ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧೀಜಿ ವೃತ್ತದಲ್ಲಿ ಡಿವಿಪಿ ನೇತ್ರತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ರೇಣುಕಾ ಅವರು ಮಾತನಾಡಿ, ʼದೇಶದ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸದ ಸರ್ಕಾರಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಮಹಿಳೆಯರಿಗೆ ಸುರಕ್ಷತೆಗೆ ಕಠಿಣ ಕಾನೂನು ಜಾರಿಗೊಳಿಸಬೇಕುʼ ಎಂದು ಒತ್ತಾಯಿಸಿದರು.

ಡಿವಿಪಿ ಜಿಲ್ಲಾ ಸಂಘಟನಾ ಸಂಚಾಲಕ ಅಕ್ಷಯಕುಮಾರ ಅಜಮನಿ ಮಾತನಾಡಿ, ʼಕೊಲ್ಕತ್ತಾದ ಆರ್ಜಿಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮಹಿಳಾ ತರಬೇತಿ ವೈದ್ಯೆ ಕೊಲೆ ನಡೆಸಿದ ಘಟನೆ ದೇಶದ ಎಲ್ಲ ವಲಯದ ಮಹಿಳೆಯರನ್ನು ಆತಂಕ ಸೃಷ್ಟಿಸಿದೆ. ಈ ಕ್ರೂರ ಕೃತ್ಯ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆಯ ನ್ಯಾಯಕ್ಕಾಗಿ ವೈದ್ಯರು ಸೇರಿದಂತೆ ಎಲ್ಲರೂ ತಮ್ಮ ಕೆಲಸ ಬದಿಗೊತ್ತಿ ಪ್ರತಿಭಟನೆ ನಡೆಸುತ್ತಿದ್ದಾರೆʼ ಎಂದರು.
ʼಈ ಅಮಾನವೀಯ ಕೃತ್ಯದಿಂದ ದೇಶದ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ರಕ್ಷಣೆ ಆತಂಕ ಮೂಡಿಸಿದೆ. ಹತ್ಯಗೈದ ದುಷಕರ್ಮಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸರ್ಕಾರ ಒಳಮೀಸಲಾತಿ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು: ಉಡಚಪ್ಪ ಮಳಗಿ
ಪ್ರತಿಭಟನೆಯಲ್ಲಿ ಪ್ರಮುಖರಾದ ಮಾದೇಶ ಚಲವಾದಿ, ದಾವೂದ್ ನಾಯ್ಕೊಡಿ, ಪಂಡಿತ್ ಯಲಗೋಡ, ಸದಾಶಿವ ಹೊಸಮನಿ , ಅಕ್ಷಯ್ ಹಾದಿಮನಿ, ವಿಶಾಲ್ ಪಾಟೀಲ್, ಸುಮಾ ತಡವಲಗ, ಯಮನೂರಿ ಮಾದರ, ಅನಿಲ್ ಹೊಸಮನಿ, ಪ್ರಕಾಶ್ ಹರಿಜನ್, ಸುದೀಪ್ ಹೊಸಮನಿ, ಸುದರ್ಶನ್ ಎಂ, ರಾಜಕುಮರ್ ಹೊಸಮನಿ,ಮುಸ್ಕಾಕ್ ಮಾಮದಾಪುರ, ಅಬ್ಬಜಿತ್ ದೊಡಮನಿ, ಪ್ರಕಾಶ್ ಚಾಲವಾದಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.