ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಅನುಷ್ಠಾನಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸೋಮವಾರ ದಸಂಸ ಎಲ್ಲಾ ಸದಸ್ಯರು ತಹಶೀಲ್ದಾರ್ ಅವರಿಗೆ ಆಗ್ರಹ ಮನವಿ ಸಲ್ಲಿಸಿದರು.
ಗುಬ್ಬಿ ಪಟ್ಟಣದ ಬಾಬು ಜಗಜೀವನ ರಾಂ ಭವನದ ಬಳಿ ಸೇರಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ಆರಂಭಿಸಿ ಸರ್ಕಲ್, ಎಂ.ಜಿ.ರಸ್ತೆ ಮೂಲಕ ತಾಲ್ಲೂಕು ಕಚೇರಿ ತಲುಪಿ ಕ್ರಾಂತಿ ಗೀತೆ ಹಾಗೂ ಘೋಷಣೆ ಕೂಗುತ್ತಾ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ವರ್ಗೀಕರಣ ಅನುಷ್ಠಾನ ಮಾಡುವಂತೆ ಒತ್ತಾಯ ಮಾಡಿದರು.
ಹಕ್ಕೊತ್ತಾಯದ ಮನವಿ ಸಲ್ಲಿಸುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ದಲಿತ ಪರ ಸದಾ ಕಾಲ ನಿಂತಿರುವ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ಕೆಲಸ ಶೀಘ್ರದಲ್ಲಿ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿಗೂ ಶೋಷಿತ ಪರ ನಿಂತವರು. ನಾನೂ ಕೂಡಾ ಮೀಸಲಾತಿ ಪರ ನಿಂತು ಹೋರಾಟಕ್ಕೆ ಬೆಂಬಲ ನೀಡಿದ್ದೇನೆ. ಒಳ ಮೀಸಲಾತಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಉಳ್ಳವರ ಪಾಲಾಗಿ ಬಡ ದಲಿತರಿಗೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಆರ್ಥಿಕ ಮೀಸಲಾತಿ ಗಣನೆಗೆ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ನಡೆದಿದ್ದ ಒಳ ಮೀಸಲಾತಿ ಹೋರಾಟಕ್ಕೆ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ಘನ ನ್ಯಾಯಾಲಯ ರಾಜ್ಯ ಸರ್ಕಾರ ವರ್ಗೀಕರಣ ಅನುಷ್ಠಾನ ಮಾಡಬೇಕು ಎಂಬ ತೀರ್ಪು ನೀಡಿರುವ ಹಿನ್ನಲೆ ಕಾಂಗ್ರೆಸ್ ಸರ್ಕಾರ ಕೂಡಲೇ ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಸತತ ಮೂರು ದಶಕದ ದಸಂಸ ಜೊತೆಗೂಡಿ ಅನೇಕ ಸಂಘಟನೆಗಳು ಹೋರಾಟ ನಡೆಸಿದ್ದ ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೀಸಲಾತಿ ಕುರಿತಂತೆ ಆಂಧ್ರ, ತಮಿಳುನಾಡು, ಬಿಹಾರ ಹೀಗೇ ಅನೇಕ ರಾಜ್ಯದಲ್ಲಿ ಹೋರಾಟ ನಡೆದಿತ್ತು. ನ್ಯಾಯಾಲಯ ಆದೇಶದಂತೆ ಆಯಾ ರಾಜ್ಯಗಳ ಸರ್ಕಾರ ಅನುಷ್ಠಾನ ತರಬೇಕಿದೆ. ಪರಿಶಿಷ್ಟ ಜಾತಿಗಳ ಸಮಗ್ರ ಅಭ್ಯುದಯಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ಸಮಾಜದಲ್ಲಿ ಸಾಕಷ್ಟು ತುಳಿತಕ್ಕೆ ಒಳಗಾದ ಶೋಷಿತ ದಲಿತರ ಪೈಕಿ ಹಂತವಾಗಿ ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಅನುಷ್ಠಾನಕ್ಕೆ ಶೀಘ್ರ ಮುಂದಾಗಬೇಕು. ಈ ಹಿನ್ನಲೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಮನವಿ ಪತ್ರವನ್ನು ತಾಲ್ಲೂಕು ಆಡಳಿತ ಮೂಲಕ ಸಲ್ಲಿಸಿದ್ದೇವೆ ಎಂದರು.
“ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ದಿಟ್ಟ ಆಡಳಿತ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಪಿತೂರಿಗೆ ರಾಜ್ಯಪಾಲರ ಸಾಥ್ ನೀಡಿದ್ದಾರೆ. ಪ್ರಾಸಿಕ್ಯೂಷನ್ ಅಸ್ತ್ರ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ಮುಗಿಸುವ ಯತ್ನ ಎಂದೂ ಅಸಾಧ್ಯ. ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಅವರ ಜನಪರ ನಿಲುವು ಸಹಿಸದೆ ಕುತಂತ್ರ ಮಾಡುತ್ತಿರುವ ಬಿಜೆಪಿಗೆ ಜನರಿಂದ ತಕ್ಕ ಪಾಠ ಸಿಗಲಿದೆ. ರಾಜ್ಯದ 136 ಶಾಸಕರೂ ಸಿದ್ದರಾಮಯ್ಯ ಪರ ನಿಂತು ಈ ಅನ್ಯಾಯ ವಿರುದ್ಧ ಗೆಲುವು ಸಾಧಿಸುತ್ತೇವೆ ಎಂದು
ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎ.ನಾಗರಾಜು, ಪಾಂಡುರಂಗಪ್ಪ, ದಸಂಸ ಸಂಘಟನಾ ಸಂಚಾಲಕರಾದ ದೇವರಾಜ್ ಮಡೇನಹಳ್ಳಿ, ನಟರಾಜ್ ಕುಂದರನಹಳ್ಳಿ, ರವೀಶ್, ಮಹೇಶ್, ಸೋಮಶೇಖರ್, ರಂಗಸ್ವಾಮಿ, ಯೋಗೀಶ್, ಕಲ್ಲೂರು ರವಿಕುಮಾರ್, ಕಲ್ಲಪ್ಪ, ಮಲ್ಲಿಕಾರ್ಜುನಯ್ಯ, ಮನೋಹರ್, ನಾಗಭೂಷಣ ಇತರರು ಇದ್ದರು.