ಮೌಢ್ಯ ತೊಲಗಿಸಲು ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವಿಜ್ಞಾನದ ಅರಿವು ಮೂಡಿಸಬೇಕಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ ಹೇಳಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ತಂತ್ರಜ್ಞಾನ, ಶಾಲಾ ಶಿಕ್ಷಣ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು, ಕೌಶಲ್ಯ, ಸಂಶೋಧನೆ, ಪ್ರಾಯೋಗಿಕ ಕಲಿಕೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಟೆಲಿಸ್ಕೋಪ್ ನೀಡಲಾಗುತ್ತಿದೆ. ಮೌಢ್ಯ ಹೋಗಲಾಡಿಸಲು ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಅರಿವು ಮೂಡಿಸಬೇಕಾಗಿದೆ. ವಿಜ್ಞಾನ ಇಲ್ಲದಿದ್ದರೆ ನಾವು ಹೊಸ ಪ್ರಯೋಗಗಳನ್ನು ಹಾಗೂ ತಂತ್ರಜ್ಞಾನ ರೂಪಿಸಲು ಸಾಧ್ಯವಿರಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾದರೆ ವಿಜ್ಞಾನದ ಮಾಹಿತಿ ಅಗತ್ಯʼ ಎಂದು ತಿಳಿಸಿದರು.
ಸಂಸದ ಕುಮಾರ್ ನಾಯಕ ಮಾತನಾಡಿ, ʼವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸೃಜನಶೀಲತೆ ಬೆಳೆಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿರಲು ಅವರನಗನು ಸಮಸ್ಯೆಗಳ ಪರಿಹಾರಕ್ಕೆ ಪ್ರಾಯೋಗಿಕವಾಗಿ ಪ್ರಶ್ನೆ, ಚರ್ಚೆ, ಸಂಶೋಧನೆ ಚಟುವಟಿಕೆಗಳಿಗೆ ಒತ್ತು ಕೊಟ್ಟು ಪ್ರೇರೇಪಿಸಬೇಕು. ವಿಜ್ಞಾನದ ಅಗತ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಅವರನ್ನು ಸಜ್ಜುಗೊಳಿಸಬೇಕು. ಮಕ್ಕಳಲ್ಲಿ ಮೌಢ್ಯ ತೊಲಗಿದರೆ ವಿಜ್ಞಾನ ಬೆಳೆಯುತ್ತದೆʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ.ಬಡಿಗೇರ್, ಕಾಂಗ್ರೆಸ್ ಮುಖಂಡ ಜಯಣ್ಣ, ಕೆ.ಶಾಂತಪ್ಪ ರುದ್ರಪ್ಪ ಅಂಗಡಿ, ಸೈಯದ್ ಹಫೀಜುಲ್ಲಾ ಸೇರಿದಂತೆ ವಿಜ್ಞಾನ ಕೇಂದ್ರದ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
ವರದಿ: ಹಫೀಜುಲ್ಲ
