ತುಮಕೂರು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ಹಾನಿ,ಮನೆ ಹಾನಿ, ಬೆಳೆ ಹಾನಿಗೊಳಗಾದವರು ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ತಕ್ಷಣವೇ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆ.19ರಂದು ಸುರಿದ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತೀವೃಷ್ಟಿ, ಅನಾವೃಷ್ಟಿ ಸೇರಿದಂತೆ ನೈಸರ್ಗಿಕ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಪ್ರಕೃತಿ ವಿಕೋಪಗಳಿಂದಾಗುವ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು 21.92 ಕೋಟಿ ರೂ. ಹಣ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಲಭ್ಯವಿದ್ದು, ತುರ್ತು ಪರಿಸ್ಥಿತಿಯಲ್ಲಿ ಖರ್ಚು ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಈವರೆಗೆ 592 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.94ರಷ್ಟು ಅಧಿಕ ಮಳೆಯಾಗಿದೆ. ಅಧಿಕ ಮಳೆಯಿಂದ ಹೆಚ್ಚಿನ ನಷ್ಟ ಉಂಟಾಗಿಲ್ಲ. ಮಳೆ ನೀರಿನಿಂದ ಜಿಲ್ಲೆಯಲ್ಲಿ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿರುವ 371 ಕೆರೆಗಳ ಪೈಕಿ 18 ಕೆರೆಗಳು ಶೇ.51 ರಿಂದ 99ರಷ್ಟು ಹಾಗೂ 10 ಕೆರೆಗಳು ಪೂರ್ಣ ತುಂಬಿವೆ. ಜಿಲ್ಲಾ ಪಂಚಾಯತಿ ಹಾಗೂ ಸಣ್ಣ ನೀರಾವರಿ ವ್ಯಾಪ್ತಿಯೊಳಗೆ ಪೂರ್ಣ ತುಂಬಿರುವ ಯಾವುದೇ ಕೆರೆಗಳ ಕೋಡಿ ಒಡೆದಿಲ್ಲ. ಎಲ್ಲ ಕೆರೆ ಕೋಡಿಗಳು ಸುರಕ್ಷಿತವಾಗಿವೆ ಎಂದು ಮಾಹಿತಿ ನೀಡಿದರು.
ಕಳೆದ ಜೂನ್ ಮಾಹೆಯಿಂದ ಈವರೆಗೆ ಮಳೆಯಿಂದ 135 ಭಾಗಶಃ ಹಾನಿಗೊಳಗಾದ ಹಾಗೂ ಸಂಪೂರ್ಣ ಹಾನಿಗೊಳಗಾದ 5 ಮನೆಗಳ ಸಂತ್ರಸ್ತರಿಗೆ 11.29 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಸುಮಾರು 43 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಬೆಳೆಯನ್ನು ಸರ್ವೆ ಮಾಡಿ ಉಂಟಾದ ನಷ್ಟವನ್ನು ಅಂದಾಜಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದಲ್ಲಿ ಹಣವಿಲ್ಲವೆಂದು ವಿಪಕ್ಷದವರು ಕೊಂಕಿನ ಮಾತನಾಡುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಹಣದ ಕೊರತೆಯಿಲ್ಲ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸರಿಸುಮಾರು 700 ಕೋಟಿ ರೂ.ಗಳ ಹಣ ಲಭ್ಯವಿದ್ದು, ತುರ್ತು ಪರಿಸ್ಥಿತಿಯಲ್ಲಿ ವಿನಿಯೋಗಿಸಲು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ನೈಸರ್ಗಿಕ ವಿಕೋಪಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆ ಹೊರತುಪಡಿಸಿ ಎಲ್ಲ ತಾಲ್ಲೂಕುಗಳ ತಹಶೀಲ್ದಾರರ ಪರಿಹಾರ ನಿಧಿಯಲ್ಲಿ 3.47 ಕೋಟಿ ರೂ. ಹಣ ಲಭ್ಯವಿದ್ದು, ವಿಪತ್ತು ನಿರ್ವಹಣಾ ನಿಯಮಗಳನ್ವಯ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಬೇಕೆಂದು ಆಯಾ ತಹಶೀಲ್ದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಧುಗಿರಿ ತಾಲ್ಲೂಕು ಚನ್ನಸಾಗರ ಜಯಮಂಗಲಿ ನದಿಗೆ ರಕ್ಷಣೆ ಗೋಡೆ ಕಟ್ಟಬೇಕಿತ್ತು. ಮಳೆ ನೀರು ಹೆಚ್ಚಾದಾಗ ಜಯಮಂಗಲಿ ನದಿ ನೀರಿನ ಬ್ಯಾರೇಜ್ ತುಂಬಿ ಚೆನ್ನಸಾಗರ ಗ್ರಾಮಕ್ಕೆ ಹೆಚ್ಚುವರಿ ನೀರು ನುಗ್ಗುವುದರಿಂದ ಗ್ರಾಮಸ್ಥರ ಜನ-ಜೀವನ ಅಸ್ತವ್ಯಸ್ತವಾಗುತ್ತದೆ. ಮುಂದಿನ ಬೇಸಿಗೆಯಲ್ಲಿ ವೈಜ್ಞಾನಿಕವಾಗಿ ಬ್ಯಾರೇಜ್ ನಿರ್ಮಿಸಲು ಯೋಜನೆಯನ್ನು ರೂಪಿಸಬೇಕೆಂದು ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಸತತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಪ್ರಸಕ್ತ ಸಾಲಿಗಾಗಿ ಹೆಚ್ಚಿನ ಅಂದರೆ 3.27ಲಕ್ಷ ಕೋಟಿ ರೂ.ಗಳ ಆಯವ್ಯಯವನ್ನು ಮಂಡಿಸಿರುವುದರಿAದ ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡಿದರೂ ಸಹ, ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣವಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ಬರಗಾಲದಲ್ಲಿ 36 ಸಾವಿರ ಕೋಟಿ ರೂ.ಗಳ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಹಲವಾರು ಬಾರಿ ಮನವಿ ಮಾಡಿದ ನಂತರ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 3000 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 5300 ಕೋಟಿ ರೂ.ಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ನೀಡಲಾಗುವುದು ಎಂದು ಹೇಳಿದ್ದರು. ಈಗ ವಾಪಸ್ ಪಡೆದುಕೊಂಡಿದ್ದಾರೆ. ಇದು ಮಲತಾಯಿ ಧೋರಣೆ. ದೇಶದಲ್ಲಿ ಜಿಎಸ್‌ಟಿ ಕಟ್ಟುವುದರಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ ನೀಡುವುದರಲ್ಲಿ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
