ್ಮ ತಳೆದ ಈ ಸಂಸ್ಥೆಯ ಕನಸನ್ನು ಸಮರ್ಥವಾಗಿ ನನಸು ಮಾಡಿದ ಕೀರ್ತಿ ರಾಜಾರಾಂ ಅವರಿಗೆ ಸಲ್ಲುತ್ತದೆ. ಸುದೀರ್ಘ ಅರವತ್ತನಾಲ್ಕು ವರ್ಷಗಳ ಇತಿಹಾಸದಲ್ಲಿ ಸುಮಾರು ಐದು ದಶಕಗಳ ಕಾಲ ಸಂಸ್ಥೆಯ ಸಾರಥ್ಯ ವಹಿಸಿದವರು ರಾಜಾರಾಂ. ಅವರು ತಮ್ಮ ಅವಧಿಯಲ್ಲಿ ಕೈಗೊಂಡ ಯೋಜನೆಗಳು ಹಲವಾರು. ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದ ಸಂಸ್ಥೆಗಳೇ ಕೈಗೊಳ್ಳದಂತಹ ಯೋಜನೆಗಳನ್ನು ಅವರು ಸಾರ್ಥಕವಾಗಿ ಪೂರೈಸಿ ಅದನ್ನು ಓದುಗರ ಕೈಗೆ ತಲುಪಿಸುವ ಮಹತ್ಕಾರ್ಯ ಮಾಡಿದ್ದಾರೆ.
1980 – 82ರಲ್ಲಿ ನಿರಂಜನ ಅವರ ಸಂಪಾದಕತ್ವದಲ್ಲಿ ವಿಶ್ವದ 87 ದೇಶಗಳ 317 ಕತೆಗಳ ವಿಶ್ವ ಕಥಾಕೋಶವನ್ನು ಪ್ರಕಟಿಸಿದ್ದು, ಇಪ್ಪತ್ತೈದು ಕ್ರಾಂತಿಕಾರಿಗಳ ‘ಕ್ರಾಂತಿಕಿಡಿ ಮಾಲಿಕೆ’ ಮಾಲಿಕೆ, ಕರ್ನಾಟಕದ ಏಕೀಕರಣ ಇತಿಹಾಸ, ವಿಜ್ಞಾನ ಸಾಹಿತ್ಯದ ಹಲವಾರು ಯೋಜನೆಗಳು, ಸ್ವಾತಂತ್ರ್ಯೋತ್ತರ ಭಾರತ ಮಾಲಿಕೆ, ಮಹಿಳಾ ವಿಕಸನ ಮಾಲೆ, ಲೋಕತತ್ವ ಶಾಸ್ತ್ರ ಮಾಲಿಕೆ, ನವಕರ್ನಾಟಕ ಕಲಾದರ್ಶನ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಸಂಪದ, ವಿಶ್ವಮಾನ್ಯರು ಮಾಲಿಕೆ …. ಹೀಗೆ ಅವರ ಕನಸಿನ ಹಲವಾರು ಯೋಜನೆಗಳು ನವಕರ್ನಾಟಕ ಪ್ರಕಾಶನ ಸಂಸ್ಥೆಯನ್ನು ಪ್ರಕಾಶನ ಜಗತ್ತಿನಲ್ಲಿ ಎಲ್ಲರೂ ಅಭಿಮಾನದಿಂದ ನೋಡುವಂತೆ ಮಾಡಿದೆ.
1941ರ ಜನವರಿ 31ರಂದು ಜನಿಸಿದ ರಾಜಾರಾಂ ತಮ್ಮ ಎಂಭತ್ತಮೂರು ವರ್ಷಗಳ ದೀರ್ಘ ಬದುಕಿನಲ್ಲಿ ಐದು ದಶಕಗಳ ಕಾಲ ಪುಸ್ತಕದ ಕಾಯಕದಲ್ಲಿ ತೊಡಗಿಕೊಂಡವರು. ಆರ್.ಎಸ್. ರಾಜಾರಾಂ ಎಂದರೆ ನವಕರ್ನಾಟಕ, ಎನ್ನುವಷ್ಟರ ಮಟ್ಟಿಗೆ ಬೆಸೆದು ಹೋಗಿದ್ದ ಈ ಮಹಾನುಭಾವ ಪುಸ್ತಕದ ಲೋಕಕ್ಕೆ ಅಪಾರ ಘನತೆಯನ್ನು ತಂದುಕೊಟ್ಟವರು. ಪುಸ್ತಕದೊಂದಿಗಿನ ಅವರ ಬೆಸುಗೆಯೇ ವಿನೂತನವಾದುದು. ತಮ್ಮ ಕಚೇರಿಗೆ ಯಾರೇ ಬರಲಿ, ಅವರಿಗೆ ಪುಸ್ತಕಗಳನ್ನು ಕೊಟ್ಟು, ಹೊಸ ಪುಸ್ತಕಗಳ ಬಗ್ಗೆ ತಿಳಿಸಿ ಅರಿವಿನ ಬೆಳಕು ಹಚ್ಚುತ್ತಿದ್ದರು. ಮಕ್ಕಳಿಗೆ ಪುಸ್ತಕದ ರುಚಿ ಹತ್ತಿಸುವಲ್ಲಿ ರಾಜಾರಾಂ ಅವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಅವರನ್ನು ಭೇಟಿಯಾಗಲು ಬಂದ ಲೇಖಕರು, ಓದುಗರು ಯಾರೇ ಆಗಿರಲಿ ಅವರೊಡನೆ ಬರುವ ಮಕ್ಕಳನ್ನು ಪ್ರೀತಿಯಿಂದ ಮಾತಾಡಿಸಿ, ಅವರಿಗೆ ಕೈತುಂಬ ಬಣ್ಣ ಬಣ್ಣದ ಪುಸ್ತಕಗಳನ್ನು ಕೊಟ್ಟು ಕಳಿಸುತ್ತಿದ್ದುದಲ್ಲದೆ, ಆ ಮಕ್ಕಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಳ್ಳುತ್ತಿದ್ದರು. ನನ್ನ ಮಗಳು ಮೈತ್ರಿಯ ಪುಸ್ತಕ ಪ್ರೀತಿ ಮತ್ತು ಬರಹದ ಸೆಳೆತದಲ್ಲಿ ರಾಜಾರಾಂ ಅವರದು ಸಿಂಹಪಾಲು ಇದೆ. ಇದು ಬಹಳಷ್ಟು ಮಕ್ಕಳ ಅನುಭವವಾಗಿದೆ. ಹೀಗೆ ಎಳೆಯರ ನಡುವೆಯೂ ಪುಸ್ತಕ ಪ್ರೀತಿಯ ಘಮಲನ್ನು ಹರಡುತ್ತಿದ್ದ ಈ ಮಾಂತ್ರಿಕನ ಮೋಡಿಗೆ ಮರುಳಾಗದವರೇ ಇಲ್ಲ.
ಕಾಲೇಜು ಶಿಕ್ಷಣವನ್ನು ತಾವು ಪಡೆಯದಿದ್ದರೂ, ಲೋಕಶಿಕ್ಷಣದ ಅಪಾರ ಜ್ಞಾನರಾಶಿಯನ್ನು ತಮ್ಮ ಸ್ವಂತ ಬಲದಿಂದ ಗಳಿಸಿಕೊಂಡು ವಿಶ್ವದ ಹಲವಾರು ಲೇಖಕರ ಕೃತಿಗಳನ್ನು ನವಕರ್ನಾಟಕ ಪ್ರಕಾಶನದ ಪ್ರಕಟಣೆಯ ಮೂಲಕ ಪರಿಚಯಿಸಿದರು. ವಿಶ್ವದ ಹಲವಾರು ಸಾಮಾಜಿಕ ಜನಪರ ಹೋರಾಟಗಳನ್ನು ಪರಿಚಯಿಸುವ ಮೂಲಕ ಸೌಹಾರ್ದ ಚಳುವಳಿಗಳನ್ನು ರೂಪಿಸಲು ಮುಂದಾದರು. ಈ ವಿಷಯಗಳ ನಿರಂತರ ಚರ್ಚೆಯ ಅಗತ್ಯ ಮನಗಂಡು ಅದರಿಂದ ‘ನೆಮ್ಮದಿಯ ನಾಳೆ’ಯ ಕನಸು ನನಸಾಗಲು ಅವರು ಆರಂಭಿಸಿದ ‘ಹೊಸತು’ ಮಾಸಪತ್ರಿಕೆ ಈಗ ಯಶಸ್ವಿ ಇಪ್ಪತ್ತೈದು ವರ್ಷಗಳನ್ನು ಮುಗಿಸಿದೆ. ಪ್ರಕಾಶನ ಕೌಶಲ, ಮಾರಾಟದ ವ್ಯಾವಹಾರಿಕ ಜಾಣ್ಮೆ ಮತ್ತು ಲೇಖಕ-ಓದುಗ ವೃಂದವನ್ನು ಗೌರವದಿಂದ ನಡೆಸಿಕೊಳ್ಳುವ ಅವರ ವಿಶೇಷ ಗುಣಗಳ ಮೂಲಕ ಪುಸ್ತಕ ಲೋಕಕ್ಕೆ ಅಪಾರ ಗೌರವವನ್ನು ತಂದುಕೊಟ್ಟರು. ಈ ಮೌಲ್ಯಗಳೇ ಕನ್ನಡ ಅಕ್ಷರ ಲೋಕಕ್ಕೆ ರಾಜಾರಾಂ ಬಿಟ್ಟು ಹೋಗಿರುವ ಗಣನೀಯ ಆಸ್ತಿ. ಈ ಆಸ್ತಿಯ ಸಂರಕ್ಷಣೆ ನಮ್ಮ ಜವಾಬ್ದಾರಿ.