ಕಾರ್ಖಾನೆಗಳಲ್ಲಿ ಸಂಭವಿಸುವ ದುರಂತಗಳಿಂದ ಕಾರ್ಮಿಕರ ರಕ್ಷಣೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ಮಾನವ ಹಕ್ಕುಗಳ ಆಯೋಗದ ನಿಯೋಗ ತಿಳಿಸಿತು.
ಅಗ್ನಿ ದುರಂತ ನಡೆದಿದ್ದ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಬಳಿಕ ಮಾತನಾಡಿದ ಮಾನವ ಹಕ್ಕುಗಳ ಆಯೋಗದ ಸದಸ್ಯರು, ಕಾರ್ಖಾನೆಗಳಲ್ಲಿ ಸಂಭವಿಸುವ ದುರಂತಗಳಿಂದ ಕಾರ್ಮಿಕರ ರಕ್ಷಣೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ಕಾರ್ಮಿಕರಿಗೆ ಅಗತ್ಯ ರಕ್ಷಣಾತ್ಮಕ ಪರಿಕರಗಳನ್ನು ನೀಡಿರುವ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
“ಕಾರ್ಮಿಕರು ಗಾಯಗೊಂಡಲ್ಲಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ವೈದ್ಯಕೀಯ ಕಿಟ್ ಕಡ್ಡಾಯವಾಗಿ ಇರಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು” ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಸೂಚನೆ ನೀಡಿದರು.

ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಬಹಳಷ್ಟು ಅನಾನುಕೂಲಗಳು ಇರುತ್ತವೆ. ಅಂಥವುಗಳನ್ನು ಕೂಡ ಪರಿಶೀಲಿಸಬೇಕು. ದುರಂತ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲಾಡಳಿತದಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಯ ವಸತಿನಿಯಗಳಲ್ಲಿ ಹಕ್ಕು ಉಲ್ಲಂಘನೆಯಾದಲ್ಲಿ ಕೂಡಲೇ ದೂರು ನೀಡಬೇಕು. ಬಸ್ ನಿಲ್ದಾಣ, ವಸತಿ ನಿಲಯಗಳು, ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಪ್ರಕರಣಗಳ ಹೆಚ್ಚಾಗಿ ಕಂಡು ಬರುತ್ತವೆ. ಪ್ರಕರಣಗಳ ಮಾಹಿತಿ ಬಂದರೆ ತಕ್ಷಣವೇ ಸಂಬಂಧಿಸಿದ ತಹಶೀಲ್ದಾರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಂದ ಮಾನವ ಹಕ್ಕುಗಳು ಆಯೋಗದಿಂದ ಜಾಗೃತಿ, ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು. ಬಳಿಕ ವಿವಿಧ ಇಲಾಖೆಗಳ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದೂ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ಚಳುವಳಿಯಲ್ಲಿ ಪ್ರಯೋಗಶೀಲ ಗುಣಧರ್ಮವಿರಬೇಕು: ಪ್ರೊ.ಎ.ಬಿ.ರಾಮಚಂದ್ರಪ್ಪ
ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ತಹಶೀಲ್ದಾರ್ ಬಸವರಾಜ ನಾಗರಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೂರ್ಯನಾರಾಯಣ ಭಟ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
