ಕೋಲಾರದ ಮುಳುಬಾಗಿಲು ನಗರ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ನಡೆದ ಶಿಕ್ಷಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 14ರ ಸಂಜೆ ಶಿಕ್ಷಕಿ ಮುಡಿಯನೂರು ಸರಕಾರಿ ಶಾಲೆಯ ಶಿಕ್ಷಕಿ ದಿವ್ಯಾಶ್ರೀ(43) ಎಂಬುವರನ್ನು ಮುಳುಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರುವ ಅವರ ಮನೆಯಲ್ಲಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.
ಆಂದ್ರಪ್ರದೇಶದ ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದ್ದು, ಪ್ರತ್ರಹಳ್ಳಿಯ ಭುವನ್, ಮುಳುಬಾಗಿಲು ನಿವಾಸಿ ರಂಜಿತ್, ನಂಗಲಿ ಗ್ರಾಮದ ಶಹೀದ್, ಮಲ್ಲೇಕುಪ್ಪ ಗ್ರಾಮದ ರಾಹುಲ್ ಹಾಗೂ ಯಶವಂತ್, ಗುಮ್ಮಕಲ್ ಗ್ರಾಮದ ಭರತ್ ಬಂಧಿತ ಆರೋಪಿಗಳು.
ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರೂ ಇದ್ದು, ಮಾದಕ ದ್ರವ್ಯ ವ್ಯಸನಿಗಳಾದ ಇವರು ಚಿಲ್ಲರೆ ಕಾಸಿಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದಿವ್ಯಶ್ರೀ ಅವರ ಪತಿ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದು, ಚಿಂತಾಮಣಿಯಲ್ಲಿರುವ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಮಾಡಲು ಸುಪಾರಿ ನೀಡಿದ್ದರು ಎಂದು ಶಂಕಿಸಲಾಗಿದೆ. ಸುಪಾರಿ ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ : ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಶಿಕ್ಷಕಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದರು. ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ವ್ಯಾಪಾರ ಮತ್ತು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ಆ.14ರಂದ ಪತಿ ಹೊರಗಡೆ ಹೋಗಿದ್ದರು. ಮಗಳು ನಿಶಾ ಮತ್ತು ದಿವ್ಯಶ್ರೀ ಮಾತ್ರ ಮನೆಯಲ್ಲಿದ್ದರು. ಮಗಳು ನಿಶಾ ಮೇಲಿನ ಕೋಣೆಯಲ್ಲಿ ಓದುತ್ತಿದ್ದರು. ತಾಯಿ ದಿವ್ಯಾಶ್ರೀ ಕೆಳಗಡೆ ಟಿ.ವಿ ನೋಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ದಿವ್ಯಾಶ್ರೀ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೆಳಗಡೆ ಶಬ್ಧ ಆಗಿದ್ದನ್ನು ಕೇಳಿಸಿಕೊಂಡ ನಿಶಾ ಕೆಳಗೆ ಬಂದು ನೋಡಿದಾಗ ತಾಯಿ ಕೊಲೆಯಾಗಿರುವುದನ್ನು ಕಂಡು ಚೀರಿದ್ದಾರೆ. ಪಕ್ಕದ ಮನೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ದಿವ್ಯಾಶ್ರೀ ಮೃತಪಟ್ಟಿದ್ದರು. ಶಿಕ್ಷಕಿ ಕೊಲೆ ಪ್ರಕರಣ ಬಡಾವಣೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
