ವಿಕೃತ ಕಾಮುಕನೊಬ್ಬ ಮಲಗಿದ್ದ ಮಗುವನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಹೊತ್ತೋಯ್ದು ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.
ಜೋಧ್‌ಪುರದಲ್ಲಿ ಚಿಂದಿ ಆಯುತ್ತ ಜೀವನ ಸಾಗಿಸುತ್ತಿದ್ದ ದಂಪತಿಗಳು ದೇವಸ್ಥಾನದ ಆವರಣದಲ್ಲಿ ತಮ್ಮ ಮಗುವಿನೊಂದಿಗೆ ಮಲಗಿದ್ದರು. ಈ ವೇಳೆ, ಕಾಮುಕನೊಬ್ಬ ಮಗುವನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಮಂಗಳವಾರ ಮುಂಜಾನೆ ಬೀದಿ ಬದಿ ಅಂಗಡಿ ಹಾಕುವ ಮಹಿಳೆ ಸ್ಥಳಕ್ಕೆ ಬಂದಾಗ, ಬಟ್ಟೆಯಲ್ಲಿ ಸುತ್ತಿದ್ದ ಮಗುವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗುವಿನ ದೇಹದ ಮೇಲೆ ಕಚ್ಚಿದ ಗುರುತುಗಳಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನೂ ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಬಾಲಕಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಫ್ಯೂಟೇಜ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.