ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದ ಪರಿವರ್ತನೆಗಾಗಿ ಶ್ರಮಿಸಿದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ತತ್ವಾದರ್ಶಗಳು ಮುನ್ನಡೆಸಬೇಕು ಎಂದು ಸಂಸದ ಜಿ.ಕುಮಾರ್ ನಾಯಕ್ ಹೇಳಿದರು.
ನಗರದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ʼದೇವರಾಜ ಅರಸು ಕೈಗೊಂಡಿರುವ ಅಭಿವೃದ್ಧಿಗಳು ಕಾರ್ಯಗಳು ಇಂದಿಗೂ ಜನಮನದಲ್ಲಿವೆ. ಅವರು ಹಾಕಿಕೊಟ್ಟ ಮಾರ್ಗ ಎಂದಿಗೂ ಮರೆಯಬಾರದು. ಉಳುವವನೇ ಭೂ ಒಡೆಯ ಎಂಬ ಮಹತ್ವದ ಯೋಜನೆ ಜಾರಿಗೆ ತರುವ ಮೂಲಕ ಬಡ ರೈತರ ಹೃದಯದಲ್ಲಿ ಇಂದಿಗೂ ಶಾಶ್ವತವಾಗಿ ನೆಲೆಸಿದ್ದಾರೆ. ಬಡತನ ನಿರ್ಮೂಲನೆ, ಸಮಾನತೆ ಸೇರಿದಂತೆ ಸಾಮಾಜಿಕ ಬದಲಾವಣೆಗೆ ಅರಸು ನೀಡಿದ ಕೊಡುಗೆ ಅನನ್ಯʼ ಎಂದು ಸ್ಮರಿಸಿದರು.
ಸಣ್ಣ ನೀರಾವರಿ ಸಚಿವ ಎಸ್.ಎಸ್. ಬೋಸರಾಜ್ ಮಾತನಾಡಿ, ʼದೇವರಾಜ ಅರಸು ಕರ್ನಾಟಕದ ಅಪರೂಪದ ರಾಜಕಾರಣಿ. ಬಡವರಿಗೆ ರೈತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟ ಕಾರಣ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಅರಸು ಅವರು ಹಾವನೂರು ಆಯೋಗ ವರದಿ ಜಾರಿಗೊಳಿಸಿ ಮೀಸಲಾತಿ ಜಾರಿಗೆ ತಂದಿದ್ದರುʼ ಎಂದು ನುಡಿದರು.
ʼಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾಸಿದ್ಧವಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ಮೀಸಲಿಡಲಾಗಿದೆʼ ಎಂದರು .
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ʼದೇವರಾಜ ಅರಸು ಅವರ ಕರ್ಮಭೂಮಿಯಾದ ಮೈಸೂರಿನ ಹುಣಸೂರಿನಲ್ಲಿ ಸಹಾಯಕ ಆಯುಕ್ತನಾಗಿ ಕಾರ್ಯನಿರ್ವಹಿಸಿದ್ದು ನನಗೆ ಹೆಮ್ಮೆಯಿದೆ. ಅರಸು ತಮ್ಮ ಅವಧೀಯಲ್ಲಿ ಅನೇಕ ಕ್ರಾಂತಿಕಾರಿ ಬೆಳವಣಿಗೆಯ ಕೆಲಸ, ಕಾರ್ಯಗಳು ನಡೆದಿವೆ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದ್ದು, ಮಲ ಹೊರುವ ಪದ್ಧತಿ ನಿಷೇಧಿಸಿ ಜೀತಪದ್ದತಿ ನಿರ್ಮೂಲನೆ ಮಾಡಿದರುʼ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು .
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ವಾಯ್.ವಾಲ್ಮೀಕಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಜಲ್ದಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ, ಉಪನ್ಯಾಸಕರಾಗಿ ಮುಕ್ಕನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ದಂಡಪ್ಪ ಬಿರಾದರ ನಿರೂಪಿಸಿದರು.
