ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ತಮ್ಮ ಅಧಿಕಾರಾವಧಿಯ ಐದು ವರ್ಷಗಳಲ್ಲಿ ‘ಮೊಟ್ಟೆ ಪಫ್ಸ್’ಗಾಗಿ ಬರೊಬ್ಬರಿ 3.6 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಿನಕ್ಕೆ 993 ‘ಮೊಟ್ಟೆ ಪಫ್ಸ್’ಗಳಂತೆ 5 ವರ್ಷಗಳಲ್ಲಿ 18.12 ಲಕ್ಷ ಪಫ್ಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆರೋಪವನ್ನು ಜಗನ್ ತಳ್ಳಿ ಹಾಕಿದ್ದಾರೆ.
ಆಂಧ್ರಪ್ರದೇಶ ರಾಜಕೀಯವು ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಸೋತು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಟಿಡಿಪಿ ಅಧಿಕಾರಕ್ಕೆ ಬಂದ ಮೇಲೆ ಜಗನ್ ಕಾಲದ ಆಪಾದಿತ ಅಕ್ರಮಗಳನ್ನು ಒಂದೊಂದಾಗಿ ಬಯಲುಗೊಳಿಸುತ್ತಿದೆ. ಇದೀಗ, ‘ಮೊಟ್ಟೆ ಪಫ್ಸ್’ ಕತೆ ಹೊರಬಿದ್ದಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದೆ.
ಜಗನ್ ಮೋಹನ್ ರೆಡ್ಡಿ ಅವರು ‘ಮೊಟ್ಟೆ ಪಫ್ಸ್’ಗಾಗಿ 3.6 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಜಗನ್ ಮೋಹನ್ ರೆಡ್ಡಿ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಪ್ರತಿ ದಿನ 993 ‘ಮೊಟ್ಟೆ ಪಫ್ಸ್’ಗಳನ್ನು ಖರೀದಿಸಲಾಗಿದೆ. 5 ವರ್ಷಗಳಲ್ಲಿ 18 ಲಕ್ಷ ಪಫ್ಸ್‌ಗಳನ್ನು ಖರೀದಿಸಲಾಗಿದ್ದು, 3.62 ಕೋಟಿ ಖರ್ಚು ಮಾಡಲಾಗಿದೆ. ವರ್ಷಕ್ಕೆ ಪಫ್ಸ್‌ಗಾಗಿಯೇ 72 ಲಕ್ಷ ರೂ. ವೆಚ್ಚವಾಗಿದೆ” ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ಜಗನ್ ಅವರ ವೈಎಸ್‌ಆರ್ ಕಾಂಗ್ರೆಸ್ ತಳ್ಳಿ ಹಾಕಿದೆ. “ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಮಾಹಿತಿಯ ಮೂಲವನ್ನು ಉಲ್ಲೇಖಿಸದೆ ಪತ್ರಕರ್ತರು ಆಧಾರರಹಿತ ಆರೋಪ ಮಾಡುತ್ತಿರುವುದು ನಿಜಕ್ಕೂ ನಿರಾಶೆ ಮೂಡಿಸುತ್ತದೆ. ಪುರಾವೆಗಳಿಲ್ಲದೆ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ. ಮಾಧ್ಯಮಗಳೂ ಇಂತಹ ವದಂತಿಗಳಿಗೆ ಆದ್ಯತೆ ನೀಡುತ್ತಿರುವುದು ವಿಷಾದನೀಯ” ಎಂದಿದೆ.
ಈ ಹಿಂದೆ, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಮುದ್ರ ತೀರದ ರುಷಿಕೊಂಡ ಬೆಟ್ಟದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ‘ವೈಯಕ್ತಿಕ ಅಗತ್ಯ’ಕ್ಕಾಗಿ 560 ಕೋಟಿ ರೂ. ಸರ್ಕಾರಿ ಹಣದಲ್ಲಿ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅರಮನೆಯಲ್ಲಿ ಐಷಾರಾಮಿ ಬಾತ್‌ಟಬ್, ದುಬಾರಿ ಪೀಠೋಪಕರಣಗಳು, ಹೈ-ಎಂಡ್ ಸ್ಪಾ ರೂಮ್, ಕೆಫೆಟೆರಿಯಾ, ಐಷಾರಾಮಿ ಊಟದ ಕೋಣೆ – ಟೇಬಲ್‌ಗಳು, 12 ಕೋಣೆಗಳು ಹಾಗೂ ಬೃಹತ್ ಸಭಾಂಗಣವನ್ನು ಹೊಂದಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಜಗನ್ ತಮ್ಮ ವಿಲಾಸಿ ಜೀವನಕ್ಕೆ ಅರಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿತ್ತು.
ಈ ವರದಿ ಓದಿದ್ದೀರಾ?: ಜಗನ್ vs ನಾಯ್ಡು | 560 ಕೋಟಿ ವೆಚ್ಚದ ‘ರುಷಿಕೊಂಡ ಅರಮನೆ’ ವಿವಾದವೇನು?
”ರುಷಿಕೊಂಡ ಅರಮನೆಯಲ್ಲಿ ಜಗನ್ ಮೋಹನ್ ರೆಡ್ಡಿಗೆ ಒದಗಿಸಲಾದ ಐಷಾರಾಮಿ ಸೌಕರ್ಯಗಳು ಆತಂಕಕಾರಿಯಾಗಿವೆ. 560 ಕೋಟಿ ರೂ. ಸರ್ಕಾರಿ ಹಣವನ್ನು ಜಗನ್ ಖಾಸಗಿ ಬದುಕಿಗಾಗಿ ವ್ಯಯಿಸಲಾಗಿದೆ. ಈ ವೆಚ್ಚದಲ್ಲಿ ಅಂದಾಜು 40 ಲಕ್ಷ ರೂಪಾಯಿ ಮೌಲ್ಯದ ಬಾತ್‌ಟಬ್ ಮತ್ತು 10 ರಿಂದ 12 ಲಕ್ಷ ರೂಪಾಯಿ ಮೌಲ್ಯದ ಕಮೋಡ್ ಸೇರಿವೆ. ಹೆಚ್ಚುವರಿಯಾಗಿ, ಅರಮನೆಯು ಐಷಾರಾಮಿ ಪೀಠೋಪಕರಣಗಳನ್ನು ಹೊಂದಿದೆ. ಅತ್ಯಾಧುನಿಕ ಮಸಾಜ್ ಟೇಬಲ್ ಇರುವ ಸ್ಪಾ ರೂಮ್ ಅನ್ನು ಹೊಂದಿದೆ” ಎಂದು ಟಿಡಿಪಿ ಹೇಳಿತ್ತು.