ಝೀಕಾ ವೈರಸ್ ಸೋಂಕಿನಿಂದ ಈಡಿಸ್ ಸೊಳ್ಳೆ ಕಚ್ಚಿದಾಗ ರೋಗಿಯ ರಕ್ತದಲ್ಲಿನ ವೈರಾಣು ಸೊಳ್ಳೆಯ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ, ವೈರಾಣು ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಪ್ರಯೋಗಾಲಯ ಪರೀಕ್ಷೆ, ಮಾಹಿತಿ, ಸಮಾಲೋಚನೆ ಮತ್ತು ಇತರ ಚಿಕಿತ್ಸೆಗಾಗಿ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಸೂಕ್ತ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು...
ಹೊಸ ಬಗೆಯ ತಂತ್ರಜ್ಞಾನ, ಆಧುನಿಕ ಸಂಶೋಧನೆಗಳು ಹೆಚ್ಚಿದಂತೆಲ್ಲ ವಿಶ್ವವು ದಿನದಿಂದ ದಿನಕ್ಕೆ ಚಿಕ್ಕದಾಗುತ್ತಿದೆ. ವೈಜ್ಞಾನಿಕತೆಯಿಂದ ಮನುಷ್ಯ ಸಂಪರ್ಕಗಳು ಕೂಡ ಹತ್ತಿರವಾಗುತ್ತಿವೆ. ಎಷ್ಟೇ ದೂರದಲ್ಲಿದ್ದರೂ ತಾಂತ್ರಿಕ ಆವಿಷ್ಕಾರಗಳು ಕೆಲವೇ ಗಂಟೆಗಳಲ್ಲಿ ಪ್ರತಿಯೊಬ್ಬರ ಕೈಸೇರುತ್ತಿದೆ. ಇದಕ್ಕೆ ರೋಗಾಣುಗಳು ಹೊರತಲ್ಲ. ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಈ ಸಾಂಕ್ರಮಿಕತೆಯ ಭಯಾನಕವನ್ನು ಅನುಭವಿಸಿದ್ದೇವೆ. ಭಾರತವು ಕೋವಿಡ್ನಿಂದ ಬಹುತೇಕ ಚೇತರಿಸಿಕೊಂಡ ನಂತರ ಹಲವು ಬಗೆಯ ವೈರಸ್ಗಳು ದೇಶದೊಳಗೆ ಕಾಲಿಡಲು ಪ್ರಾರಂಭಿಸಿವೆ. ಸದ್ಯ ಈ ರೋಗಾಣುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾಧಿಸುತ್ತಿರುವುದರಲ್ಲಿ ‘ಝೀಕಾ’ ವೈರಸ್ ಕೂಡ ಪ್ರಮುಖವಾಗಿದೆ. ಡೆಂಘೀ, ಮಲೇರಿಯಾ, ಚಿಕೂನ್ಗುನ್ಯಾ ರೀತಿಯಲ್ಲಿಯೇ ‘ಝೀಕಾ’ ರೋಗಾಣು ಕೂಡ ಸೊಳ್ಳೆಗಳಿಂದ ಹರಡುತ್ತದೆ.
ಉಗಾಂಡದಲ್ಲಿ ಶುರುವಾದ ವೈರಸ್
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯ ಪ್ರಕಾರ, ‘ಝೀಕಾ’ ವೈರಸ್ ಮೊದಲು ಶುರುವಾಗಿದ್ದು, 1947ರಲ್ಲಿ ಉಗಾಂಡಾ ದೇಶದಲ್ಲಿ. ರೀಸಸ್ ಮಕಾಕ್ ಎಂಬ ಮಂಗದಲ್ಲಿ ಮೊದಲಿಗೆ ಈ ವೈರಸ್ ಪತ್ತೆಯಾಯಿತು. ನಂತರ 1950ರ ದಶಕದಲ್ಲಿ ನೈಜೀರಿಯಾ ಸೇರಿದಂತೆ ಆಫ್ರಿಕಾದ ದೇಶಗಳಲ್ಲಿ ಮನುಷ್ಯರಲ್ಲಿ ಸೋಂಕು ಮತ್ತು ರೋಗದ ಲಕ್ಷಣಗಳು ಕಂಡುಬಂದವು. ‘ಈಡಿಸ್’ ಎಂಬ ಪ್ರಭೇದಕ್ಕೆ ಸೇರಿದ ಸೊಳ್ಳೆಗಳಿಂದ ಈ ಝೀಕಾ ವೈರಾಣು ಹರಡುತ್ತದೆ ಎಂದು ನಂತರ ಸಂಶೋಧನೆಗಳಿಂದ ಗೊತ್ತಾಯಿತು. 40 ನ್ಯಾನೋ ಮೀಟರ್ನಷ್ಟು ಸೂಕ್ಷ್ಮ ರಚನೆ ಹೊಂದಿರುವ ಪ್ಲಾವಿ ವೈರಸ್ ಪ್ರಭೇದಕ್ಕೆ ಸೇರಿನ ಆರ್ಎನ್ಎ ಗುಂಪಿನ ಝೀಕಾ ವೈರಾಣು ಇತ್ತೀಚಿನ ವರ್ಷಗಳಲ್ಲಿ ತನ್ನ ಆರ್ಭಟವನ್ನು ವಿಶ್ವಕ್ಕೆ ತೋರಿಸತೊಡಗಿದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ.
ಝೀಕಾ ವೈರಸ್ ಸೋಂಕಿನಿಂದ ಈಡಿಸ್ ಸೊಳ್ಳೆ ಕಚ್ಚಿದಾಗ ರೋಗಿಯ ರಕ್ತದಲ್ಲಿನ ವೈರಾಣು ಸೊಳ್ಳೆಯ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ, ವೈರಾಣು ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ರಕ್ತಪೂರಣ ಮತ್ತು ಲೈಂಗಿಕತೆಯಿಂದಲೂ ರೋಗ ಹರಡುತ್ತದೆ ಎಂದು ತಿಳಿಯಲಾಗಿದೆ. 2015ರಲ್ಲಿ ಝೀಕಾ ವೈರಸ್ ಭ್ರೂಣದ ಸುತ್ತಲಿರುವ ಅಮ್ನಿಯೋಟಿಕ್ ದ್ರವದಲ್ಲಿ ಕಂಡು ಬಂದಿದ್ದು ಪ್ಲಾಸೆಂಟಾ (ಹೊಕ್ಕಳ ಬಳ್ಳಿ) ಮೂಲಕವೂ ತಾಯಿಯಿಂದ ಮಗುವಿಗೆ ಸೇರುವ ಸಾಧ್ಯತೆಯಿರುತ್ತದೆ. ಆದರೆ ಎದೆಹಾಲಿನ ಮುಖಾಂತರ ವೈರಾಣು ಹರಡುವುದು ಇನ್ನೂ ದೃಢಪಟ್ಟಿಲ್ಲ. ಸೊಳ್ಳೆಗಳ ಕಡಿತದಿಂದ ಮನುಷ್ಯ ಅಥವಾ ಮಂಗಗಳ ದೇಹ ಸೇರಿದ ಬಳಿಕ ದೇಹದ ದುಗ್ದ ಗ್ರಂಥಿಗಳು ಅಥವಾ ರಕ್ತ ಸಂಚಾರದ ರಕ್ತನಾಳಗಳಿಗೆ ಈ ವೈರಾಣುಗಳು ಸೇರಿಕೊಂಡು ದೇಹದ ಶಕ್ತಿಯನ್ನು ಕುಂದಿಸತೊಡಗುತ್ತವೆ.
4 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು
2015ರ ನಂತರ ಹೆಚ್ಚು ಪಸರಿಸುತ್ತಿರುವ ಈ ರೋಗಾಣುವಿನಿಂದ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಬ್ರೆಜಿಲ್ನಲ್ಲಿ 4 ಸಾವಿರಕ್ಕೂ ಹೆಚ್ಚು ಮಕ್ಕಳು ಝೀಕಾ ವೈರಾಣು ಸೋಂಕಿನಿಂದಾಗಿ ಚಿಕ್ಕ ತಲೆ ಹೊಂದಿದ್ದು ಅವರ ಮೆದುಳಿನ ಬೆಳವಣಿಗೆ ಕುಂಠಿತವಾಗಿದೆ ಎಂದು ಅಲ್ಲಿನ ದೇಶದ ಆರೋಗ್ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವದ ಯಾವುದೋ ದೇಶದ ಯಾವುದೋ ಮೂಲೆಯಲ್ಲಿ ಬಂದ ರೋಗಾಣು ಭಾರತಕ್ಕೂ ಪೆಟ್ಟು ನೀಡಲು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ನಿಗಾವಹಿಸಿ ಮುಂಜಾಗರೂಕ ಕ್ರಮವನ್ನು ತಕ್ಷಣವೇ ಕೈಗೊಂಡಲ್ಲಿ ಮಾತ್ರ ರೋಗವನ್ನು ನಮ್ಮ ಹತ್ತಿರಕ್ಕೆ ಸುಳಿಯದಂತೆ ತಡೆಯಲು ಸಾಧ್ಯ.
ಈ ಸುದ್ದಿ ಓದಿದ್ದೀರಾ? ಕೇರಳ ರಾಜ್ಯವನ್ನು ಕಾಡುತ್ತಿರುವ ಮೆದುಳು ತಿನ್ನುವ ಅಮೀಬಾ ಎಂದರೇನು? ಇಲ್ಲಿದೆ ವಿವರ
ಭಾರತದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾಗಿದ್ದು 2016, ಗುಜರಾತ್ನಲ್ಲಿ. ನಂತರದ ವರ್ಷಗಳಲ್ಲಿ ಹಲವರಲ್ಲಿ ರೋಗಾಣು ಹರಡುತ್ತಿದ್ದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರಿಂದ ಪ್ರಾಣ ಹಾನಿ ಉಂಟಾಗುತ್ತಿರಲಿಲ್ಲ. ಆದರೆ ಈ ವರ್ಷ ಮಹಾರಾಷ್ಟ್ರದ ಪುಣೆ ಹಾಗೂ ಕರ್ನಾಟಕದಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದ 74 ವರ್ಷದ ವೃದ್ಧರೊಬ್ಬರು ಝೀಕಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಇವರು ಕಳೆದ ಜೂನ್ ತಿಂಗಳಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಝೀಕಾ ವೈರಾಣು ಬಾಧಿಸಿದ್ದು, ಜುಲೈ ತಿಂಗಳಲ್ಲಿ ಮೃತಪಟ್ಟಿದ್ದರು. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದ ಈ ವೃದ್ಧರಿಗೆ ಝೀಕಾ ವೈರಾಣು ಕೂಡ ತಗುಲಿತ್ತು.
ರೋಗದ ಪತ್ತೆ, ಲಕ್ಷಣಗಳು, ಚಿಕಿತ್ಸೆ
ಜ್ವರ, ಕೆಂಪಾದ ಕಣ್ಣುಗಳು, ತಲೆನೋವು, ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಇವು 2-7 ದಿನಗಳ ಅವಧಿಗೆ ಕಾಣಿಸಿಕೊಳ್ಳುತ್ತವೆ. ರೋಗ ಪತ್ತೆಯನ್ನು ರೋಗಿಯ ರಕ್ತದ ಮಾದರಿ, ಎಂಜಲು, ಮೂತ್ರದ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಅದೇ ರೀತಿ ಪಿಸಿಆರ್ ಪರೀಕ್ಷೆಯ ಮುಖಾಂತರವೂ ರೋಗಾಣು ಸೋಂಕಿನ ಲಕ್ಷಣ ಕಾಣಿಸಿದ 3ರಿಂದ 5 ದಿನಗಳ ನಂತರ ರೋಗವನ್ನು ಝೀಕಾ ವೈರಸ್ ಅಥವಾ ವೈರಸ್ನ ಆಂಟಿಜೆನ್ ಪತ್ತೆಹಚ್ಚಿ ಗುರುತಿಸಬಹುದು.
ಝೀಕಾ ವೈರಸ್ ಸೋಂಕು ಅಥವಾ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದಕಾರಣ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಸಾಮಾನ್ಯ ಜ್ವರವನ್ನು ಚಿಕಿತ್ಸೆ ಮಾಡಿದ ರೀತಿಯಲ್ಲಿಯೇ ಝೀಕಾ ರೋಗಾಣುವನ್ನು ಉಪಶಮನಗೊಳಿಸಲಾಗುತ್ತದೆ. ದದ್ದು, ಜ್ವರ ಅಥವಾ ಕೀಲು ನೋವಿನಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ದ್ರವಾಹಾರ ಸೇವಿಸಬೇಕು. ರೋಗಲಕ್ಷಣಗಳು ಉಲ್ಬಣಗೊಂಡರೆ, ರೋಗಿಗಳು ವೈದ್ಯಕೀಯ ಆರೈಕೆ ಮತ್ತು ಸಲಹೆಯನ್ನು ಪಡೆಯಬೇಕು. ಝೀಕಾ ಪ್ರಸರಣವಿರುವ ಪ್ರದೇಶಗಳಲ್ಲಿ ವಾಸಿಸುವ ಅಥವಾ ಝೀಕಾ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಗರ್ಭಿಣಿಯರು ಪ್ರಯೋಗಾಲಯ ಪರೀಕ್ಷೆ, ಮಾಹಿತಿ, ಸಮಾಲೋಚನೆ ಮತ್ತು ಇತರ ಚಿಕಿತ್ಸೆಗಾಗಿ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
ಮುಂಜಾಗೃತಾ ಕ್ರಮಗಳು
ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಹಗಲಿನ ಹೊತ್ತಿನಲ್ಲಿ ಅಥವಾ ಸಂಜೆಯ ವೇಳೆಯಲ್ಲಿ ಮಲಗಿದರೆ ಸೊಳ್ಳೆ ಪರದೆಯ ಹಾಕಿಕೊಂಡು ಮಲಗಬೇಕು. ಪ್ರಯಾಣಿಕರು ಮತ್ತು ಸೊಳ್ಳೆ ಉತ್ಪತ್ತಿ ಪ್ರದೇಶಗಳಲ್ಲಿ ವಾಸಿಸುವವರು ಸೊಳ್ಳೆ ಕಡಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೊಳ್ಳೆ ನಿಯಂತ್ರಕಗಳನ್ನು ಬಳಸಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ತುಂಬು ತೋಳಿನ ಮತ್ತು ಕಾಲಿನ ವಸ್ತ್ರಗಳನ್ನು ಧರಿಸಬೇಕು. ಸೊಳ್ಳೆಗಳಿಂದ ದೂರವಿರಲು ನಿರೋಧಕ ಕ್ರೀಮ್, ಸ್ಪ್ರೇಗಳನ್ನು ಬಳಸಬೇಕು. ಶಿಶುಗಳಿದ್ದರೆ, ಅವುಗಳ ತೊಟ್ಟಿಲು, ಹಾಸಿಗೆಗಳಿಗೆ ಅವಶ್ಯವಾಗಿ ಸೊಳ್ಳೆಪರದೆ ಕಟ್ಟಿ. ಸೊಳ್ಳೆಗಳ ಉಪಟಳ ತೀರಾ ಹೆಚ್ಚಿರುವ ಪ್ರದೇಶ ನಿಮ್ಮದಾಗಿದ್ದರೆ ಫಾಗಿಂಗ್ ಮಾಡುವುದು ಸಹಕಾರಿ. ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನ ನವಜಾತ ಶಿಶುಗಳಿಗೆ ಸೊಳ್ಳೆ ನಿವಾರಕಗಳನ್ನು ಬಳಸಬೇಡಿ. ಸಣ್ಣ ಮಕ್ಕಳಿಗೆ ಸೊಳ್ಳೆ ಪರದೆಗಳನ್ನು ಬಳಸಿ. ಗರ್ಭಿಣಿಯರಿಗೆ ಈ ಝೀಕಾ ವೈರಸ್ ಅಪಾಯಕಾರಿಯಾಗಿದೆ. ಮಹಿಳೆಯಿಂದ ಮಗುವಿಗೂ ಈ ಸೋಂಕು ಹರಡುತ್ತದೆ. ವೈರಸ್ ಜನಿಸುವ ಮಗುವಿನಲ್ಲಿ ಆರೋಗ್ಯ ತೊಂದರೆಗಳನ್ನು ತರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೂ ಸೋಂಕು ಹರಡುತ್ತದೆ.
ಈಡಿಸ್ ಸೊಳ್ಳೆಗಳು ಮನೆಗಳು, ಶಾಲೆಗಳು ಮತ್ತು ಕೆಲಸದ ಸ್ಥಳಗಳ ಸುತ್ತಲೂ ನೀರಿನ ಸಣ್ಣ ಸಂಗ್ರಹಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನೀರಿನ ಸಂಗ್ರಹದ ಪಾತ್ರೆಗಳನ್ನು ಮುಚ್ಚುವುದು, ಹೂವಿನ ಕುಂಡಗಳಲ್ಲಿ ನಿಂತಿರುವ ನೀರನ್ನು ತೆಗೆಯುವುದು ಮತ್ತು ಕಸ ಮತ್ತು ಬಳಸಿದ ಟೈರ್ಗಳನ್ನು ಆಗಾಗ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ಸಂತಾನೋತ್ಪತ್ತಿ ತಾಣಗಳನ್ನು ತೊಡೆದುಹಾಕುವುದು ಮುಖ್ಯವಾಗಿದೆ. ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಮಾಹಿತಿಗಳನ್ನು ಪಾಲಿಸಬೇಕು. ಝೀಕಾ ವೈರಸ್ ಇರುವಂಥ ಸ್ಥಳಗಳಿಗೆ ಅಥವಾ ಸೊಳ್ಳೆಯ ಉಪದ್ರ ಹೆಚ್ಚಿರುವಂಥ ಸ್ಥಳಗಳಿಗೆ ಪ್ರಯಾಣ ಮಾಡುವುದು ಅನಿವಾರ್ಯ ಅಲ್ಲದಿದರೆ, ಪ್ರಯಾಣವನ್ನು ಮುಂದೂಡಿ. ರೋಗ ಲಕ್ಷಣಗಳು ಕಂಡುಬಂದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ.