ಈ ದಿನ ಸಂಪಾದಕೀಯ | ರಾಜ್ಯಪಾಲರು ಸಂವಿಧಾನ ರಕ್ಷಿಸಬೇಕೇ ಅಥವಾ ತಮ್ಮ ಒಡೆಯರ ಅಡಿಯಾಳಾಗಬೇಕೇ?

Date:

Advertisements

ರಾಜ್ಯಪಾಲರು ಅನುಮತಿ ನೀಡಿಕೆಯಲ್ಲಿ ನೇರವಾಗಿ ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ. ಈ ಮಾತಿಗೆ 2023ರಷ್ಟು ಇತ್ತೀಚಿನ ಪ್ರಕರಣವೇ ಸ್ಪಷ್ಟ ನಿದರ್ಶನ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರು ಅಕ್ರಮ ಗಣಿಗಾರಿಕೆಗೆ ಅನುವು ಮಾಡಿದ್ದ ಆರೋಪದ ಮೇರೆಗೆ ಅವರ ಮೇಲೆ ಕಾನೂನುಕ್ರಮಕ್ಕೆ ಅನುಮತಿ ನೀಡಬೇಕೆಂದು ಕರ್ನಾಟಕ ಲೋಕಾಯುಕ್ತ 2023ರ ನವೆಂಬರ್ ತಿಂಗಳಲ್ಲಿ ರಾಜ್ಯಪಾಲರ ಅನುಮತಿ ಕೋರಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ (ಪ್ರಾಸಿಕ್ಯೂಷನ್) ಜರುಗಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅನುಮತಿ ನೀಡಿದ್ದಾರೆ. ಗೆಹ್ಲೋತ್ ಅವರ ಈ ನಡೆ ರಾಜ್ಯದ ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅನುಮತಿಯ ವಿರುದ್ಧ ನ್ಯಾಯಾಲಯದ ಕದ ಬಡಿದು ಹಂಗಾಮಿ ಪರಿಹಾರವನ್ನೂ ಪಡೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ಭೂಪರಿಹಾರ ರೂಪದಲ್ಲಿ ಹಂಚಿಕೆ ಮಾಡಬೇಕಿದ್ದ ಎರಡು ನಿವೇಶನಗಳ ಬದಲು 14 ನಿವೇಶನಗಳನ್ನು ನೀಡಲಾಗಿದೆ ಎಂಬ ಆರೋಪವಿದೆ. ಈ ಆರೋಪ ಕುರಿತಂತೆ ಸಿದ್ದರಾಮಯ್ಯ ಮೇಲೆ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪಾರ್ವತಿಯವರ ಅಣ್ಣ ಮಲ್ಲಿಕಾರ್ಜುನ ಸ್ವಾಮಿ ಅವರು 3 ಎಕರೆ 16 ಗುಂಟೆ ಜಮೀನು ಖರೀದಿಸಿ ತಮ್ಮ ತಂಗಿಗೆ ದಾನರೂಪದಲ್ಲಿ ನೀಡಿದ್ದರು.  ಆದರೆ ಈ 14 ನಿವೇಶನಗಳ ಹಂಚಿಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿಯವರೇ ಅಂದು ಪ್ರಾಧಿಕಾರದ ಸದಸ್ಯರಾಗಿದ್ದರು. ಬಡ್ಡಿ ಸಹಿತ ಜಮೀನಿನ ಬೆಲೆ 62 ಕೋಟಿ ರುಪಾಯಿಯನ್ನು ಕೊಟ್ಟರೆ ನಿವೇಶನಗಳನ್ನು ವಾಪಸು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Advertisements

ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು. ಆದರೆ ಚುನಾಯಿತ ಸರ್ಕಾರವನ್ನು ಉರುಳಿಸುವ ರಾಜಕೀಯ ದಾಳವಾಗಿ ಬಳಕೆಯಾಗುವುದನ್ನು ಒಪ್ಪಲಾಗದು. ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿರುವುದು ನಿಚ್ಚಳ. ರಾಜ್ಯಪಾಲರ ಅನುಮತಿಯ ಬೆಳವಣಿಗೆ ಈ ಬುಡಮೇಲು ಷಡ್ಯಂತ್ರದತ್ತಲೇ ಬೆರಳು ತೋರಿದೆ. ದೆಹಲಿ, ಝಾರ್ಖಂಡ, ಮಹಾರಾಷ್ಟ್ರದ ಸಾಲಿಗೆ ಇದೀಗ ಕರ್ನಾಟಕವೂ ಸೇರಿದೆ.

ಕರ್ನಾಟಕದಲ್ಲಿ ಹಿತ್ತಲ ಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋತಿತ್ತು. ಅಂದಿನಿಂದಲೇ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವ ದುಷ್ಟ ಆಟ ಶುರುವಾಗಿದೆ. ಸಿದ್ದರಾಮಯ್ಯ ಅವರ ಮೇಲೆ ವ್ಯಕ್ತಿಗತ ಹಗೆ ಸಾಧಿಸಿರುವ ಜೆ.ಡಿ.(ಎಸ್) ನಾಯಕತ್ವವೂ ಬಿಜೆಪಿ ಜೊತೆ ಕೈ ಜೋಡಿಸಿದೆ.

ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ. ಹೀಗಾಗಿ ರಾಜ್ಯಪಾಲರು ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿ ಹಿಡಿಯಬೇಕು. ತಾವು ಅಧಿಕಾರ ವಹಿಸಿಕೊಳ್ಳುವ ರಾಜ್ಯದ ಜನರ ಯೋಗಕ್ಷೇಮಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಡಬೇಕು. ಹೀಗೆಂದು ಅಧಿಕಾರ ಸ್ವೀಕಾರಕ್ಕೆ ಮುನ್ನ ಶಪಥ ಸ್ವೀಕರಿಸಬೇಕು. ಸಂವಿಧಾನದ 159ನೆಯ ಅನುಚ್ಛೇದದಲ್ಲಿ ರಾಜ್ಯಪಾಲರ ಪ್ರಾಥಮಿಕ ಕರ್ತವ್ಯವನ್ನು ಗೊತ್ತು ಮಾಡಲಾಗಿದೆ. ಆದರೆ ಬಹುತೇಕ ರಾಜ್ಯಪಾಲರು ಈ ಸಂವಿಧಾನನಿಷ್ಠೆಯನ್ನು ಗಾಳಿಗೆ ತೂರಿದ್ದಾರೆ. ತಮ್ಮನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆಯು ಸಹಕಾರಿ ಒಕ್ಕೂಟ ತತ್ವದ ಬುಡಕ್ಕೆ ಕೊಡಲಿ ಏಟು ಹಾಕಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಣ ಸೌಹಾರ್ದ ಸಂಬಂಧವನ್ನು ಗಾಢವಾಗಿ ಕದಡತೊಡಗಿದೆ.

ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅನುಮತಿ ನೀಡಿದ್ದರಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ. ಯಡಿಯೂರಪ್ಪ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಅಂದಿನ ಕಾಂಗ್ರೆಸ್ ಹಿನ್ನೆಲೆಯ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅನುಮತಿ ನೀಡಿಕೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಾನೂನೂ ಕ್ರಮ ಜರುಗಿಸಲು ಇಂದಿನ ಬಿಜೆಪಿ ಹಿನ್ನೆಲೆಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅನುಮತಿ ನೀಡಿಕೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ.

ಯಡಿಯೂರಪ್ಪ ಅವರ ಸಂಬಂಧ ಭಾರದ್ವಾಜ್ ಅನುಮತಿ ನೀಡುವ ಹೊತ್ತಿಗೆ ಯಡಿಯೂರಪ್ಪ ಅವರನ್ನು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಯ ದೋಷಿ ಎಂಬ ವರದಿ ನೀಡಿದ್ದರು. ಯಡಿಯೂರಪ್ಪ ಅವರ ಮೇಲೆ ಕ್ರಿಮಿನಲ್ ಕಾನೂನು ಕ್ರಮ ಜರುಗಬೇಕೆಂಬುದು ಲೋಕಾಯುಕ್ತರು ನೀಡಿದ್ದ ಶಿಫಾರಸೇ ಆಗಿತ್ತು. 2011ರ ಆಗಸ್ಟ್ ತಿಂಗಳಿನಲ್ಲಿ ನೀಡಿದ್ದ ತಮ್ಮ ಈ ಅನುಮತಿಯಲ್ಲಿ ಕರ್ನಾಟಕ ಲೋಕಾಯುಕ್ತರ ವರದಿಯ 22ನೆಯ ಅಧ್ಯಾಯದಲ್ಲಿನ ಈ ಅಂಶಗಳನ್ನು ಭಾರದ್ವಾಜ್ ನಿಚ್ಚಳವಾಗಿ ಉಲ್ಲೇಖಿಸಿದ್ದರು. ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳು ಇನ್ನೂ ಆರೋಪದ ಹಂತದಲ್ಲಿವೆ. ಪೂರ್ವಭಾವಿ ತನಿಖೆ ಕೂಡ ನಡೆದಿಲ್ಲ. ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗಬೇಕಾಗಿ ಬಂದಿತ್ತು.

‘ಮುಡಾ’ ಕೇಸಿನಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರಾದರೆ ಈ ತಪ್ಪಿನಲ್ಲಿ ಸಕ್ರಿಯವಾಗಿ ಶಾಮೀಲಾಗಿದ್ದ ಅಂದಿನ ಮುಡಾ ಅಧ್ಯಕ್ಷರು, ಆಯುಕ್ತರು ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವರೂ ತಪ್ಪಿತಸ್ಥರೇ. ಅವರೆಲ್ಲ ಬಿಜೆಪಿಗೆ ಸೇರಿದ್ದವರು. ಅವರ ಮೇಲೆ ಕಾನೂನುಕ್ರಮ ಜರುಗಿಸಲು ರಾಜ್ಯಪಾಲರು ಯಾಕೆ ಅನುಮತಿ ನೀಡಿಲ್ಲ?

ರಾಜ್ಯಪಾಲರು ಅನುಮತಿ ನೀಡಿಕೆಯಲ್ಲಿ ನೇರವಾಗಿ ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ. ಈ ಮಾತಿಗೆ 2023ರಷ್ಟು ಇತ್ತೀಚಿನ ಪ್ರಕರಣವೇ ಸ್ಪಷ್ಟ ನಿದರ್ಶನ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರು ಅಕ್ರಮ ಗಣಿಗಾರಿಕೆಗೆ ಅನುವು ಮಾಡಿದ್ದ ಆರೋಪದ ಮೇರೆಗೆ ಅವರ ಮೇಲೆ ಕಾನೂನುಕ್ರಮಕ್ಕೆ ಅನುಮತಿ ನೀಡಬೇಕೆಂದು ಕರ್ನಾಟಕ ಲೋಕಾಯುಕ್ತ 2023ರ ನವೆಂಬರ್ ತಿಂಗಳಲ್ಲಿ ರಾಜ್ಯಪಾಲರ ಅನುಮತಿ ಕೋರಿತ್ತು. 2013 ಮತ್ತು 2017ರ ಲೋಕಾಯುಕ್ತ ವರದಿಗಳನ್ನು ಆಧರಿಸಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿತ್ತು. ಆದರೆ ಕುಮಾರಸ್ವಾಮಿ ಮತ್ತಿತರೆ ಮೂವರು ಬಿಜೆಪಿ ಮಂತ್ರಿಗಳ ವಿರುದ್ಧದ ಭ್ರಷ್ಚಾಚಾರದ ಆರೋಪಗಳ ತನಿಖೆಗೆ ಅನುಮತಿ ಕೋರಿರುವ ಬೇಡಿಕೆಗಳಿಗೆ ರಾಜ್ಯಪಾಲರು ಈವರೆಗೆ ಅನುಮತಿ ನೀಡಿಲ್ಲ. ಒಂದು ಕೇಸನ್ನು ಹೈಕೋರ್ಟ್ ರದ್ದು ಮಾಡಿದೆಯಾದರೂ ಮತ್ತೊಂದರ ಸುಪ್ರೀಮ್ ಕೋರ್ಟ್ ಆದೇಶಿತ ತನಿಖೆ ಜಾರಿಯಲ್ಲಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯ 17 (ಎ) ಸೆಕ್ಷನ್ ಅಡಿಯಲ್ಲಿ ಕೇವಲ ಪೊಲೀಸ್ ಅಧಿಕಾರಿಯೊಬ್ಬರಿಂದ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳ ವಿಚಾರಣೆಗಷ್ಟೇ ರಾಜ್ಯಪಾಲರ ಅನುಮತಿ ಸೀಮಿತವಾಗಿಲ್ಲ. 2023ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 218ನೆಯ ಸೆಕ್ಷನ್ ಪ್ರಕಾರ ಯಾವುದೇ ನ್ಯಾಯಾಲಯವು, ಯಾವುದೇ ತನಿಖೆ ಅಥವಾ ವಿಚಾರಣೆಯಿಲ್ಲದೆ, ಕೇವಲ ತನ್ನ ಮುಂದಿರುವ ಸಾಕ್ಷ್ಯಗಳನ್ನಷ್ಟೇ ಆಧರಿಸಿ ನೇರವಾಗಿ ಆಪಾದನೆಯನ್ನು ವಿಚಾರಣೆಗೆ ಅಂಗೀಕರಿಸಬಹುದು. ರಾಜ್ಯಪಾಲರ ಅನುಮತಿಯಲ್ಲಿ ಈ ಅಂಶವೂ ಸೇರಿದೆ ಎಂದು ಕಾನೂನುತಜ್ಞರು ಹೇಳತೊಡಗಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ರಾಜ್ಯಪಾಲರ ಉದ್ದೇಶ ಅಪ್ಪಟ ದುರುದ್ದೇಶಪೂರಿತ ಎಂಬ ಅನುಮಾನ ಮತ್ತಷ್ಟು ಗಟ್ಟಿಯಾಗಲಿದೆ.

ಪ್ರತಿಪಕ್ಷಗಳಿಗೆ ಸೇರಿದ ರಾಜ್ಯ ಸರ್ಕಾರಗಳನ್ನು ಕೆಡವುವುದು, ಅಸ್ಥಿರಗೊಳಿಸುವುದು ಮೋ-ಶಾ ಕೂಟದ ಅಧಿಕೃತ ಪ್ರಣಾಳಿಕೆಯೇ ಆಗಿ ಹೋಗಿದೆ. ಕಳೆದ ಹತ್ತು ವರ್ಷಗಳ ದರ್ಪ ದಬ್ಬಾಳಿಕೆಯ ಆಡಳಿತದಲ್ಲಿ ಮೋದಿ ಸರ್ಕಾರ ಬುಡಮೇಲು ಮಾಡಿರುವ, ಅಪಹರಿಸಿರುವ ರಾಜ್ಯ ಸರ್ಕಾರಗಳ ದೊಡ್ಡ ಪಟ್ಟಿಯೇ ಉಂಟು. ಈ ಕೀಳು ಉದ್ದೇಶಕ್ಕಾಗಿ ಶಾಸಕರ ಖರೀದಿ, ಹುಸಿ ಕೇಸುಗಳ ಹೂಡಿಕೆ, ಪ್ರತಿಪಕ್ಷಗಳನ್ನು ಒಡೆದು ಹೋಳು ಮಾಡುವಿಕೆ, ಐಟಿ- ಇಡಿ- ಸಿಬಿಐ ದಾಳಿಗಳ ಬೆದರಿಕೆ, ಆಮಿಷ ಮುಂತಾದ ಹತ್ತಾರು ಅಡ್ಡದಾರಿಗಳನ್ನು ಹಿಡಿಯಲಾಗಿದೆ.

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರ ಎನ್.ಸಿ.ಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಪಕ್ಷಗಳನ್ನು ಬೆದರಿಕೆ- ಆಸೆ-ಆಮಿಷಗಳಿಂದಲೇ ಹೋಳು ಮಾಡಿ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರವನ್ನು ಕೆಡವಿತು ಮೋ-ಶಾ ಕೂಟ. ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮತದಾರರು ಬಿಜೆಪಿಯ ಈ ದುರುಳ ಕೃತ್ಯವನ್ನು ಘನವಾಗಿ ದಂಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಘೋರ ಸೋಲಿನ ಗೋಡೆ ಬರೆಹ ಬರೆದಿದ್ದಾರೆ. ಬಿಜೆಪಿಯ ಜಂಘಾಬಲವೇ ಉಡುಗಿ ಹೋಗಿದೆ. ಹೀಗಾಗಿಯೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳನ್ನು ಕಾನೂನು- ಸುವ್ಯವಸ್ಥೆಯ ಕುಂಟುನೆಪ ಒಡ್ಡಿ ಮುಂದೂಡಲಾಗಿದೆ. ನಾಚಿಕಗೇಡಿನ ನಡೆಯಿದು.

ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಜಮ್ಮು- ಕಾಶ್ಮೀರಕ್ಕಿಂತಲೂ ಹೆಚ್ಚು ಕೆಟ್ಟಿದೆ ಎಂಬುದು ಅಪ್ಪಟ ಬಿಳಿ ಸುಳ್ಳು. ಆಷಾಢಭೂತಿತನ. ಮುಖ ಮರೆಸಿಕೊಳ್ಳಲೂ ಬಿಜೆಪಿಗೆ ಎಡೆಯಿಲ್ಲ. ಆದರೆ ಅದಕ್ಕೆ ಯಾವ ಲಜ್ಜೆಯೂ ಇಲ್ಲ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನಿಸಿಕೊಂಡರಂತೆ!

ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಒಡೆಯಲು ಮೋ- ಶಾ ಕೂಟ ತುಳಿಯದೆ ಉಳಿಸಿರುವ ಅಡ್ಡದಾರಿ ಒಂದೂ ಇಲ್ಲ. ದಶದಿಕ್ಕುಗಳಿಂದ ದಾಳಿ ನಡೆಸಿದೆ. ಕೇಂದ್ರೀಯ ಏಜೆನ್ಸಿಗಳನ್ನು ಛೂ ಬಿಟ್ಟಿದೆ. ಕಾಯಿದೆಗೆ ತಿದ್ದುಪಡಿ ತಂದು ದೆಹಲಿಯ ಉಪರಾಜ್ಯಪಾಲರಿಗೆ ‘ಸೂಪರ್ ಪವರ್’ ನೀಡಿ ಮೆರೆಸಿದೆ. ತನ್ನ ಮೇಲೆ ಹೂಡಿರುವ ಎಲ್ಲ ಬಿಜೆಪಿ ಬ್ರಹ್ಮಾಸ್ತ್ರಗಳು ಮತ್ತು ಕುಟಿಲ ತಂತ್ರಗಳಿಗೆ ಈವರೆಗೆ ಮಣ್ಣು ಮುಕ್ಕಿಸಿ ಹೋರಾಡಿದೆ ಕೇಜ್ರೀವಾಲ್ ಪಕ್ಷ. ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಜೆಪಿ ಪರವಾಗಿ ಬಗ್ಗಲಿಲ್ಲ. ಅವರನ್ನು ಭೂಹಗರಣದ ಹುಸಿ ಮೊಕದ್ದಮೆಯಲ್ಲಿ ಸಿಲುಕಿಸಿ ಐದು ತಿಂಗಳ ಕಾಲ ಜೈಲಿನಲ್ಲಿ ಇಡಲಾಯಿತು. ಅವರ ಮೇಲಿನ ಆಪಾದನೆಗೆ ಆಧಾರವೇ ಇಲ್ಲ ಎಂದು ಝಾರ್ಖಂಡ್ ಹೈಕೋರ್ಟ್ ತೀರ್ಪು ನೀಡಿದ ನಂತರ ಸೊರೇನ್ ಅವರನ್ನು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲೇಬೇಕಾಯಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನು ಅಬ್ಕಾರಿ ಹಗರಣದ ಆಪಾದನೆಯಡಿ ಬಂಧಿಸಿ ಐದು ತಿಂಗಳುಗಳೇ ಉರುಳಿವೆ. ಇದೇ ಆಪಾದನೆ ಮೇರೆಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು 17 ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. ಸುಪ್ರೀಮ್ ಕೋರ್ಟಿನ ತಪರಾಕಿಯ ನಂತರ ವಾರದ ಹಿಂದೆ ಅವರನ್ನು ಬಿಡುಗಡೆ ಮಾಡದೆ ಬೇರೆ ದಾರಿಯೇ ಉಳಿಯಲಿಲ್ಲ. ಇದೇ ಆಪಾದನೆ ಮೇರೆಗೆ ಆಪ್ ರಾಜ್ಯಸಭಾ ಸದಸ್ಯ ಸಂಜಯಸಿಂಗ್ ಅವರನ್ನೂ ಬಂಧಿಸಲಾಗಿತ್ತು. ಸುಪ್ರೀಮ್ ಕೋರ್ಟ್ ಝಾಡಿಸಿದ ನಂತರ ವಿಧಿಯಿಲ್ಲದೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಯಿತು.

ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನಗಳಲ್ಲೂ ಬಿಜೆಪಿ ವಿಫಲವಾಗಿದೆ. ಶಿವಕುಮಾರ್ ಮೇಲಿನ ಕೇಸುಗಳೂ ಬಿದ್ದು ಹೋಗಿವೆ. ಅವರೂ ಬಿಡುಗಡೆಗೆ ಮುನ್ನ 48 ದಿನಗಳ ಕಾಲ ದೆಹಲಿಯ ತಿಹಾರ್ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮುಂಚೂಣಿ ನಾಯಕರನ್ನು ಹುಸಿಕೇಸುಗಳ ಉರುಳಿನಲ್ಲಿ ಸಿಕ್ಕಿಸಿ ಬಂಧಿಸುವ ಹುನ್ನಾರಗಳು ಇನ್ನೂ ಜಾರಿಗೆ ಬಂದಿಲ್ಲ.

ತಮ್ಮನ್ನು ಎರಡು ಅವಧಿಗಳಿಗೆ ನಿಚ್ಚಳ ಬಹುಮತದಿಂದ ಮತ್ತು ಮೂರನೆಯ ಸಲ ಊರುಗೋಲುಗಳ ಸಹಿತ ಆರಿಸಿರುವುದನ್ನು ಮೋದಿಯವರು ಜನಾದೇಶ ಎಂದು ಬಣ್ಣಿಸುತ್ತಾರೆ. ಅವರು ವ್ಯಾಖ್ಯಾನ ಸರಿಯಾಗಿದೆ. ಆದರೆ ಪ್ರತಿಪಕ್ಷಗಳ ಸರ್ಕಾರಗಳು ಕೂಡ ಜನಾದೇಶದ ಪ್ರಕಾರವೇ ಅಸ್ತಿತ್ವಕ್ಕೆ ಬಂದಿರುತ್ತವೆ. ತಮ್ಮ ಆಯ್ಕೆ ಜನಾದೇಶ ಆದರೆ ಪ್ರತಿಪಕ್ಷಗಳ ಆಯ್ಕೆಯೂ ಜನಾದೇಶವೇ. ತಮಗೊಂದು ಅಳತೆಗೋಲು ಪ್ರತಿಪಕ್ಷಗಳ ಸರ್ಕಾರಗಳಿಗೆ ಮತ್ತೊಂದು ಅಳತೆಗೋಲು ಬಳಸುವುದು ಅಪ್ಪಟ ಆಷಾಢಭೂತಿತನ.

ತಾವು ಆರಿಸಿರುವ ಸರ್ಕಾರಗಳನ್ನು ಬುಡಮೇಲು ಮಾಡುತ್ತಿರುವ ಮೋಶಾ ಕೃತ್ಯಗಳ ಕುರಿತು ಜನವಿರೋಧ ಈಗಾಗಲೇ ಪ್ರಕಟವಾಗಿದೆ. ಮುಂಬರುವ ದಿನಗಳಲ್ಲಿ ಈ ಜನವಿರೋಧ ಇನ್ನಷ್ಟು ಬಲವಾಗಲಿದೆ. ಈಗಲೂ ಪಾಠ ಕಲಿಯದಿದ್ದರೆ ಜನ ನೇರವಾಗಿ ನಿಚ್ಚಳವಾಗಿ ಪಾಠ ಕಲಿಸಲಿದ್ದಾರೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X