ಕೊಡಗು ಜಿಲ್ಲೆಯ ಕುಶಾಲ್ ನಗರ ತಾಲೂಕಿನಾದ್ಯಂತ ಅಕ್ರಮ ಸಕ್ರಮ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಎಂದು ಕಾಮ್ರೇಡ್ ನಿರ್ವಾಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕುಶಾಲನಗರ ತಾಲೂಕು ಕಚೇರಿ ಎದುರು ಎಐಕೆಕೆಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, “ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳು ವಿಲೇವಾರಿಯಾಗದೆ ಕಡತದಲ್ಲೇ ಧೂಳು ಹಿಡಿಯುತ್ತಿವೆ. ದಲಿತರ ಭೂಮಿ ಕಬಳಿಕೆ, ರಸ್ತೆ ಸಮಸ್ಯೆಗಳು ಇಂದಿಗೂ ಪರಿಹಾರ ಕಂಡಿಲ್ಲ” ಎಂದು ಆರೋಪಿಸಿದರು.
“ಕುಶಾಲನಗರ ಹೊಸ ತಾಲೂಕು ಆಗಿದ್ದು ಹಿಂದೆ ಸೋಮವಾರಪೇಟೆಗೆ ಸೇರಿತ್ತು. ಆದರೆ ದಲಿತರ, ಬಡವರ ಅಕ್ರಮ ಸಕ್ರಮ ಸಾಗುವಳಿ 57 ಹಾಗೂ 94ಸಿ ಅರ್ಜಿಗಳು ವಿಲೇವಾರಿಯಾಗದೆ ಕಡತಗಳು ಧೂಳು ಹಿಡಿಯುತ್ತಿವೆ. ತಾಲೂಕು ಬದಲಾದರೂ ಬಡವರ ಕಷ್ಟ ತೀರಲಿಲ್ಲ. ಹೋರಾಟಗಳು ನಡೆಯುತ್ತಲಿವೆ, ನಡೆಯುತ್ತಲೇ ಇರುತ್ತವೆ. ಅಧಿಕಾರಿಗಳು ಬರುತ್ತಾರೆ, ಮನವಿ ಪಡೆಯುತ್ತಾರೆ, ನಿಮ್ಮ ಕೆಲಸ ಮಾಡುತ್ತೇವೆಂದು ಹೇಳುತ್ತಾರೆ, ಅಲ್ಲಿಗೆ ಮುಗಿಯಿತು. ಇನ್ನ ಹೇಳೋರು! ಕೇಳೋರು ಏನಾಯಿತು ಅನ್ನುವುದು ಯಾರಿಗೂ ತಿಳಿಯಲ್ಲ ಕೆಲಸಗಳು ಅಲ್ಲಿಗೇ ನಿಲ್ಲುತ್ತವೆ” ಎಂದು ಖೇದ ವ್ಯಕ್ತಪಡಿಸಿದರು.

“ದಲಿತರ ಭೂಮಿ ಕಬಳಿಕೆಯಾಗಿದೆ. ಸತ್ತರೆ ಹೂಳಲೂ ಜಾಗವಿಲ್ಲ, ಓಡಾಡಲು ರಸ್ತೆ ಇಲ್ಲ. ಮತ್ತೆ ನಾವು ಬದುಕುವುದಾದರೂ ಹೇಗೆ?. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಮನಸ್ಸು ಮಾಡಿ ಬಡವರ, ಶೋಷಿತರ, ದಲಿತರ ಪರವಾಗಿ ಕಾನೂನು ರೀತ್ಯಾ ಕೆಲಸ ಮಾಡಬೇಕು” ಎಂದು ಮನವಿ ಮಾಡಿದರು.
“ತಾಲೂಕಿನಲ್ಲಿ ಬಾಕಿ ಇರುವ ದಲಿತರ ಬಡವರ ಅಕ್ರಮ ಸಕ್ರಮ ಫಾರಂ ನಂ. 57 94ಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಬಡವರ ತುಂಡು ಭೂಮಿಯನ್ನು ಪೈಸಾರಿ ಎಂದು ಆರ್‌ಟಿಸಿಗೆ ಸೇರಿಸಿರುವುದನ್ನು ರದ್ದುಗೊಳಿಸಬೇಕು. ಹೊಸಕೋಟೆಯಲ್ಲಿ 15 ಕುಟುಂಬಳು ವಾಸವಿರುವ ದಲಿತರಿಗೆ ರಸ್ತೆ ಬಿಡಿಸಿಕೊಡಬೇಕು. ಭುವನಗಿರಿ ಮತ್ತು ಸೀಗೆ ಹೊಸೂರು ಸರ್ವೆ ನಂ 35 ಮತ್ತು 2/10ರ ದಲಿತರ ಭೂಮಿಯ ಮೇಲೆ ಉಳ್ಳವರಿಗೆ ರಸ್ತೆ ಬಿಡಿಸಿಕೊಡುವುದನ್ನು ಕೈ ಬಿಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀಳಗಿ | ಸಿದ್ದರಾಮಯ್ಯ ಕಳಂಕಿತ ವ್ಯಕ್ತಿ ಆಗಲು ಸಾಧ್ಯವಿಲ್ಲ: ಕಾಂಗ್ರೆಸ್ ಮುಖಂಡ ಎಸ್ ಟಿ ಪಾಟೀಲ್
“ದೊಡ್ಡತ್ತೂರು ಗ್ರಾಮದ ದಲಿತ ಸಿದ್ದಯ್ಯನ ಸರ್ವೆ ನಂ. 30/5ರ ಎರಡು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸವರ್ಣೀಯರಿಂದ ತಕ್ಷಣ ಬಿಡಿಸಿಕೊಡಬೇಕು. ಸರ್ಕಾರಿ ಭೂಮಿಯನ್ನು ಉಳ್ಳವರು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡಬೇಕು. ಇನ್ನು 15 ದಿನಗದೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಮುತ್ತಣ್ಣ, ಜವರಯ್ಯ, ಎಚ್ ಜಿ ಪ್ರಕಾಶ್ ಇದ್ದರು.
