ಚಿತ್ರರಂಗದಲ್ಲಿ ಮಾತ್ರ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆಯೇ? ಇಲ್ಲ, ಎಲ್ಲೆಲ್ಲೂ ನಡೆಯುತ್ತಿದೆ. ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಆಂತರಿಕ ದೂರು ಸಮಿತಿಗಳು ಇರಬೇಕು ಎಂದು ವಿಶಾಖ ಗೈಡ್‌ಲೈನ್ ಹೇಳುತ್ತದೆ. ಆದರೆ, ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ದೂರು ಸಮಿತಿಗಳು ಇಲ್ಲ. ಇನ್ನು ಪ್ರೊಡಕ್ಷನ್ ಹೌಸ್‌ಗಳಲ್ಲಿ ಅದನ್ನು ನಿರೀಕ್ಷಿಸೋದು ಸಾಧ್ಯವೇ?
ಚಿತ್ರರಂಗದ ಪಡಸಾಲೆಯಿಂದ ಆಗಾಗ ಕೇಳಿ ಬರುವ ಲೈಂಗಿಕ ಕಿರುಕುಳದ ಸುದ್ದಿಗೆ ಇಡೀ ಚಿತ್ರರಂಗದ ದಿಗ್ಗಜರು ನೀಡುವ ಪ್ರತಿಕ್ರಿಯೆ, ಜನ ಸಾಮಾನ್ಯರ “ತೀರಾ ಸಾಮಾನ್ಯ” ಎನಿಸುವ ಪ್ರತಿಕ್ರಿಯೆ, ಇವೆಲ್ಲದರ ಪರಿಣಾಮವಾಗಿ ಆ ಸುದ್ದಿ ಅಷ್ಟೇ ಬೇಗ ಸಮಾಧಿಯಾಗಿಬಿಡುತ್ತದೆ. ಸಿನಿಮಾ ನಟಿಯರ ಬಗ್ಗೆ ಪರಂಪರಾಗತವಾಗಿ ಬಂದಿರುವ ಒಂದು ಬಗೆಯ ಅನುಮಾನ ಗುಪ್ತಗಾಮಿನಿಯಾಗಿ ಎಲ್ಲರ ಮನಸ್ಸಿನಲ್ಲೂ ಹರಿಯುತ್ತಲೇ ಇರುತ್ತದೆ. ಅದರಲ್ಲೂ ಸ್ವಲ್ಪ ಬೋಲ್ಡ್ ಆಗಿ, ಕನಿಷ್ಠ ಉಡುಗೆಯಲ್ಲಿ ನಟಿಸಿದರೆಂದರೆ, ಜನ ಚಿತ್ರದಲ್ಲಿನ ಸೀನ್‌ಗಳಂತೆಯೇ ಆಕೆಯ ವೈಯಕ್ತಿಕ ಬದುಕು ಕೂಡಾ ಎಂದುಕೊಂಡು ಬಿಡುತ್ತಾರೆ. ಹಾಗಾಗಿ ನಟಿಯರು ಕಿರುಕುಳದ ಆರೋಪ ಮಾಡಿದರೆ ಆಕೆಯನ್ನೇ ಚಾರಿತ್ರ್ಯಹೀನಳು ಎಂದು ಬಿಂಬಿಸಲಾಗುತ್ತಿದೆ. ಮನರಂಜನಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಹೆಸರು ಮಾಡಬೇಕೆಂದರೆ ಗಂಡಿನ ಆಸೆಗಳನ್ನು ಪೂರೈಸಬೇಕು ಎಂಬುದನ್ನು ಅಲಿಖಿತ ನಿಯಮ ಮಾಡಿಕೊಂಡಂತಿದೆ. ಹೀಗಿರುವಾಗ ಮಲಯಾಳಂ ಚಿತ್ರರಂಗದ ಮಹಿಳೆಯರ ಸ್ಥಿತಿಗತಿ ಕುರಿತು ನ್ಯಾ. ಹೇಮಾ ಕಮಿಟಿ ವರದಿಗೆ ಬೆಚ್ಚಿ ಬೀಳುವ ಅಗತ್ಯ ಇಲ್ಲ. ಚಿತ್ರರಂಗದಲ್ಲಿ ಸ್ತ್ರೀಪೀಡನೆ ಎಂಬುದು ಸಾಮಾನ್ಯ ಹಾಗೂ ಖ್ಯಾತಿ ಗಳಿಸಬೇಕೆಂದು ಬರುವವರು ಸಹಿಸಿಕೊಂಡು ಮುನ್ನಡೆಯಬೇಕು ಎಂಬ ನಿರ್ಧಾರಕ್ಕೆ ಎಲ್ಲರೂ ಬಂದುಬಿಟ್ಟ ಹಾಗಿದೆ.
ಮಲಯಾಳಂ ಚಿತ್ರರಂಗದ ಮಟ್ಟಿಗೆ 2017ರಲ್ಲಿ ನಟ ದಿಲೀಪ್ ಬಂಧನ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅದೂ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ದಿಲೀಪ್ ಬಂಧನವಾಗಿದ್ದರು. ಆ ಪ್ರಕರಣದ ಸಂಬಂಧ ಮಲಯಾಳಂ ಚಿತ್ರರಂಗದ ಕಲಾವಿದೆಯರ ಸಂಘ ʼವಿಮೆನ್ ಇನ್ ಸಿನಿಮಾ ಕಲೆಕ್ಟಿವ್ʼ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ನ್ಯಾ. ಕೆ ಹೇಮಾ ನೇತೃತ್ವದ ಸಮಿತಿ ರಚಿಸಿತ್ತು. ಹಿರಿಯ ನಟಿ ಶಾರದಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ ಬಿ ವತ್ಸಲಾ ಕುಮಾರಿ ಅವರಿದ್ದ ಈ ಸಮಿತಿ ವರದಿಯನ್ನು 2019ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರ ಆ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಿಂದಾಗಿ ವರದಿ ಬಹಿರಂಗಗೊಂಡಿದೆ. ಅದರಲ್ಲಿರುವ ಅಂಶಗಳು ಮಲಯಾಳಂ ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟಿವೆ. ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎಂದುಕೊಳ್ಳುವ ಹೆಣ್ಣುಮಕ್ಕಳು ಕಳವಳಪಡುವ ವರದಿಯಿದು.

ಮಲಯಾಳಂ ಚಿತ್ರರಂಗ ಕ್ರಿಮಿನಲ್ ಗ್ಯಾಂಗ್‌ನ ಹಿಡಿತದಲ್ಲಿದೆ, ಚಿತ್ರೀಕರಣದ ಸಮಯದಲ್ಲಿ ಹೋಟೆಲುಗಳಲ್ಲಿ ಉಳಿಯುವ ಸಂದರ್ಭಗಳಲ್ಲಿ ಚಿತ್ರತಂಡದ ಪುರುಷರು ಕುಡಿದ ಮತ್ತಿನಲ್ಲಿ ಮಹಿಳೆಯರಿರುವ ಕೊಠಡಿಯ ಬಾಗಿಲು ಬಡಿಯುವುದು ಮುಂತಾದ ಚೇಷ್ಟೆಗಳನ್ನು ಮಾಡುತ್ತಾರೆ. ಹೊಂದಾಣಿಕೆ ಮತ್ತು ರಾಜಿ ಮಾಡಿಕೊಂಡು ತಮ್ಮ ಲೈಂಗಿಕ ಆಸೆಗಳನ್ನು ಪೂರೈಸಲು ನಟಿಯರು ಒಪ್ಪಬೇಕೆಂದು ಬಯಸುತ್ತಾರೆ. ಪ್ರಾಣ ಭಯ ಮತ್ತು ವೃತ್ತಿಯ ಅನಿವಾರ್ಯತೆಯಿಂದಾಗಿ ಹೆಚ್ಚಿನವರು ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ಒಂದೆರಡಲ್ಲ 17 ಬಗೆಯ ದೌರ್ಜನ್ಯದ ಮಾದರಿಗಳನ್ನು ಪಟ್ಟಿ ಮಾಡಲಾಗಿದೆ.
ವರದಿಯಲ್ಲಿ ʼಅವಕಾಶಕ್ಕಾಗಿ ಲೈಂಗಿಕ ಶೋಷಣೆʼ ಮಾಡುತ್ತಿರುವ ಬಗ್ಗೆ ಮಾತ್ರ ಪ್ರಸ್ತಾಪಿಸಿಲ್ಲ, ಶೂಟಿಂಗ್ ನಡೆಯುವ ಜಾಗಗಳಲ್ಲಿ ನಟಿಯರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆ ಮಾಡದಿರುವುದು, ಆ ಕಾರಣಕ್ಕೆ ಅವರು ನೀರು ಕುಡಿಯುವುದನ್ನೇ ಕಡಿಮೆ ಮಾಡಿರುವುದು, ಮುಟ್ಟಿನ ದಿನಗಳಲ್ಲಿ ನ್ಯಾಪ್ಕಿನ್ ಬದಲಾಯಿಸಲೂ ಅವಕಾಶ ನೀಡದಿರುವಷ್ಟು ಅಮಾನವೀಯತೆ ಚಿತ್ರರಂಗವನ್ನು ಬಾಧಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡುವಂತೆ ಸಮಿತಿ ರಚನೆ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವರದಿಯನ್ನು ಐದು ವರ್ಷಗಳಿಂದ ಬಹಿರಂಗಪಡಿಸದಿರುವ ಕಾರಣವನ್ನು ಬಹಿರಂಗಪಡಿಸಬೇಕಿದೆ.
ಇದು ಮಲಯಾಳಂ ಚಿತ್ರರಂಗಕ್ಕೆ ಮಾತ್ರ ಅಂಟಿರುವ ಕಳಂಕವೇ? ಅಲ್ಲ ಎಲ್ಲಾ ಭಾಷೆಗಳ ಚಿತ್ರರಂಗದ ಹಣೆಬರಹ. ಚಿತ್ರರಂಗದಲ್ಲಿ ಮಾತ್ರ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆಯೇ? ಇಲ್ಲ ಎಲ್ಲೆಲ್ಲೂ ನಡೆಯುತ್ತಿದೆ. ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಲೈಂಗಿಕ ಕಿರುಕುಳ ದೂರು ಸಮಿತಿಗಳು ಇರಬೇಕು ಎಂಬ ವಿಶಾಖ ಗೈಡ್‌ಲೈನ್ಸ್ ಹೇಳುತ್ತದೆ. ಆದರೆ, ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ದೂರು ಸಮಿತಿಗಳು ಇಲ್ಲ. ಇನ್ನು ಪ್ರೊಡಕ್ಷನ್ ಹೌಸ್‌ನಲ್ಲಿ ಅದನ್ನು ನಿರೀಕ್ಷಿಸೋದು ಸಾಧ್ಯವೇ?
ಮನರಂಜನಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ ಎಂಬುದನ್ನು ಒಪ್ಪಲೇಬೇಕು. ಅದು ಲೈಂಗಿಕ ಕಿರುಕುಳ ಅಷ್ಟೇ ಅಲ್ಲ, ಇಡೀ ಚಿತ್ರದ ಜೀವಾಳವಾಗಿರುವ ನಾಯಕಿಗೆ ನಾಯಕನಿಗಿಂತ ಕಡಿಮೆ ಸಂಭಾವನೆ ನೀಡಲಾಗುತ್ತಿದೆ. ಕೂಲಿ ಕಾರ್ಮಿಕ ಹೆಣ್ಣು ಗಂಡಿನ ನಡುವೆ ಕೂಲಿಯಲ್ಲಿರುವ ಅದೇ ವ್ಯತ್ಯಾಸ ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಹೆಣ್ಣು- ಗಂಡಿನ ಮಧ್ಯೆಯೂ ಇರುವುದು ಢಾಳಾಗಿ ಕಾಣಿಸುತ್ತಿದೆ. ಸಮಾಜದಲ್ಲಿಯೂ ನಟನನ್ನು ನೋಡುವ ರೀತಿಗೂ, ನಟಿಯನ್ನು ನೋಡುವ ರೀತಿಗೂ ಬಹಳ ವ್ಯತ್ಯಾಸ ಇದೆ. ನಟರಿಗೆ ಇರುವಂತೆ ನಟಿಯರಿಗೆ ಅಭಿಮಾನಿಗಳ ಸಂಘ ಇರಲ್ಲ, ನಟಿಯರ ಹುಟ್ಟುಹಬ್ಬಕ್ಕೆ ಮನೆ ಮುಂದೆ ಅಭಿಮಾನಿಗಳು ಜಮಾಯಿಸಲ್ಲ. ನಟ ಅಂದ್ರೆ ಆದರ್ಶ, ನಟಿ ಅಂದ್ರೆ ಆದರ್ಶ ಅಲ್ಲ ಹೀಗೆ ಮನರಂಜನಾ ಕ್ಷೇತ್ರದಲ್ಲಿ ಹೆಣ್ಣು ಆಕರ್ಷಣೆಗಷ್ಟೇ ಸೀಮಿತ.

ಒಬ್ಬ ನಟಿ ಲೈಂಗಿಕ ಕಿರುಕುಳದ ಬಗ್ಗೆ ಒಂದೇ ಒಂದು ಆರೋಪ ಮಾಡಿದರೆಂದರೆ ಸಾಕು, ನಟರು, ನಿರ್ಮಾಪಕರು, ನಿರ್ದೇಶಕರು ಎಲ್ಲರೂ ಮರ್ಯಾದಾ ಪುರುಷೋತ್ತಮರಾಗಿಬಿಡುತ್ತಾರೆ. ಅಷ್ಟೇ ಯಾಕೆ ಜನ ಸಾಮಾನ್ಯರೂ ಆ ನಟನ ಚಿತ್ರದಲ್ಲಿನ ಪಾತ್ರದ ವ್ಯಕ್ತಿತ್ವವನ್ನು ನಂಬಿ ಬಿಡುತ್ತಾರೆ. ನಟಿ ಮಾತ್ರ ಪ್ರಚಾರಕ್ಕಾಗಿ ಅಥವಾ ಅವಕಾಶ ವಂಚಿತರಾದ ಕಾರಣಕ್ಕೆ ಹೀಗೆ ಆರೋಪ ಮಾಡ್ತಿದ್ದಾರೆ ಎಂದು ಒಂದೇ ಸಾಲಿನ ಷರ ಬರೆದುಬಿಡುತ್ತಾರೆ. ದೇಶಕ್ಕೆ ಬಂಗಾರದ ಪದಕ ತಂದ ಕುಸ್ತಿ ಪಟುಗಳು ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಕ್ಕಾಗಿ ವಿನೇಶ್ ಫೋಗಟ್ ಅವರ ಒಲಿಂಪಿಕ್ಸ್ ಅನರ್ಹತೆಯನ್ನು ಸಂಭ್ರಮಿಸಿದವರಿದ್ದಾರೆ.
ಐದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಎದ್ದ Metoo ಬಿರುಗಾಳಿ ನಂತರ ನಡೆದ ಬೆಳವಣಿಗೆಗಳನ್ನು ನಾವೆಲ್ಲ ನೋಡಿದ್ದೇವೆ. ಬೇರೆ ಭಾಷೆಯ ನಟಿಯೊಬ್ಬರು ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್(ಅವಕಾಶಕ್ಕಾಗಿ ಲೈಂಗಿಕ ಕಿರುಕುಳ) ಬಗ್ಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಕನ್ನಡದ ನಟಿ ಶ್ರುತಿ ಹರಿಹರನ್ ತಮಗೂ ಹಿರಿಯ ನಟನ ಜೊತೆ ರೊಮ್ಯಾಂಟಿಕ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಅಂತಹ ಅನುಭವ ಆಗಿತ್ತು ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಬಂದ ಪ್ರತಿಕ್ರಿಯೆಗಳು ಆ ನಟ ಹೆಸರನ್ನು ಬಹಿರಂಗಪಡಿಸುವ, ನಂತರ ಆ ನಟನ ವಿರುದ್ಧ ದೂರು ನೀಡುವ ಮಟ್ಟಿಗೆ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆಗ ಇಡೀ ಚಿತ್ರರಂಗ ನಡೆದುಕೊಂಡ ರೀತಿ, ದೊಡ್ಡವರೆಂದುಕೊಂಡವರ ಹೇಳಿಕೆಗಳು, ಹಿರಿಯ ನಟಿಯರ ಮಹಾ ಮೌನ, ಆಕೆಯ ಪರ ಯಾರೊಬ್ಬರೂ ನಿಲ್ಲದಿರುವ ದುಷ್ಟತನ ನೋಡಿದ್ದೇವೆ. ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ನಂತರ ಪುರಾವೆ ಒದಗಿಸಲಾಗದೇ ಪ್ರಕರಣ ಮುಗಿದು ಹೋಯ್ತು. ನಟನೆಯ ವೇಳೆ ನಡೆಯುವ ಕಿರುಕುಳಕ್ಕೆ ಎಲ್ಲಿಂದ ಪುರಾವೆ ಒದಗಿಸುವುದು? ಅಸಹಜವಾಗಿ ಸ್ಪರ್ಶಿಸುವ, ಸಂಜ್ಞೆ ಮಾಡುವ, ಮಾತಿನ ಕಿರುಕುಳಕ್ಕೆ ಅಥವಾ ರೊಮ್ಯಾಂಟಿಕ್ ದೃಶ್ಯದ ಸಹಜತೆಯ ಹೆಸರಿನಲ್ಲಿ ಆಗುವ ಕಿರುಕುಳಕ್ಕೆ ಎಲ್ಲಿರುತ್ತದೆ ಪುರಾವೆ? ಪುರಾವೆ ಒದಗಿಸಲಾಗದ ಕಾರಣ ಕೋರ್ಟ್‌ಗಳಲ್ಲೂ ನ್ಯಾಯ ಮರೀಚಿಕೆಯಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಯಾಕೆ ಹೀಗೆ ಎಂದು ನೋಡುವುದಾದರೆ, ಮುಖ್ಯವಾಗಿ ಸಿನಿಮಾವನ್ನು ಆಳುತ್ತಿರುವುದು ಪುರುಷ ಸಮಾಜ. ಇಡೀ ಭಾರತೀಯ ಚಿತ್ರರಂಗ ಬಲಾಢ್ಯ ಪುರುಷರ ಕೈಯಲ್ಲಿದೆ. ನಿರ್ಮಾಪಕ, ಸಹ ನಿರ್ಮಾಪಕ, ನಿರ್ದೇಶಕ- ಸಹನಿರ್ದೇಶಕ, ಕೊರಿಯೋಗ್ರಾಫರ್, ಸಿನಿಮಾಟೋಗ್ರಾಫರ್, ಸಹಾಯಕರು, ಪ್ರಸಾದನ ಕಲಾವಿದರು, ತಂತ್ರಜ್ಞರು ಹೀಗೆ ಅದೊಂದು ಪುರುಷರ ಲೋಕ. ಅಲ್ಲಿ ಈಜಿ ಜಯಿಸುವುದೆಂದರೆ ಅದು ಸುಲಭದ ಮಾತಲ್ಲ. ಯಾಕೆಂದರೆ ಪುರುಷರೊಂದಿಗೆ ಆಪ್ತವಾಗಿ ಬೆರೆತು ಕೆಲಸ ಮಾಡಬೇಕಿದೆ. ಹೆಣ್ಣನ್ನು ಸದಾ ಕಾಮದ ಕಣ್ಣಿನಿಂದ ನೋಡಲು ಬಯಸುವ ರೋಗಿಷ್ಟ ಮನಸ್ಸುಗಳಿಗೆ ಸಿನಿಮಾ, ಅದರ ಚಿತ್ರೀಕರಣವೆಲ್ಲ ತಾವು ಬಯಸಿದ್ದನ್ನು ಪಡೆಯುವ ತಾಣ.
ಆದರೆ, ನಟಿಯರಿಗೆ ತಾವು ದುಡಿಯುವ ಕ್ಷೇತ್ರ ಸುರಕ್ಷಿತವಾಗಿದೆ ಎಂಬ ಅನುಭವವಾಗಲು ಇಡೀ ಚಿತ್ರತಂಡ ಶ್ರಮಿಸಬೇಕಿದೆ. ಆಕೆಯನ್ನು ಗೌರವದಿಂದ ನಡೆಸಿಕೊಳ್ಳುವುದು, ಆಕೆಯ ಘನತೆಯ ಬದುಕಿಗೆ ಭದ್ರತೆಯ ಭಾವ ಮೂಡಿಸುವುದು ಸಹ ನಟರು, ನಿರ್ದೇಶಕರು, ನಿರ್ಮಾಪಕರು ಎಲ್ಲರ ಆದ್ಯತೆಯಾಗಬೇಕು. ಆಗ ಮಾತ್ರ ಚಿತ್ರರಂಗಕ್ಕೆ ದಶಕಗಳಿಂದ ಅಂಟಿದ ಕಳಂಕ ಕಳೆಯಬಹುದು.
ಚಿತ್ರ ನಿರ್ಮಾಣ ಸಂಸ್ಥೆಗಳಿಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ಅಷ್ಟೇ ಅಲ್ಲ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಆಕೆಯ ಪರ ನಿಲ್ಲುವ ಜವಾಬ್ದಾರಿಯೂ ಚಿತ್ರರಂಗಕ್ಕೆ ಇರಬೇಕು. ಅದಕ್ಕೆ ಬದಲಾಗಿ ಆರೋಪಿಯ ಪರ ವಾದಿಸುವುದು, ಆತನಿಗೆ ಸನ್ನಡತೆಯ ಸರ್ಟಿಫಿಕೇಟ್ ನೀಡುವುದು ನಿಲ್ಲಬೇಕು. ಇರುವ ಸತ್ಯವನ್ನು ಮೊದಲು ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ಆಗ ಮಾತ್ರ ಅದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗಗಳನ್ನು ಹುಡುಕುವುದು ಸಾಧ್ಯ.
ಕಾಸ್ಟಿಂಗ್ ಕೌಚ್ ಎಂಬ ಭೂತ
ತಮ್ಮ ಆಸೆಗಳನ್ನು ಈಡೇರಿಸಿದರೆ, ಸಲುಗೆಯಿಂದ ನಡೆದುಕೊಂಡರೆ ಚಿತ್ರದಲ್ಲಿ ಉತ್ತಮ ಪಾತ್ರ ಅಥವಾ ಅವಕಾಶ ನೀಡುವ ಆಮಿಷವೊಡ್ಡುವುದನ್ನು ʼಕಾಸ್ಟಿಂಗ್ ಕೌಚ್ʼ ಎಂದು ಕರೆಯಲಾಗುತ್ತದೆ. ಅವಕಾಶಕ್ಕಾಗಿ ಕೆಲವರು ಹೊಂದಾಣಿಕೆ ಮಾಡಿಕೊಂಡರೆ, ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇರುವ ಕೆಲ ನಟಿಯರು ಅಂತಹ ಆಮಿಷವನ್ನು ಕಾಲಿನಲ್ಲಿ ಒದ್ದು ಚಿತ್ರರಂಗದಿಂದಲೇ ಹೊರಬಂದಿರುವ ಉದಾಹರಣೆ ಇದೆ. ಎರಡು ವರ್ಷಗಳ ಹಿಂದೆ ಮೀಟೂ ಅಭಿಯಾನ ನಡೆದಾಗ ಹಲವು ನಟಿಯರು ತಮಗಾದ ಕಿರುಕುಳವನ್ನು ಹೇಳಿಕೊಳ್ಳುವ ಧೈರ್ಯ ಮಾಡಿದ್ದರು. ಆದರೆ, ಹೇಳಿಕೊಂಡವರ ಪ್ರಮಾಣ ಶೇ 1 ಕೂಡಾ ಇರಲಾರದು.
ಪ್ರೊಡ್ಯೂಸರ್‌ಗಳ ಆಸೆಗಳೇ ಬೇರೆ ಇರುತ್ತವೆ– ಕನ್ನಡ ನಟಿ ಚಿತ್ರಾಲ್
ಚಿತ್ರದ ಬಗ್ಗೆ ಬಂದು ಮಾತನಾಡುವ ತಂಡದವರಿಗೆ ಅದೊಂದೇ ಉದ್ದೇಶ ಇರುವುದಿಲ್ಲ ಎಂದು ನಟಿ ಚಿತ್ರಾಲ್ ಹೇಳಿಕೊಂಡಿದ್ದರು. “ಒಮ್ಮೆ ಒಂದು ಪ್ರೊಡಕ್ಷನ್ ಹೌಸ್‌ನವರು ಫರ್ನೀಚರ್ ಇಲ್ಲದ ಆಫೀಸಿಗೆ ಕರೆಯುತ್ತಾರೆ. ಸೆಕೆಂಡ್ ಹೀರೋಯಿನ್ ಕೈಕೊಟ್ಟಿದ್ದಾರೆ, ನಿಮ್ಮನ್ನೇ ಆ ಪಾತ್ರಕ್ಕೆ ತೊಗೊಬೇಕು ಎಂದು ನಿರ್ಧಾರ ಮಾಡಿದ್ದೇವೆ, ನೀವು ತೊಡೆ ಸ್ವಲ್ಪ ಸಣ್ಣ ಮಾಡ್ಬೇಕು ಮೇಡಂ. ಯಾಕಂದ್ರೆ ಶಾರ್ಟ್ಸ್ ಹಾಕೋಬೇಕಾಗುತ್ತೆ ಅಂದ್ರು. ನಟಿ ರಂಭಾ ತೊಡೆಗಳಿಂದ ಫೇಮಸ್ ಆದೋರು, ನೀವೇನು ಹೀಗೆಲ್ಲ ಹೇಳ್ತೀರಿ ಸಾರ್? ಎಂತ ಬೋಲ್ಡ್ ಆಗಿಯೇ ಹೇಳಿದ್ದೆ. ಅಷ್ಟಕ್ಕೇ ಆತ ಕೈ ಹಿಡಿಯಲು ಬಂದ” ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೆಲವರು ಪ್ರೊಡ್ಯೂಸರ್‌ಗಳಿಗೆ ಏನೇನೋ ಆಸೆಗಳಿರುತ್ತವೆ. ನಿರ್ದೇಶಕನಿಗೆ ಹಣ ಮಾಡಬೇಕು ಎಂದಿರುತ್ತದೆ. ಅಲ್ಲಿ ಸಿನಿಮಾ ನಡೆಯಲ್ಲ, ಬೇರೆ ಏನೇನೋ ಆಗುತ್ತದೆ ಎಂಬುದು ಆಕೆಯ ಮಾತು.

ಫ್ರೆಂಡ್ಲಿ ಬೇಡಿಕೆ– ಬಾಲಿವುಡ್ ನಟಿ ಇಶಾ ಕೊಪ್ಪೀಕರ್
ಬಾಲಿವುಡ್ ನಟಿ ಇಶಾ ಕೊಪ್ಪೀಕರ್ ಕಳೆದ ಜೂನ್‌ನಲ್ಲಿ ಸಂದರ್ಶನವೊಂದರಲ್ಲಿ ತಮ್ಮ ಆರಂಭದ ದಿನಗಳಲ್ಲಿ ಆದ ಅನುಭವವನ್ನು ಹಂಚಿಕೊಂಡಿದ್ದರು. ತಾವು 22-23ರ ವಯಸ್ಸಿನಲ್ಲಿದ್ದಾಗ ಖ್ಯಾತ ನಟರೊಬ್ಬರು ಏಕಾಂಗಿಯಾಗಿ ಭೇಟಿಯಾಗುವಂತೆ ತಿಳಿಸಿದ್ದರು. ಅದಕ್ಕೆ ಆತ ಕೊಟ್ಟ ಕಾರಣ, “ನನ್ನ ಬಗ್ಗೆ ಈಗಾಗಲೇ ಕಾಂಟ್ರವರ್ಸಿಗಳಿವೆ. ಜೊತೆಗೆ ಬರುವ ಸಹಾಯಕರು ಗಾಳಿ ಸುದ್ದಿ ಹಬ್ಬಿಸುತ್ತಾರೆ. ಹಾಗಾಗಿ ಡ್ರೈವರ್ ಸೇರಿದಂತೆ ಯಾರೊಬ್ಬರೂ ಜೊತೆಗೆ ಬರೋದು ಬೇಡ ಎಂಬುದಾಗಿತ್ತು. ನಾನು ಒಬ್ಬಳೇ ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದೆ. ನಾನು 18ನೇ ವಯಸ್ಸಿನವಳಾಗಿದ್ದಾಗ ಒಬ್ಬ ನಟ ಮತ್ತು ಆತನ ಸಹಾಯಕ ನನಗೆ ಕಾಸ್ಟಿಂಗ್ ಕೌಚ್‌ಗೆ ಒತ್ತಾಯಿಸಿದ್ದರು. ನೀನು ಹೆಚ್ಚು ಅವಕಾಶ ಪಡೆಯಬೇಕಿದ್ದರೆ ನಟರ ಜೊತೆ ಫೆಂಡ್ಲಿಯಾಗಿ ಇರಬೇಕು ಎಂದಿದ್ದರು. ನಾನು ಎಲ್ಲರ ಜೊತೆಗೂ ಫ್ರೆಂಡ್ಲಿಯಾಗಿಯೇ ಇರುತ್ತೇನೆ, ಆದರೆ ನೀವು ಹೇಳಿದ ಫ್ರೆಂಡ್ಲಿಯ ಅರ್ಥವೇನು ಎಂದು ಪ್ರಶ್ನಿಸಿದ್ದೆ” ಎಂದು ಹೇಳಿಕೊಂಡಿದ್ದರು.
ʼಗಾಡ್‌ಫಾದರ್ʼನಿಂದ ಬೇಡಿಕೆ- ಬಹುಭಾಷಾ ನಟಿ ನಯನತಾರಾ
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರು ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಚಿತ್ರರಂಗ ಮತ್ತು ಟೆಲಿವಿಷನ್ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ಇರುವುದು ತೆರೆದ ಸತ್ಯ. ಅನೇಕ ನಟಿಯರು ವರ್ಷಗಳಿಂದ ತಮಗಾದ ಅನುಭವಗಳನ್ನು ಹೇಳುತ್ತಲೇ ಬಂದಿದ್ದಾರೆ. ನನಗೂ ಒಬ್ಬ ʼಗಾಡ್ ಫಾದರ್ʼ ಕಾಸ್ಟಿಂಗ್ ಕೌಚ್‌ಗೆ ಒತ್ತಾಯಿಸಿದ್ದರು. ಉತ್ತಮ ಪಾತ್ರದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ. ಯಾಕೆಂದರೆ ನನಗೆ ನನ್ನ ಪ್ರತಿಭೆಯ ಬಗ್ಗೆ ನಂಬಿಕೆಯಿತ್ತು. ಚಿತ್ರೋದ್ಯಮ ಮತ್ತು ಸಮಾಜ ಈ ನಡವಳಿಕೆಯನ್ನು ವಿರೋಧಿಸಬೇಕು. ಇದು ಲೈಂಗಿಕ ಶೋಷಣೆಗೆ ಸಮ” ಎಂದು ಹೇಳಿಕೊಂಡಿದ್ದರು.

ರಿಯಲ್ ಎಸ್ಟೇಟ್‌ನವರಿಂದ ಶುರುವಾದ ಚಾಳಿ– ಕನ್ನಡ ನಟಿ ಆಶಿಕಾ
‘ರೋಡ್ ರೋಮಿಯೋ’, ‘ಗ್ರೀನ್ ಸಿಗ್ನಲ್’, ‘ಬಾ ಬಾರೋ ರಸಿಕ’, ‘ಮೈ ಗ್ರೀಟಿಂಗ್ಸ್’, ‘ತವರಿನ ಸಿರಿ’, ‘ಆಕಾಶ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಆಶಿಕಾ ಚಿತ್ರರಂಗದಿಂದ ದಿಢೀರ್ ದೂರಾಗಿದ್ದರು. 2022ರಲ್ಲಿ ಯುಟ್ಯೂಬ್‌ವೊಂದಕ್ಕೆ ಸಂದರ್ಶನ ನೀಡಿದ ಅವರು ಚಿತ್ರರಂಗದಿಂದ ದೂರಾದ ಕಾರಣ ಬಹಿರಂಗಪಡಿಸಿದ್ದರು. “ನನಗೂ ಮೀಟೂ ಅನುಭವ ಆಗಿದೆ. ಒಬ್ಬ ನಿರ್ದೇಶಕರು ನಾನು ಸಲುಗೆಯಿಂದ ಅವರ ಜೊತೆ ಇರಬೇಕು, ನಗು ನಗುತ್ತಾ ಮಾತನಾಡಬೇಕು ಎಂದು ಬಯಸಿದ್ದರು. ಆದರೆ ನಾನು ಆ ರೀತಿ ಇರುತ್ತಿರಲಿಲ್ಲ. ಯಾಕೆಂದರೆ ಅದರ ಅವಶ್ಯಕತೆ ಇರಲಿಲ್ಲ, ನನ್ನಲ್ಲಿ ಪ್ರತಿಭೆ ಇತ್ತು.

1998ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಬರಲಿಲ್ಲ. ಆ ನಂತರ ಸಿನಿಮಾ ಸ್ವಲ್ಪ ಕಮರ್ಷಿಯಲ್ ಆಗಲು ಶುರುವಾಯಿತು. 2006-07ರ ಸಮಯದಲ್ಲಿ ಯಾರ್ಯಾರೋ ಚಿತ್ರರಂಗಕ್ಕೆ ಬಂದರು. ರಿಯಲ್ ಎಸ್ಟೇಟ್‌ನವರೆಲ್ಲಾ ಬರಲು ಶುರು ಮಾಡಿದ್ದರು. ಆ ಸಮಯದಲ್ಲಿ ಬೇರೆ ತರಹದ ಬೇಡಿಕೆಗಳು ಶುರುವಾಯಿತು. ಸಾಮಾನ್ಯವಾಗಿ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಕೆಲವರಿಗೆ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ನನಗೆ ಆರಂಭದಲ್ಲಿ ಸಮಸ್ಯೆ ಎದುರಾಗಲಿಲ್ಲ. ಪೀಕ್‌ನಲ್ಲಿರುವಾಗ ಸಮಸ್ಯೆ ಆಯ್ತು” ಎಂದು ಹೇಳಿಕೊಂಡಿದ್ದರು.
ದೈಹಿಕ ಹಲ್ಲೆಯೂ ನಡೆಯುತ್ತದೆ–ಮಲಯಾಳಂ ನಟಿ ಮಮಿತಾ ಬೈಜು
ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ಬಾಲಾ ವಿರುದ್ಧ ಮಲಯಾಳಂ ನಟಿ ಮಮಿತಾ ಬೈಜು ಕಳೆದ ವರ್ಷ ಹಲ್ಲೆಯ ಆರೋಪ ಮಾಡಿದ್ದರು. “ʼವನಂಗಾನ್’ ಸಿನಿಮಾದಲ್ಲಿ ನನ್ನ ಪಾತ್ರವು ಹಾಡುತ್ತ, ನೃತ್ಯ ಮಾಡಬೇಕಿತ್ತು. ಆದರೆ ಅದು ನನಗೆ ಗೊತ್ತಿರಲಿಲ್ಲ. ನನ್ನ ಪಾತ್ರವು ಅದರಲ್ಲಿ ತುಂಬ ಅನುಭವ ಹೊಂದಿರುವಂತೆ ಚಿತ್ರಿಸಬೇಕಿತ್ತು. ನನಗೆ ಆತಂಕ ಉಂಟಾಗಿತ್ತು. ಬಾಲಾ ಅವರು ಓರ್ವ ‘ವಿಲ್ಲಾಡಿ ಚಂಪಾಟು’ ಕಲಾವಿದೆಗೆ ನನ್ನನ್ನು ಪರಿಚಯಿಸಿದರು. ಅವರು ನೃತ್ಯ ಮಾಡುವುದನ್ನು ನೋಡಲು ನನಗೆ ಹೇಳಿದರು. ಆದರೆ, ಬಾಲಾ ಅವರು ಕೂಡಲೇ, ಟೇಕ್‌ಗೆ ಹೋಗುತ್ತಿದ್ದೇವೆ ಎಂದು ಘೋಷಿಸಿದರು. ನಾನು ಆಘಾತಕ್ಕೊಳಗಾಗಿದ್ದೆ. ಯಾಕೆಂದರೆ, ನಾನು ಅದಕ್ಕೆ ಸಿದ್ಧವಾಗಿರಲಿಲ್ಲ. ನಂತರ ಚಿತ್ರದಿಂದ ಹೊರ ಹೋಗಬೇಕಾಯ್ತು” ಎಂದು ಮಮಿತಾ ಹೇಳಿಕೊಂಡಿದ್ದರು.

ಸಿನಿಮಾ ಮಾತ್ರವಲ್ಲ ಬೇರೆ ಬೇರೆ ದುಡಿಯುವ ಜಾಗಗಳಲ್ಲಿ ಆದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸುವುದಕ್ಕೆಂದೇ #MeToo ಅಭಿಯಾನ ಹುಟ್ಟಿಕೊಂಡು ಒಂದೂವರೆ ದಶಕವೇ ಕಳೆದಿದೆ. ಈ ಮಧ್ಯೆ MeToo ಎಂದವರು ಬೆರಳೆಣಿಕೆಯ ಮಹಿಳೆಯರು. ಮಿಕ್ಕವರು ಸಹಿಸಿಕೊಂಡು ಸಂಕಟ ಪಡುತ್ತಿದ್ದಾರೆ. ಆದರೂ ಈ ಪದ ಆಗಾಗ ಸದ್ದು ಮಾಡುತ್ತಿರುತ್ತದೆ. ಯಾಕೆಂದರೆ ಇದನ್ನು ಹೇಳಿಕೊಳ್ಳಲು ಬೇರೆ ವೇದಿಕೆಯೇ ಇಲ್ಲ.
ಏನಿದು #MeToo ಅಭಿಯಾನ ?
2008ರಲ್ಲಿ ಅಮೆರಿಕದ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅಲಿಸ್ಸಾ ಮಿಲಾನೊ ಟ್ವಿಟರ್‌ನಲ್ಲಿ “ನೀವು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಈ ಟ್ವೀಟ್‌ಗೆ ಪ್ರತ್ಯುತ್ತರವಾಗಿ #MeToo ಎಂದು ಬರೆಯಿರಿ” ಎಂದು ಟ್ವೀಟ್ ಮಾಡಿದ್ದರು.
ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ವಿರುದ್ಧದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಬರೆದ ಪೋಸ್ಟ್ ಅದು. ಒಂದು ದಶಕದ ನಂತರ ಅಂದರೆ, 2018ರಲ್ಲಿ ತರಾನಾ ಬರ್ಕ್ ಎಂಬವರಿಂದ ಮೀಟು ಅಭಿಯಾನಕ್ಕೆ ಮತ್ತೆ ಜೀವ ಬಂತು. ಕಾಸ್ಟಿಂಗ್ ಕೌಚ್‌ಗೆ ಒಳಗಾದ ಅನೇಕ ನಟಿಯರು #Metoo ಅಡಿ ತಮ್ಮ ನೋವುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು.

ಆ ಸಂದರ್ಭದಲ್ಲಿ ಬಾಲಿವುಡ್‌ನ ಖ್ಯಾತ ನಟಿ ತನುಶ್ರೀ ದತ್ತ ಅವರು, ತಾವು ನಟಿಸಿರುವ 2008ರಲ್ಲಿ ಬಿಡುಗಡೆಯಾದ ʼಹಾರ್ನ್ ಒಕೆ ಪ್ಲೀಸ್ʼ ಎಂಬ ಚಿತ್ರದ ಸೆಟ್‌ನಲ್ಲಿ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದು ಭಾರೀ ಸದ್ದು ಮಾಡಿತ್ತು. “ಸಿನಿಮಾದಲ್ಲಿ ನಾನು ಒಬ್ಬಳೇ ಐಟಂ ಸಾಂಗ್‌ಗೆ ಡಾನ್ಸ್ ಮಾಡಬೇಕಿತ್ತು. ಆಗ ಅಲ್ಲಿದ್ದ ನಾನಾ ಪಾಟೇಕರ್ ನನ್ನನ್ನು ತಬ್ಬಿಕೊಂಡು ಅಶ್ಲೀಲ ದೃಶ್ಯವೊಂದರಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರು ಮತ್ತು ನನ್ನೊಂದಿಗೆ ಸೆಕ್ಸಿ ಡಾನ್ಸ್ ಮಾಡಿದರು. ಆ ಸಂದರ್ಭ ತುಂಬಾ ಅಸಹನೀಯವಾಗಿತ್ತು ಎಂದು ತನುಶ್ರೀ ದತ್ತ ವಿವರಿಸಿದ್ದರು. ಈ ಬಗ್ಗೆ ತಾವು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹತ್ತು ವರ್ಷದ ಹಿಂದೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಮಾತನಾಡಿದ್ದರು. ಅದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಾನಾ ಪಾಟೇಕರ್ ಸಹಜವಾಗಿಯೇ ಆರೋಪವನ್ನು ಅಲ್ಲಗಳೆದಿದ್ದರು. ಘಟಾನುಘಟಿಗಳು ನಾನಾ ಬೆಂಬಲಕ್ಕೆ ನಿಂತಿದ್ದರು.

ಇದಾದ ನಂತರ ಲೇಖಕಿ, ನಿರ್ಮಾಪಕಿ ವಿಂತಾ ನಂದಾ ಅವರು ನಟ ಅಲೋಕ್ ನಾಥ್ ಅವರಿಂದ ಹಲವು ಬಾರಿ ಅತ್ಯಾಚಾರಕ್ಕೊಳಗಾದ ಬಗ್ಗೆ ಬರೆದುಕೊಂಡಿದ್ದರು. ನಟನ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸಿನಿ ಮತ್ತು ಟಿವಿ ಕಲಾವಿದರ ಸಂಘ (ಸಿಐಎನ್‌ಟಿಎಎ) ಅಲೋಕ್ ನಾಥ್ ಅವರನ್ನು ಸಂಘದಿಂದ ಹೊರಹಾಕಿತ್ತು. ಹೀಗೆ ಮೀಟೂ ಅಭಿಯಾನ ಚಿತ್ರರಂಗದ ಪುರುಷರ ಕರಾಳತೆಯ ಕತೆಗಳನ್ನು ಒಂದೊಂದಾಗಿ ಬಿಚ್ಚುವಂತೆ ಮಾಡಿತ್ತು.
ಬಾಲಿವುಡ್ ಸಿನಿಮಾ ನಿರ್ಮಾಪಕ ಸಾಜಿದ್ ಖಾನ್ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರಿಂದ ಕಿರುಕುಳದ ಆರೋಪಗಳು ಬಂದ ನಂತರ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಒಂದು ವರ್ಷದವರೆಗೆ ಅಮಾನತುಗೊಳಿಸಿತು. ಬಿಪಾಶಾ ಬಸು ಮತ್ತು ದಿಯಾ ಮಿರ್ಜಾ ಸೇರಿದಂತೆ ಹಲವು ನಟಿಯರು ಸಹ ಚಲನಚಿತ್ರಗಳ ಸೆಟ್‌ಗಳಲ್ಲಿ ಅವರ “ಅಶ್ಲೀಲ” ವರ್ತನೆಯ ಬಗ್ಗೆ ಆರೋಪ ಮಾಡಿದ್ದರು.
ಸುಭಾಷ್ ಘಾಯ್, ಅನು ಮಲಿಕ್, ಕೈಲಾಶ್ ಖೇರ್, ರಜತ್ ಕಪೂರ್, ವಿವೇಕ್ ಅಗ್ನಿಹೋತ್ರಿ, ರಘು ದೀಕ್ಷಿತ್, ಉತ್ಸವ್ ಚಕ್ರವರ್ತಿ #MeToo ಬಿರುಗಾಳಿಗೆ ಸಿಲುಕಿದ ಕೆಲವು ಪ್ರಮುಖ ಹೆಸರುಗಳು.
ಮಹಿಳಾ ನಿರ್ದೇಶಕರಾದ ಅಲಂಕೃತಾ ಶ್ರೀವಾಸ್ತವ, ಗೌರಿ ಶಿಂಧೆ, ಕಿರಣ್ ರಾವ್, ಕೊಂಕಣಾ ಸೇನ್ ಶರ್ಮಾ, ಮೇಘನಾ ಗಿಜಾರ್, ನಂದಿತಾ ದಾಸ್, ನಿತ್ಯಾ ಮೆಹ್ರಾ, ರೀಮಾ ಕಾಗ್ತಿ, ರುಚಿ ನರೇನ್, ಸೋನಾಲಿ ಬೋಸ್ ಮತ್ತು ಜೋಯಾ ಅಖ್ತರ್ #MeToo ಅಭಿಯಾನವನ್ನು ಬೆಂಬಲಿಸಿ ಆರೋಪಿತರೊಂದಿಗೆ ಕೆಲಸ ಮಾಡುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ್ದರು.

ಜಸ್ಟಿಸ್ ಹೇಮಾ ಕಮಿಟಿ ವರದಿಯನ್ನು ಬಾಲಿವುಡ್ ನಟಿ ತನುಶ್ರೀ ದತ್ತಾ ಟೀಕಿಸಿದ್ದಾರೆ. ದುಡಿಯುವ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಡೆಗೆ ವಿಶಾಖ ಗೈಡ್‌ಲೈನ್ಸ್ ಇದೆ. ಅದನ್ನು ಯಾರೂ ಪಾಲಿಸುತ್ತಿಲ್ಲ. ಏನೇ ವರದಿಗಳನ್ನು ನೀಡಿದರೂ ನಾನಾ ಪಾಟೇಕರ್, ದಿಲೀಪ್ ತರಹದವರು ಶಿಕ್ಷೆಗೆ ಗುರಿಯಾಗಲ್ಲ. ವರ್ಷಗಳ ಕಾಲ ಪುಟಗಟ್ಟಲೆ ವರದಿ ತಯಾರಿಸಿ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆ ಸಕಾಲಿಕ.
ಮೊದಲು ಸಕಲ ಚಿತ್ರರಂಗದ ಪುರುಷರು ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ನಂತರ ಅದನ್ನು ತಡೆಯುವ ನಿಟ್ಟಿನಲ್ಲಿ ಗಂಭೀರವಾದ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು. ಸ್ತ್ರೀಪೀಡಕ ಕಲಾವಿದ ಎಷ್ಟೇ ದೊಡ್ಡವನಾಗಿದ್ದರೂ ಚಿತ್ರರಂಗದಿಂದ ಶಾಶ್ವತವಾಗಿ ದೂರವಿಡಬೇಕು. ಅಂತಹ ದಿನಗಳು ಬೇಗ ಬರಲಿ. ಜಸ್ಟಿಸ್ ಹೇಮಾ ಸಮಿತಿಯ ವರದಿ ಅಂತಹದೊಂದು ಮನ್ವಂತರಕ್ಕೆ ಪ್ರೇರಣೆಯಾಗಲಿ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.