ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಮೆರವಣಿಗೆಯ ಮೂಲಕ ಮೆಕ್ಕೆ ವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು, ಬಿಜೆಪಿ, ಜೆಡಿಎಸ್, ಕೇಂದ್ರ ಸರಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಜನಪರವಾದ ಯೋಜನೆಗಳನ್ನು ಜಾರಿ ತಂದು ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಮುಂಬರುವ ತಾಪಂ, ಜಿಪಂ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಲಿದ್ದು, ಹೇಗಾದರೂ ಮಾಡಿ ಸರಕಾರಕ್ಕೆ ಮತ್ತು ಸಿದ್ದರಾಮಯ್ಯನವರ ಆಡಳಿತಕ್ಕೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಒಳಸಂಚು ಮಾಡಲು ಹೊರಟಿದ್ದಾರೆ. ನಮಗೆಲ್ಲ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು ಮೈತ್ರಿ ಪಕ್ಷಗಳಿಗೆ ತಕ್ಕ ಉತ್ತರ ನೀಡುತ್ತೇವೆ. ಜನ ಎಂದಿಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ ಎಂದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಆಡಳಿತವನ್ನು ಸಹಿಸದ ಮೈತ್ರಿ ಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆ ಮೂಲಕ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ರಾಜ್ಯದ ಜನತೆ, 136 ಜನ ಶಾಸಕರು ಸೇರಿದಂತೆ ಸಚಿವ ಸಂಪುಟದ ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ. ಹಿಂದಿನ ಬಿಜೆಪಿ ಸರಕಾರದ 40% ಕಮಿಷನ್ ವಿರುದ್ದ ರಾಜ್ಯಪಾಲರಿಗೆ ದೂರುಗಳು ಕೊಟ್ಟಾಗ ಯಾಕೆ ಕ್ರಮವಹಿಸಲಿಲ್ಲ. ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹಳ್ಳಿಗಳಿಂದ ಜನ ಮೈತ್ರಿ ಪಕ್ಷಗಳ ವಿರುದ್ದ ತಿರುಗಿ ಬೀಳಲಿದ್ದಾರೆ ಎಂದರು.
ಕೋಲಾರ ನಗರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿರುವ ರಾಜ್ಯಪಾಲರ ಕಛೇರಿಯು ಇವತ್ತು ಬಿಜೆಪಿ ಪಕ್ಷದ ಕಛೇರಿಯಾಗಿದೆ. ಕೇಂದ್ರ ಸರಕಾರದ ಕೈಗೊಂಬೆಯ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇವತ್ತು ಜನತೆಯ ಪರವಾಗಿ ನ್ಯಾಯ ಕೇಳಲು ನಾವು ಬಂದಿದ್ದೇವೆ. ಹಿಂದಿನ ಸರಕಾರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬೈರತಿ ಬಸವರಾಜ್ ಉಸ್ತುವಾರಿ ಸಚಿವರಾಗಿ ಬಿಜೆಪಿ ನೇತೃತ್ವದ ಸರಕಾರವೇ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯನವರ 40 ವರ್ಷಗಳ ಕಳಂಕ ರಹಿತ ಸುದೀರ್ಘ ರಾಜಕಾರಣಕ್ಕೆ ಕಳಂಕವನ್ನು ತರಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡಿದ್ದಾರೆ. ಇವರಿಗೆ ಯಾವುದೇ ನೈತಿಕತೆ ಇಲ್ಲ. ಹಿಂದೆ ಬಿಜೆಪಿ ಸರಕಾರದ ವಿರುದ್ದ ದೂರು ಕೊಟ್ಟಾಗ ಮೌನವಾಗಿದ್ದ ರಾಜ್ಯಪಾಲರು, ಇವತ್ತು ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡವರು ದೂರು ಕೊಟ್ಟರೆ ನೋಟೀಸ್ ಕೊಡತ್ತಾರೆ ಎಂದರೆ ರಾಜ್ಯಪಾಲರ ಯಾರ ಪರವಾಗಿದ್ದಾರೆ ಎನ್ನುವುದನ್ನು ಜನ ಅರಿಯಬೇಕಿದೆ. ಕುಮಾರಸ್ವಾಮಿಯ ಊರು ಯಾವುದು, ಅವರಿಗೆ ಮುಡಾದಲ್ಲಿ ಸೈಟ್ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಒಬ್ಬ ಬ್ರೋಕರ್ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಜೆಡಿಎಸ್ ಐಟಿ ಸೆಲ್ ಅಧ್ಯಕ್ಷ ಸ್ನೇಹಮಯಿ ಕೃಷ್ಣ ಮತ್ತು ಬಿಜೆಪಿ ಶಾಸಕರ ಸಂಬಂದಿ ಪ್ರದೀಪ್ ದೂರು ಕೊಟ್ಟಿದ್ದಾರೆ. ಯಾವುದೇ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸದೇ ಏಕಾಏಕಿ ಸಿಎಂ ವಿರುದ್ಧ ನೋಟೀಸ್ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಇಲ್ಲದ ಪಕ್ಷಗಳ ವಿರುದ್ದ ಕೇಂದ್ರ ಸರಕಾರದ ನೇತೃತ್ವದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರುವ ಮೈತ್ರಿ ಪಕ್ಷಗಳ ವಿರುದ್ದ ಹಳ್ಳಿ ಹಳ್ಳಿಗಳಿಂದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿ ವಿಚಾರಣೆ ಆ. 29ಕ್ಕೆ ಮುಂದೂಡಿಕೆ
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಿ.ಆದಿನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಚಂಜಿಮಲೆ ರಮೇಶ್, ಕೆ.ಜಯದೇವ್, ನಾಗರಾಜ್, ಮೈಲಾಂಡಹಳ್ಳಿ ಮುರಳಿ, ರವಿರಾಮಸ್ವಾಮಿ, ಹೊನ್ನೇನಹಳ್ಳಿ ಯಲ್ಲಪ್ಪ, ರಂಗನಾಥ್, ವೈ. ಶಿವಕುಮಾರ್, ರತ್ನಮ್ಮ, ಮಮತಾರೆಡ್ಡಿ, ವಕ್ಕಲೇರಿ ರಾಜಪ್ಪ, ಅಂಬರೀಶ್, ಆಫ್ಸರ್, ಷಂಷೀರ್, ಮಂಜುನಾಥ್, ಯುವ ಕಾಂಗ್ರೆಸ್ ಸುನಿಲ್ ನಂಜೇಗೌಡ, ಅಫ್ರಿದ್, ಉರಟಾಗ್ರಹಾರ ಚೌಡರೆಡ್ಡಿ ಮುಂತಾದವರು ಇದ್ದರು.
(ವರದಿ : ಸುನಿಲ್ ಮುಳ್ಳಹಳ್ಳಿ, ವರದಿಗಾರ, ಕೋಲಾರ)
