ಗದಗ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ತಡರಾತ್ರಿ ಭಾರೀ ಮಳೆಯಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದುದು ಕಂಡುಬಂದಿದೆ.
ಶುಕ್ರವಾರ ಬೆಳಗಿನಜಾವ ರಭಸವಾಗಿ ಆರಂಭಗೊಂಡ ಮಳೆ ಬೆಳಿಗ್ಗೆ 8ಗಂಟೆವರೆಗೆ ಸುರಿಯಿತು. ಮಳೆಯಿಂದ ಹಳ್ಳಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಸಮಸ್ಯೆಯನ್ನುಂಟುಮಾಡಿತು. ಸಮೀಪದ ನೆಲ್ಲೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಸುತ್ತಲೂ ಮಳೆ ನೀರು ತುಂಬಿಕೊಂಡು ಶಾಲೆ ದ್ವೀಪದಂತಾಯಿತು. ಇದರಿಂದ ತರಗತಿಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.
“ಪ್ರತಿ ಮಳೆಗಾಲದಲ್ಲಿ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.
ರಾಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಯೂ ಮಳೆನೀರು ಸಂಗ್ರಹವಾಗಿ ಶಾಲಾ ಆವರಣ ಕೆರೆಯಂತಾಗಿತ್ತು. ಬಳಿಕ ಗ್ರಾಮ ಪಂಚಾಯಿತಿಯವರು ಮಳೆನೀರು ಹರಿದು ಹೋಗುವಂತೆ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ : ಕಾಂಗ್ರೆಸ್ ಪ್ರತಿಭಟನೆ
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದವನ ರಕ್ಷಣೆ: ಸಮೀಪದ ದ್ಯಾಮುಣಸಿ ಗ್ರಾಮದ ಯಲ್ಲಪ್ಪ ಮಾರನಬಸರಿ ಎಂಬುವವರು ಶನಿವಾರ ಬೆಳಿಗ್ಗೆ ಹಳ್ಳ ದಾಟುವಾಗ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿದ್ದರು. ಹಳ್ಳದ ದಡದಲ್ಲಿದ್ದ ಗಿಡ ಹಿಡಿದುಕೊಂಡು ರಕ್ಷಣೆ ಪಡೆದಿದ್ದ ಅವರನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಸಹಾಯದಿಂದ ರಕ್ಷಿಸಿದ್ದಾರೆ.