ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿಗೆ ಒತ್ತು ಕೊಡುವುದನ್ನು ಕಡಿಮೆ ಮಾಡುತ್ತಿದೆ. ಕೃಷಿ ಸಲಕರಣೆಗಳು, ಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡದೆ ರೈತರನ್ನು ಕಡೆಗಣಿಸುತ್ತಿದೆ. ಇದು, ರೈತರು ಅದರಲ್ಲೂ ಯುವ ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಇದೂ ಕೂಡ ಆಹಾರ ಭದ್ರತೆಗೆ ಪ್ರಮುಖ ಸಾವಾಲೊಡ್ಡುತ್ತದೆ.
ಭಾರತದ ಆರ್ಥಿಕ ಹಣದುಬ್ಬರ ಹೆಚ್ಚುತ್ತಿರುವ ಸಮಯದಲ್ಲಿ ಆಹಾರ ಉತ್ಪನ್ನಗಳ ಬೆಲೆಗಳು ಗಗನ ಮುಟ್ಟುತ್ತಿವೆ. ಬೆಲೆ ಏರಿಕೆಯಿಂದ ಕೊಳ್ಳುವ ಶಕ್ತಿಯೂ ಕುಂದುತ್ತಿದೆ. ಇದು, ಬೆಳೆಯುವ ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರಲ್ಲಿ ಅಪೌಷ್ಟಿಕತೆ ಹೆಚ್ಚುವ ಭೀತಿಯನ್ನು ಎದುರಾಗಿಸಿದೆ. ಮಾತ್ರವಲ್ಲ, ಹವಾಮಾನ ಬದಲಾವಣೆಯಿಂದಾಗಿ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುವ ಸವಾಲೂ ನಮ್ಮ ಮುಂದಿದೆ.
1950ರಲ್ಲಿ ಕರೆಕೊಡಲಾದ ಹಸಿರು ಕಾಂತ್ರಿಯು ಆಹಾರ ಬೆಳೆಗಳ ಉತ್ಪಾದನೆಗೆ ಒತ್ತು ನೀಡಿದರೂ, ದೇಶದ ಅಪೌಷ್ಟಿಕತೆಯನ್ನು ಕಡಿಮೆ ಮಾಡುವಲ್ಲಿ ಯಾವುದೇ ಕೊಡುಗೆ ನೀಡಲಿಲ್ಲ. ಹಸಿರು ಕಾಂತ್ರಿಯ ಮೂಲಕ ಅಕ್ಕಿ, ಗೋಧಿ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗಿದ್ದು, ಈ ಬೆಳೆಗಳು ಉತ್ಪನ್ನವೂ ಹೆಚ್ಚಾಗಿದೆ. ಅಕ್ಕಿ-ಗೋಧಿಯನ್ನು ಭಾರತ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿಯೂ ಅಕ್ಕಿ-ಗೋಧಿಯನ್ನೇ ನೀಡಲಾಗುತ್ತಿದೆ. ಆದರೆ, ಬಡವರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಬೇಕಿರುವ ಬೇಳೆಕಾಳುಗಳು, ಹಣ್ಣುಗಳು ದೊರೆಯುತ್ತಿಲ್ಲ. ಆರ್ಥಿಕವಾಗಿ ಹಿಂದುಳಿದವರು ಬೆಲೆ ಏರಿಕೆಯ ಮಾರುಕಟ್ಟೆಯಲ್ಲಿ ಪೌಷ್ಟಿಕಾಂಶವುಳ್ಳ ಕಾಳುಗಳು, ಮಾಂಸ-ಮೊಟ್ಟೆ, ಹಣ್ಣು-ತರಕಾರಿಗಳನ್ನು ಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ.
2021ರಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆಯು (FAO) ಆಹಾರ ಭದ್ರತೆ ಮತ್ತು ಪೋಷಣೆ ಬಗ್ಗೆ ನಡೆಸಿದ ಅವಲೋಕನದಲ್ಲಿ ದೇಶದ 74.1% ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ. ಅಲ್ಲದೆ, 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ ಭಾರತವು 111ನೇ ಸ್ಥಾನ ಪಡೆದುಕೊಂಡಿದೆ. ಈ ಸ್ಥಾನವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. 2017ರಲ್ಲಿ 97ನೇ ಸ್ಥಾನದಲ್ಲಿದ್ದ ಭಾರತ 5 ವರ್ಷಗಳಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ.
ಜನಿಸಿದ ಮಕ್ಕಳಲ್ಲಿ ಬೆಳವಣಿಗೆಯು ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ ಮತ್ತು ‘ಪೋಷಣ್ ಅಭಿಯಾನ’ವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಆದರೆ, ಅದು ಫಲ ನೀಡುತ್ತಿಲ್ಲ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 1/3 ಭಾಗದಷ್ಟು (36%) ಮಕ್ಕಳು ಕಡಿಮೆ ತೂಕ ಮತ್ತು ಬೆಳವಣಿಗೆ ಕುಂಠಿತತೆ ಹಾಗೂ 67% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಈ ವರದಿಯು ಪ್ರಧಾನಿ ಮೋದಿ ಅವರ ‘ಸಬ್ ಕಾ ಸಾತ್ – ಸಬ್ ಕಾ ವಿಕಾಸ್’ನ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ವರದಿಯಿಂದ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳಿಗೆ ಮುಂದಾಗಬೇಕಿದ್ದ ಮೋದಿ ಸರ್ಕಾರ, ವರದಿ ನೀಡಿದವರ ವಿರುದ್ಧವೇ ಅಸಮಾಧಾನಗೊಂಡು, ವರದಿಯ ಉಸ್ತುವಾರಿ ವಹಿಸಿದ್ದ ‘ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್’ನ ನಿರ್ದೇಶಕರನ್ನು ಅಮಾನತುಗೊಳಿಸಿ, ತನ್ನ ಕೊಳಕನ್ನು ಮತ್ತಷ್ಟು ಪ್ರದರ್ಶಿಸಿತು.
ಭಾರತದ ಜನಗಣತಿಯ ಮುನ್ಸೂಚನೆಗಳ ಪ್ರಕಾರ 2050ರ ವೇಳೆಗೆ ಭಾರತದ ಜನಸಂಖ್ಯೆಯು 172.33 ಕೋಟಿ (172,33,80,000) ತಲುಪುವ ಸಾಧ್ಯತೆಗಳಿವೆ. ಆದರೆ, ವಾರ್ಷಿಕವಾಗಿ ಆಹಾರ ಉತ್ಪಾದನಾ ಪ್ರಮಾಣ, ಅದರಲ್ಲೂ ಪ್ರಮುಖವಾಗಿ ಧಾನ್ಯಗಳು-ಬೇಳೆಕಾಳುಗಳು, ಆಹಾರ ಧಾನ್ಯಗಳು, ತರಕಾರಿಗಳು, ಹಾಲು, ಮಾಂಸ ಮತ್ತು ಮೊಟ್ಟೆಗಳು ಕ್ರಮವಾಗಿ 2.65%, 4.9%, 2.84%, 4.65%, 4.58%, 11.57% ಮತ್ತು 5.82% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದಾಗ್ಯೂ, ಮಳೆ ಕೊರತೆ, ಅಂತರ್ಜಲ ಬತ್ತಿಹೋಗುತ್ತಿರುವುದು ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಕುಸಿತ ಎದುರಾಗಬಹುದಾದ ಅಪಾಯವನ್ನೂ ಸೂಚಿಸುತ್ತಿವೆ. ಇದು, ಆಹಾರ ಕೊರತೆಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮುಖ್ಯವಾಗಿ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಕ್ಕಿ-ಗೋಧಿ ಉತ್ಪನ್ನವೂ ಹಗ್ಗ-ಜಗ್ಗಾಟ ನಡೆಸುತ್ತಿದೆ. 2021ರಲ್ಲಿ ಗೋಧಿ ಉತ್ಪಾದನೆಯು 113 ಮಿಲಿಯನ್ ಟನ್ ಇದ್ದದ್ದು, 2024ರಲ್ಲಿ 105 ಮಿಲಿಯನ್ ಟನ್‌ಗೆ ಇಳಿಕೆಯಾಗಿದೆ. ಅಕ್ಕಿ ಉತ್ಪಾದನೆ 2021ರಲ್ಲಿ 120 ಮಿಲಿಯನ್ ಟನ್ ಇದ್ದದ್ದು, 105.6 ಮಿಲಿಯನ್ ಟನ್‌ಗೆ ಕುಸಿಯುವ ಸಾಧ್ಯತೆಗಳಿವೆ. ಜೊತೆಗೆ, 180 ಟನ್‌ಗಳನ್ನು ಮಾತ್ರವೇ ಏಕದಳ ಧಾನ್ಯಗಳ ಉತ್ಪಾದನೆಯಾಗುತ್ತಿದೆ.
ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆ ಕಂಡುಬರುತ್ತಿರುವ ಸಮಯದಲ್ಲಿಯೂ ಕಳಪೆ ಶೇಖರಣಾ ವ್ಯವಸ್ಥೆಯಿಂದಾಗಿ ಮತ್ತಷ್ಟು ಆಹಾರ ಧಾನ್ಯಗಳು ನಾಶವಾಗುತ್ತಿವೆ. ಸಂರಕ್ಷಣೆ ಮತ್ತು ಸಾರಿಗೆಯ ಸಮಯದಲ್ಲಿ ದೇಶದಲ್ಲಿ 40% ಕೃಷಿ ಉತ್ಪನ್ನಗಳು ಹಾಳಾಗುತ್ತಿವೆ ಎಂದು ಎಫ್‌ಎಒ ಅಂದಾಜಿಸಿದೆ. ಇದರಲ್ಲಿ, ಕೋಲ್ಡ್ ಸ್ಟೋರೇಜ್‌ಗಳ ಕೊರತೆಯಿಂದಾಗಿ 1.3 ಶತಕೋಟಿ (1/3ನೇ ಭಾಗ) ಟನ್ ಆಹಾರ ಪದಾರ್ಥಗಳು ನಾಶವಾಗುತ್ತಿವೆ. ಇದು, ಆಹಾರ ಕೊರತೆ ಮತ್ತು ಅಪೌಷ್ಟಿಕತೆಗೆ ಮತ್ತಷ್ಟು ಕೊಡುಗೆ ನೀಡುತ್ತಿದೆ.
ವರದಿಯ ಪ್ರಕಾರ, 2025ರ ವೇಳೆಗೆ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯು 11%ನಿಂದ 20%ಗೆ ಏರಿಕೆಯಾಗುವ ಸಾಧ್ಯತೆ ಇದೆ. ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಏರಿಕೆ, ಕಳಪೆ ಶೇಖರಣಾ ವ್ಯವಸ್ಥೆಗಳ ನಡುವೆ ಭಾರತವು ತನ್ನ ಜನರನ್ನು ಹೇಗೆ ಪೋಷಿಸುತ್ತದೆ ಎಂಬುದು ಗಂಭೀರ ಪ್ರಶ್ನೆಯಾಗಿ ಎದುರಾಗಿದೆ. ಈ ಪ್ರಶ್ನೆ ಕ್ಷುಲ್ಲಕವಾದುದ್ದಲ್ಲ, ಭಾರತವು ತನ್ನ ಜನರಿಗೆ ಅಗತ್ಯ ಪೌಪ್ಟಿಕಾಂಶವುಳ್ಳ ಆಹಾರವನ್ನು ಪೂರೈಸಲು 2030ರ ವೇಳೆಗೆ 311 ಮಿಲಿಯನ್ ಟನ್ ಮತ್ತು 2050ರ ವೇಳೆಗೆ 350 ಮಿಲಿಯನ್ ಏಕದಳ ಧಾನ್ಯಗಳನ್ನು ಉತ್ಪಾದಿಸಬೇಕಾಗಿದೆ.
ಇಷ್ಟು ಪ್ರಮಾಣದ ಆಹಾರವನ್ನು ಉತ್ಪಾದಿಸಲು ದೇಶವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಕೃಷಿಯನ್ನು ವಿಸ್ತರಿಸಬೇಕಿದೆ. ಅದರಲ್ಲೂ, ಅಕ್ಕಿ, ಗೋಧಿ, ರಾಗಿ, ಜೋಳಗಳ ಉತ್ಪಾದನೆಯನ್ನು ಹೆಚ್ಚಿಸಿದರೆ ಆಹಾರ ಕೇವಲ ಆಹಾರ ಪೂರೈಕೆ ಮಾಡಬಹುದು. ಆಗಲೂ, ಪೌಷ್ಟಿಕತೆಯ ಸವಾಲು ಇದ್ದೇ ಇರುತ್ತದೆ. ಹೀಗಾಗಿ, ಅಕ್ಕಿ-ಗೋಧಿಯ ಜೊತೆಗೆ ಏಕದಳ ಕಾಳುಗಳು, ಮಾಂಸ, ಮೀನು, ಕೋಳಿಯಂತಹ ಆಹಾರ ಉತ್ಪನ್ನಗಳನ್ನು ಮುಖ್ಯವಾಗಿ ಹೆಚ್ಚಿಸುವ ಅಗತ್ಯವಿದೆ. ಜೊತೆಗೆ, ಅಗತ್ಯ ವಸ್ತುಗಳ ಅದರಲ್ಲೂ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ತುರ್ತು ಅಗತ್ಯವಾಗಿದೆ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ದಮನಿತರ ಸಾಧನೆಗಳೇ ಮಾತನಾಡುವ ಕಾಲದಲ್ಲಿ
ಆಹಾರ ಉತ್ಪನ್ನಗಳ ಉತ್ಪಾದನೆಯೇ ಹೆಚ್ಚಾಗದಿದ್ದರೆ ಆಹಾರ ಬಿಕ್ಕಟ್ಟು ಎದುರಾಗುತ್ತದೆ. ಆಹಾರ ಉತ್ಪನ್ನಗಳು ಉತ್ಪಾದನೆಯಾಗಿ ಪೌಷ್ಟಿಕಾಂಶವುಳ್ಳ ಆಹಾರ ಉತ್ಪಾದನೆಯಲ್ಲಿ ಹಿಂದುಳಿದರೆ, ಪೌಷ್ಟಿಕತೆಯ ಸವಾಲು ಎದುರಾಗುತ್ತದೆ. ಪೌಷ್ಟಿಕಾಂಶಗಳು ಧಾನ್ಯಗಳ-ಮಾಂಸ-ಮೊಟ್ಟೆಗಳ ಉತ್ಪಾದನೆಯೂ ಹೆಚ್ಚಾಗಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಸಿಗದಿದ್ದರೆ, ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದೆಯೂ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಈ ಮೂರೂ ಆಯಾಮಗಳಲ್ಲಿ ಸರ್ಕಾರವು ಆಹಾರ ಉತ್ಪಾದನೆಯನ್ನು ನಿಭಾಯಿಸುವುದು ಮುಖ್ಯವಾಗಿದೆ.
ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿಗೆ ಒತ್ತು ಕೊಡುವುದನ್ನು ಕಡಿಮೆ ಮಾಡುತ್ತಿದೆ. ಕೃಷಿ ಸಲಕರಣೆಗಳು, ಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡದೆ ರೈತರನ್ನು ಕಡೆಗಣಿಸುತ್ತಿದೆ. ಇದು, ರೈತರು ಅದರಲ್ಲೂ ಯುವ ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಇದೂ ಕೂಡ ಆಹಾರ ಭದ್ರತೆಗೆ ಪ್ರಮುಖ ಸಾವಾಲೊಡ್ಡುತ್ತದೆ. ಕೃಷಿಗೆ ಒತ್ತು ಕೊಡುವುದು, ಯುವಜನರನ್ನು ಕೃಷಿಯತ್ತ ಮುಖ ಮಾಡುವಂತೆ ಮಾಡುವುದು ಕೂಡ ಕೇಂದ್ರ ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ.