ಚಳುವಳಿಯಲ್ಲಿ ಪ್ರಯೋಗಶೀಲ ಗುಣಧರ್ಮವಿರಬೇಕು. ಇಲ್ಲವಾದರೆ ಚಳುವಳಿಕಾರರಲ್ಲಿ ಸನಾತನಿ ಗುಣಧರ್ಮ ಮೊಳಕೆಯೊಡೆದು ಚಳುವಳಿ ದುರ್ಬಲವಾಗುವ ಅಪಾಯವಿದೆ. ಪ್ರತಿಯೊಬ್ಬ ಕಾರ್ಮಿಕನಲ್ಲಿ ಪ್ರಯೋಗಶೀಲತೆಯನ್ನು ಬಿತ್ತಲು ಇಂತಹ ಅಧ್ಯಯನ ಶಿಬಿರಗಳು ಬಹುಮುಖ್ಯವಾಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಅವರು ದಾವಣಗೆರೆ ಜಿಲ್ಲೆ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ನಾಯಕತ್ವ ವಿಕಸನ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಧರ್ಮಾಂಧ, ಕೋಮುವಾದಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಈ ರೀತಿಯ ಅಧ್ಯಯನ ಶಿಬಿರಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಹಾಗೂ ಕಾರ್ಮಿಕರು ಇದರಲ್ಲಿ ಪಾಲ್ಗೊಳ್ಳಬೇಕು. ಕಾರ್ಮಿಕರ ಸಂಕೇತ ಕೆಂಪು ಬಣ್ಣವೇ ಹೊರತು ಕೇಸರಿ ಅಲ್ಲ. ಕೆಂಪು ಬಣ್ಣ ಕ್ರಾಂತಿ, ಶಾಂತಿ, ಉತ್ಕೃಷ್ಟತೆಯ ಸಂಕೇತವಾದರೆ ಕೇಸರಿ ಬಣ್ಣ ಗುಲಾಮಗಿರಿಯ ಸಂಕೇತವಾಗಿದೆ. ಇದನ್ನು ಕಾರ್ಮಿಕರು ಅರ್ಥೈಸಿಕೊಂಡು ಉತ್ಕೃಷ್ಟ ಚಿಂತನೆಗಳ ಮೂಲಕ ಚಳುವಳಿಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಸುವಂತೆ ಕರೆ ನೀಡಿದರು.

ಎಐಟಿಯುಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ಸಹಕಾರದೊಂದಿಗೆ ಮೂರು ದಿನಗಳ ನಾಯಕತ್ವ ವಿಕಸನ ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಕಾರ್ಮಿಕರು ಸಂಘಟನೆ ಮತ್ತು ಚಳುವಳಿಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ವಿವಿಧ ವಿಷಯಗಳ ಮೇಲೆ ಪ್ರೊ.ಎ.ಬಿ.ರಾಮಚಂದ್ರಪ್ಪ, ಡಾ.ಸಿದ್ದನಗೌಡ ಪಾಟೀಲ್, ಸತ್ಯಾನಂದ, ಅಮ್ಜದ್ ಮುಂತಾದ ವಿಷಯ ಪರಿಣಿತರು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ. ಶಿಬಿರದ ಉಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ವಹಿಸಿದ್ದರು. ವೇದಿಕೆಯಲ್ಲಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಉಮೇಶ್ ಅವರಗೆರೆ, ಕಾರ್ಯದರ್ಶಿ ಅವರಗೆರೆ ಚಂದ್ರು, ಅಂಗನವಾಡಿ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ಬಿಸಿಯೂಟ ಫೆಡರೇಶನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ದಿವ್ಯಾ ಬಿರಾದಾರ, ಎಐಟಿಯುಸಿ ಗದಗ ಜಿಲ್ಲಾಧ್ಯಕ್ಷ ಎಂ.ಐ.ನವಲೂರು, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಅವರಗೆರೆ ವಾಸು, ಅಂಗನವಾಡಿ ಫೆಡರೇಶನ್‌ನ ಎಂ.ಬಿ.ಶಾರದಮ್ಮ, ಸಿಪಿಐ ಚನ್ನಗಿರಿ ತಾಲೂಕು ಅಧ್ಯಕ್ಷ ಮೊಹಮ್ಮದ್ ರಫೀಕ್, ದಾದಾಪೀರ್ ಮತ್ತು ಇತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
