ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯರವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಅತ್ಯಂತ ಬಾಲಿಶವಾದದ್ದು. ಒಂದು ವೇಳೆ ಉಚ್ಚನ್ಯಾಯಾಲಯದಲ್ಲಿ ತನಿಖೆ ಅನುಮತಿ ರದ್ದು ಮಾಡದೇ ಇದ್ದರು, ನ್ಯಾಯಾಲಯ ಸರಿಯಿದೆ ಎಂದರೂ ಕೂಡ ಪಿರ್ಯಾದುದಾರ ಏನು ಮಾಡಲು ಸಾಧ್ಯ ಎಂದು ಕಾನೂನು ತಜ್ಞ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
“ಒಬ್ಬ ಸರ್ಕಾರಿ ನೌಕರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದರೆ ಆತನ ಮೇಲಧಿಕಾರಿಗಳಿಂದ ಅನುಮತಿ ಪಡೆಯಬೇಕೆಂಬುದು ಕಾನೂನು” ಎಂದರು.
ಸಿದ್ಧರಾಮಯ್ಯನವರ ವಿರುದ್ಧ ಇರುವ ಮುಡಾ ಹಗರಣ ಪ್ರಕರಣಕ್ಕೆ ಕುರಿತಂತೆ ಕಾನೂನು ತಜ್ಞ ವೇಣುಗೋಪಾಲ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜುಲೈ 1ರಿಂದ ಅಪರಾಧ ಪ್ರಕ್ರಿಯೆ ಸಂಹಿತೆ ಬದಲಾಗಿ ಬಿಎನ್‌ಎಸ್‌ಎಸ್ ಕಾಯ್ದೆ ಜಾರಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೇಸ್ ಮಾಡಬೇಕು ಅಂದರೆ ಯಾರು ಪ್ರಮಾಣ ವಚನ ಬೋಧಿಸಿದರು ಅವರು ಅನುಮತಿ ನೀಡಬೇಕು ಎನ್ನುವುದಿದೆ. ಹಾಗಾಗಿ ಪಿರ್ಯಾದುದಾರ ರಾಜ್ಯಪಾಲರ ಅನುಮತಿ ಕೋರಿದ್ದಾರೆ ಅಷ್ಟೆ” ಎಂದು ತಿಳಿಸಿದರು.
“ಹಗರಣಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮಾಡಿ, ಅದಕ್ಕೆ ಪೂರಕವಾಗಿ ಲಂಚ ಪಡೆದಿದ್ದಾರೆ, ಲಾಭಾಂಶ ಪಡೆದಿದ್ದಾರೆ ಎನ್ನುವ ಆರೋಪವಿಲ್ಲ. ಆದರೆ, ದೂರುದಾರರ ಪ್ರಕಾರ ಹಲವಾರು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿ ಸಿದ್ಧರಾಮಯ್ಯನವರ ಪತ್ನಿ ಹೆಸರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎನ್ನುವುದೇ ಈಗಿರುವ ಪ್ರಕರಣ” ಎಂದರು.
“ಔಚಿತ್ಯ ಅಂದರೆ ಈ ಪ್ರಕರಣದ ವಿಚಾರವಾಗಿ ಸಿದ್ದರಾಮಯ್ಯನವರ ಬಗ್ಗೆ ಮಾತ್ರ ಆರೋಪ ಕೇಳಿಬರುತ್ತಿದೆ. ಅಪರಾಧಿಕ ಒಳಸಂಚು ಅಂದರೆ ಕನಿಷ್ಠ ಇಬ್ಬರು ಇಲ್ಲ ಅದಕ್ಕೂ ಮೀರಿದಂತೆ ಸೇರಿ ನಡೆದ ಅಪರಾಧ. ಆದರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಒಬ್ಬರ ಮೇಲೆ ಅನುಮತಿ ಕೋರಲಾಗಿದೆಯೇ ಹೊರತು ಇನ್ಯಾರನ್ನು ಭಾಗಿ ಮಾಡಿಲ್ಲ. ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಲ್ಯಾಂಡ್ ಅಕ್ವೈರ್ ಆಫೀಸರ್, ಮುಡಾ ಅಭಿವೃದ್ಧಿ ಅಧಿಕಾರಿ, ಸಬ್ ರಿಜಿಸ್ಟ್ರಾರ್ ಸೇರಿದಂತೆ ಇನ್ನೂ ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕೂಡ ಆರೋಪವಿದೆ” ಎಂದು ಹೇಳಿದರು.
“ಒಬ್ಬ ಅಪರಾಧಿಯ ಮೇಲೆ ಅನುಮತಿ ಪಡೆದು, ಇನ್ನುಳಿದ ಅಪರಾಧಿಗಳ ಅನುಮತಿ ಪಡೆಯದೆ ನ್ಯಾಯಾಲಯಕ್ಕೆ ಹೋದರೆ ಕಾನೂನು ಪ್ರಕಾರ ನ್ಯಾಯಾಲಯ, ʼಇನ್ನುಳಿದ ಆರೋಪಿಗಳ ಮೇಲೆ ಯಾಕೆ ಅನುಮತಿ ಪಡೆದಿಲ್ಲʼವೆಂದು ಪ್ರಶ್ನೆ ಮಾಡುತ್ತದೆ. ಯಾಕೆಂದರೆ ಅಪರಾಧ ಮಾಡಬೇಕಾದರೆ ಎಲ್ಲರೂ ಸೇರಿಯೇ ನಡೆದಿರುತ್ತೆ, ಹೀಗಿರುವಾಗ ಏಕವ್ಯಕ್ತಿಯ ಮೇಲೆ ಅನುಮತಿ ಪಡೆದಿರುವುದು ಸರಿಯಲ್ಲ. ಎಲ್ಲರ ಮೇಲೂ ಅನುಮತಿ ಪಡೆದು, ಜಿಲ್ಲಾಧಿಕಾರಿಗಳ ಮೇಲೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ” ಎಂದು ತಿಳಿಸಿದರು.
“ರಾಜ್ಯಪಾಲರಿಗೆ ದೂರುದಾರರು ದೂರು ಕೊಟ್ಟಾಗ ರಾಜ್ಯಪಾಲರು ಕೇವಲ ಸಿದ್ದರಾಮಯ್ಯ ಅವರ ಮೇಲೆ ಮಾತ್ರ ಯಾಕೆ ಅನುಮತಿ ಕೇಳುತ್ತಿದ್ದೀರಾ? ಇನ್ನುಳಿದ ಸರ್ಕಾರಿ ಅಧಿಕಾರಿಗಳ ಮೇಲೆ ಯಾಕೆ ಅನುಮತಿ ಕೇಳುತ್ತಿಲ್ಲವೆಂದು ಪ್ರಶ್ನೆ ಮಾಡಬೇಕಿತ್ತು. ಆದೆ ಅವರು ಏಕಮುಖವಾಗಿ ಅನುಮತಿ ನೀಡಿದ್ದಾರೆ. ಅಲ್ಲದೆ ಕೂಡಲೇ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ರಾಜ್ಯಪಾಲರು ನೋಟಿಸ್ ಕೊಡಲು ಕಾನೂನಿನಲ್ಲಿ 120 ದಿನಗಳ ಕಾಲಮಿತಿ ಇದೆ. ರಾಜ್ಯಪಾಲರು ಯಾವಾಗ ಬೇಕಾದರೂ ಅನುಮತಿ ನೀಡಬಹುದು. ರಾಜ್ಯಪಾಲರು ಈ ದೂರು ಸೂಕ್ತವಾಗಿದೆಯಾ ಎಂಬುದರ ಕುರಿತು ಪ್ರಾಥಮಿಕ ತನಿಖೆಯಿಂದ ಖಚಿತ ಪಡಿಸಿಕೊಂಡು ನಂತರ ತಮ್ಮ ನಿಲುವಿನಲ್ಲಿ ತನಿಖೆಗೆ ಅನುಮತಿ ನೀಡುವುದಕ್ಕಾಗಿ 120 ದಿನಗಳ ಕಾಲಮಿತಿ ನೀಡಲಾಗಿರುತ್ತದೆ” ಎಂದು ಹೇಳಿದರು.
“ಆದರೆ, ರಾಜ್ಯಪಾಲರು ಯಾವುದೇ ತನಿಖೆ ಮಾಡದೆ, ಸತ್ಯಾಸತ್ಯತೆ ತಿಳಿಯದೆ ಒಂದೇ ದಿನದಲ್ಲಿ ಏಕವ್ಯಕ್ತಿ ತನಿಖೆಗೆ ಅನುಮತಿ ನೀಡಿ, ಶೋಕಾಸ್ ನೋಟಿಸ್ ನೀಡಿರುವ ಪರಿಣಾಮ ಯಾವುದೇ ಭ್ರಷ್ಟಾಚಾರದ ಕೇಸ್ ನಡೆಸಲು ಸಾಧ್ಯವೇ ಇಲ್ಲ. ಕೇವಲ ಏಕಮುಖವಾಗಿ ಸಿದ್ದರಾಮಯ್ಯ ಒಬ್ಬರ ಮೇಲೆ ತನಿಖೆಗೆ ಅನುಮತಿ ಪಡೆದು ಇನ್ನುಳಿದವರ ಕೈಬಿಟ್ಟು ಪ್ರಕರಣ ನಡೆಸುವುದಾದರು ಹೇಗೆ? ಲಾಜಿಕಲ್ ಎಂಡ್‌ಗೆ ಈ ಪ್ರಕರಣ ತೆಗೆದುಕೊಂಡು ಹೋಗಬೇಕೆನ್ನುವ ದೃಷ್ಟಿ ಇದ್ದಿದ್ದರೆ ದೂರುದಾರರು ಈ ಪ್ರಕರಣದಲ್ಲಿನ ಎಲ್ಲರ ಮೇಲೂ ಅನುಮತಿ ಪಡೆದು ನ್ಯಾಯಾಲಯಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳ ಮೇಲಿನ ಅನುಮತಿಗೆ ಅರ್ಜಿ ಕೂಡ ಸಲ್ಲಿಸದ ದೂರುದಾರರು, ಇನ್ನುಳಿದ ಅಧಿಕಾರಿಗಳ ಮೇಲೂ ತನಿಖೆಯಾಗಬೇಕೆಂದು ಎಲ್ಲಿಯೂ ಹೇಳಿಲ್ಲ. ರಾಜ್ಯಪಾಲರು ಅದನ್ನು ಪ್ರಶ್ನೆಯನ್ನೂ ಮಾಡದೆ ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ಮಾಡಲು ಹೇಗೆ ಸಾಧ್ಯ?” ಎಂದಿದ್ದಾರೆ.
“ಈಗ ಪ್ರಕರಣ 17Aನಲ್ಲಿ ಕೊಟ್ಟಿರುವ ಅನುಮತಿ. ಇದನ್ನು ನ್ಯಾಯಾಲಯದಲ್ಲಿ ದೂರುದಾರ ಕೊಡಲು ಬರುವುದಿಲ್ಲ. 17Aನಲ್ಲಿ ಪೊಲೀಸ್ ಅಧಿಕಾರಿಗೆ ಮಾತ್ರ ತನಿಖೆ ಮಾಡುವ ಅಧಿಕಾರವಿರುವುದು. ಆ ಅಧಿಕಾರಿ ಮತ್ತೆ ಮೇಲಧಿಕಾರಿಗಳ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಅನುಮತಿ ಕೊಟ್ಟಿರೋದು ದೂರುದಾರರಿಗೆ. ಹಾಗಾಗಿ ಆ ದೂರುದಾರ ಮತ್ತೆ ಲೋಕಾಯುಕ್ತ ಪೊಲೀಸರಿಗೆ ದೂರು ಕೊಡಬೇಕು. ರಾಜ್ಯಪಾಲರು ಲೋಕಾಯುಕ್ತಕ್ಕೆ ನೇರವಾಗಿ ಕೊಡಬಹುದಿತ್ತು. ಜತೆಗೆ ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ನಡೆಸಲು ಹೇಗೆ ಆಗುತ್ತೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯ” ಎಂದು ಹೇಳಿದ್ದಾರೆ.
“ಹೊಸದಾಗಿ ಬಂದಿರುವ ಬಿಎನ್‌ಎಸ್‌ಎಸ್ ಕಾಯ್ದೆ ಸೆಕ್ಷನ್ 223ರ ಪ್ರಕಾರ ಖಾಸಗಿವ್ಯಕ್ತಿ ಸರ್ಕಾರಿ ನೌಕರ, ಮುಖ್ಯಮಂತ್ರಿ ಯಾರೇ ಆದರೂ ಖಾಸಗಿ ದೂರು ಸಲ್ಲಿಸಬೇಕೆಂದರೆ ಕಾನೂನು ಪ್ರಕಾರ ಯಾವುದೇ ನ್ಯಾಯಾಲಯ ಆರೋಪಿಯ ಮಾತನ್ನು ಆಲಿಸದೆ ಕ್ರಿಮಿನಲ್ ಪ್ರಕರಣ ನೋಂದಾಯಿಸಲು ಬರುವುದಿಲ್ಲ. ಖಾಸಗಿ ವ್ಯಕ್ತಿ ಸರ್ಕಾರಿ ಅಧಿಕಾರಿ, ಜನಪ್ರತಿನಿಧಿ ಮೇಲೆ ಅನುಮತಿ ಕೋರಬೇಕೆಂದರೆ ಮೂರು ಹಂತದ ಕಂಡೀಷನ್ ಪೂರ್ಣಗೊಳಿಸಲೇಬೇಕು. ಕ್ರಿಮಿನಲ್ ಮೊಕದ್ದಮೆ ಮೊದಲೇ ದಾಖಲಿಸಿರಬೇಕು.
ನ್ಯಾಯಾಲಯ ಆರೋಪಿಯನ್ನು ವಿಚಾರಿಸಿರಬೇಕು ಹಾಗೂ ಮೇಲಧಿಕಾರಿಗಳ ವರದಿ ಪಡೆದಿರಬೇಕು. ಇದೆಲ್ಲವನ್ನೂ ಪಡೆದ ನಂತರ ನ್ಯಾಯಾಲಯ ರದ್ದು ಮಾಡಿರಬಾರದು, ಪೆಂಡಿಂಗ್ ಇಟ್ಟಿರಬೇಕು. ಆಗ ನ್ಯಾಯಾಲಯ ದೂರುದಾರನಿಗೆ ಮುಖ್ಯಮಂತ್ರಿಗಳ ಮೇಲೆ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಅನುಮತಿ ತೆಗೆದುಕೊಂಡು ಬರಲು ಆದೇಶ ಮಾಡಬೇಕು. ಆಗ ದೂರುದಾರ ರಾಜ್ಯಪಾಲರ ಬಳಿ ಹೋಗಿ ಅನುಮತಿ ಪಡೆಯಲು ಅರ್ಜಿ ಹಾಕಬೇಕು. ಇದು ಕಾನೂನು ರೀತ್ಯಾ ನಡೆಯುವ ಪ್ರಕ್ರಿಯೆ. ಆದರೆ ಮುಡಾ ಹಗರಣ ಪ್ರಕರಣದಲ್ಲಿ ದೂರುದಾರ ಇದನ್ನೆಲ್ಲ ಮಾಡದೆ, ಪ್ರಕರಣ ದಾಖಲು ಮಾಡದೆ, ನ್ಯಾಯಾಲಯ ಆದೇಶ ಮಾಡದೆ, ದೂರುದಾರ ರಾಜ್ಯಪಾಲರ ಬಳಿ ಹೋಗಿ ಅನುಮತಿ ಕೋರಿದ್ದಾರೆ” ಎಂದರು.
ರಾಜ್ಯಪಾಲರು ಪರಾಮರ್ಶಿಸಿ ನೀವು ಖಾಸಗಿ ವ್ಯಕ್ತಿ, ಯಾವುದೇ ತನಿಖಾ ಅಧಿಕಾರಿಯಲ್ಲ, ಮೊಕದ್ದಮೆ ಹೂಡಿದ ಪ್ರತಿ, ನ್ಯಾಯಾಲಯದ ಆದೇಶ ಪ್ರತಿ ಇದನ್ನೆಲ್ಲ ಪಡೆದು ನಂತರ ವಿವೇಚನೆ ಚಲಾಯಿಸಬೇಕಿತ್ತು. ಆದರೆ ರಾಜ್ಯಪಾಲರು ಇದನ್ನೆಲ್ಲ ಮಾಡದೆ ಖಾಸಗಿ ದೂರಿಗೆ ಏಕ ವ್ಯಕ್ತಿಯ ಮೇಲೆ ಅನುಮತಿ ನೀಡಿರುವುದು ಕಾನೂನು ಪ್ರಕ್ರಿಯೆ ಅಲ್ಲವೇ ಅಲ್ಲ. ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ ಕಾಣುತ್ತಿದ್ದು, ದೂರು ದಾಖಲು ಆಗುವುದಕ್ಕಿಂತ ಮೊದಲೇ ಅನುಮತಿ ಪಡೆದಿದ್ದರಿಂದ ಮ್ಯಾಜಿಸ್ಟ್ರೇಟ್ ಮುಂದೆ ವಿಶೇಷ ನ್ಯಾಯಾಲಯದಲ್ಲಿ ಸಿದ್ದರಾಮಯ್ಯನವರ ಮೇಲಿನ ಪ್ರಕರಣ ಪೆಂಡಿಂಗ್ ಇದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ : ಬೆಳಗಾವಿ ಜಿಲ್ಲೆಯೊಂದರಲ್ಲೇ ₹1.89 ಕೋಟಿ ದಂಡ ವಸೂಲಿ!
“ರಾಜ್ಯಪಾಲರ ತರಾತುರಿ ತೀರ್ಮಾನ ನ್ಯಾಯಾಲಯದ ಇಡೀ ಪ್ರಕ್ರಿಯೆಯನ್ನೇ ಗಾಳಿಗೆ ತೂರಿ ನೀಡಿದ ಅನುಮತಿ ಇದಾಗಿದೆ. ಸೆಕ್ಷನ್ 223ರ ಅನ್ವಯ ನ್ಯಾಯಾಲಯದ ನಡಾವಳಿ ಪ್ರಕಾರ ರಾಜ್ಯಪಾಲರು ಅನುಮತಿ ನೀಡಿಲ್ಲ. ಯಾರದ್ದೋ ಕೈಗೊಂಬೆಯಾಗಿ ಸಿದ್ಧರಾಮಯ್ಯನವರ ಮೇಲೆ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ರೀತಿಯಲ್ಲಿ ನಡೆದಿಲ್ಲ” ಎಂದು ಕಾನೂನು ತಜ್ಞ ವೇಣುಗೋಪಾಲ್ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
