ಬಸವಾದಿ ಶರಣರ ಸಿದ್ಧಾಂತ ತಿರುಚಿ ಪ್ರಕಟಿಸಿದ ʼವಚನ ದರ್ಶನʼ ಪುಸ್ತಕವನ್ನು ರಾಜ್ಯ ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.
ಬಸವಾದಿ ಶರಣರ ವಚನಗಳನ್ನು ತಮ್ಮ ಮನಬಂದಂತೆ ಪ್ರಕಟಿಸಿ ಶರಣರ ಮೂಲ ತತ್ವ ಸಂದೇಶಗಳಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎಂದು ʼವಚನ ದರ್ಶನʼ ಪುಸ್ತಕ ಮುಖಪುಟಕ್ಕೆ ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ʼಸಮಾಜದಲ್ಲಿ ನೆಲೆಯೂರಿದ್ದ ಮೌಢ್ಯ, ಕಂದಾಚಾರ ವ್ಯವಸ್ಥೆಯನ್ನು ಧಿಕ್ಕರಿಸಿ, ಬಸವಾದಿ ಶರಣರು ಸಮಸಮಾಜ ನಿರ್ಮಾಣಕ್ಕಾಗಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ವೇದ, ಶಾಸ್ತ್ರ, ಆಗಮ, ಪುರಾಣ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಬಂದದ್ದಲ್ಲ. ಶರಣರ ಅನುಭಾವದಿಂದ ರಚನೆಯಾಗಿರುವಂತಹದ್ದು. ಆದರೆ ʼವಚನ ದರ್ಶನʼ ಪುಸ್ತಕ ಪ್ರಕಟಿಸುವ ಮೂಲಕ ಶರಣರ ವಚನಗಳ ಆಶಯಗಳನ್ನು ಅಡಗಿಸುವ ಷಡ್ಯಂತ್ರ ನಡೆಯುತ್ತಿದೆʼ ಎಂದು ಆಪಾದಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯಪಾಲರ ನಡೆ ಖಂಡಿಸಿ ನಾಳೆ (ಆ.21) ಪಂಜಿನ ಮೆರವಣಿಗೆಗೆ ಶೋಷಿತ ಸಮುದಾಯಗಳ ಒಕ್ಕೂಟ ಕರೆ
ಪ್ರತಿಭಟನೆಯಲ್ಲಿ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೊಂಡಿ, ಬಸವೇಶ್ವರ ಸ್ವಾಮಿಜಿ, ಸಾಹಿತಿ ಟಿ.ಆರ್.ಚಂದ್ರಶೇಖರ, ಕೆಚ್ಚೆದೆಯ ಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಭದ್ರಣ್ಣವರ, ಜಾಗತಿಕ ಲಿಂಗಾಯತ ಮಹಾಸಭಾ ಶಂಕ್ರಪ್ಪ ಬೇವೂರ,ವೀರಭದ್ರಪ್ಪ, ಸಂಜೀವ್ ಕಡಗದ, ಶಿವಕುಮಾರ ಸ್ವಾಮಿ, ಪ್ರಕಾಶ ಹೆಬ್ಬಳ್ಳಿ, ಎಂ.ಎಸ್.ಮಂಜುನಾಥ್, ಮಂಡ್ಯ ಲಿಂಗಾಯತ ಮಹಾಸಭಾ ಟ್ರಸ್ಟ್‌ನ ಎಂ.ಎಸ್. ಮಂಜುನಾಥ್, ಶಿವಕುಮಾರ ಸ್ವಾಮಿ, ನಾಗರಾಜ ಮೂರ್ತಿ, ಮಹಾಬಲೇಶ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.