ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರವು ಅಳವಡಿಸಲು ಮುಂದಾಗಿದ್ದ ‘ಲ್ಯಾಟರಲ್ ಎಂಟ್ರಿ’ಯನ್ನು ಇದೀಗ ಹಿಂಪಡೆದುಕೊಂಡಿದೆ. ‘ಲ್ಯಾಟರಲ್ ಎಂಟ್ರಿ’ಯ ಜಾರಿಗೆ ಮುಂದಾಗಿದ್ದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಏನಾ ಆಗಲೀ, ಯಾವುದೇ ಬೆಲೆ ತೆತ್ತಾದರೂ ಬಿಜೆಪಿ ಷಡ್ಯಂತ್ರಗಳನ್ನು ವಿಫಲಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಲ್ಯಾಟರಲ್ ಎಂಟ್ರಿಯನ್ನು ಖಂಡಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನಾವು ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ರಕ್ಷಿಸುತ್ತೇವೆ. ಬಿಜೆಪಿ ರೂಪಿಸುವ ಲ್ಯಾಟರಲ್ ಎಂಟ್ರಿಯಂತಹ ಷಡ್ಯಂತ್ರಗಳನ್ನು ವಿಫಲಗೊಳಿಸುತ್ತೇವೆ” ಎಂದಿದ್ದಾರೆ.
“ಸರ್ಕಾರದ ಉನ್ನತ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ಖಾಸಗಿ ವಲಯದ ತಜ್ಞರು ಹಾಗೂ ಪರಿಣತರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಂಚು ಹೂಡುತ್ತಿದೆ. ‘ಲ್ಯಾಟರಲ್ ಎಂಟ್ರಿ’ ಅಳವಡಿಕೆಯು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರವಿದೆ” ಎಂದು ಆರೋಪಿಸಿದ್ದಾರೆ.
“ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನು ತೆರವುಗೊಳಿಸುತ್ತೇವೆ. ಜಾತಿ ಜನಗಣತಿ ನಡೆಸಿ, ಅದರ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುತ್ತೇವೆ” ಎಂದಿದ್ದಾರೆ.
ಆಗಸ್ಟ್ 17 ರಂದು UPSC ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಿತ್ತು. ಸರ್ಕಾರಿ ಇಲಾಖೆಗಳಲ್ಲಿ ಖಾಸಗಿ ವಲಯದವರನ್ನೂ ಒಳಗೊಂಡ ತಜ್ಞರನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡಿತ್ತು. ಈ ನಿರ್ಧಾರವು ಹಿಂದುಳಿತ ಮತ್ತು ತಳ ಸಮುದಾಯಗಳ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲಿದೆ ಎಂದು ವಿರೋಧ ವ್ಯಕ್ತವಾದ ಬಳಿಕ, ‘ಲ್ಯಾಟರಲ್ ಎಂಟ್ರಿ’ ಅಳವಡಿಕೆಯ ಜಾಹೀರಾತನ್ನು ಪ್ರಕಟಿಸದಂತೆ ಕೇಂದ್ರದ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದಿದ್ದಾರೆ.