ರಾಜ್ಯಪಾರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸಿ ಮತ್ತು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, “ದಲಿತರ ವಿರುದ್ಧ ಕಾಂಗ್ರೆಸ್ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದರು.
“ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ನಿಮ್ಮ ಥರ ಕರಿ ಕಾಗೆ ಅಲ್ಲ. ಅವರು ಕಳಂಕವೇ ಇಲ್ಲದವರು” ಎಂದರು.
“ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ. ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಿಮ್ಮ ಮಂಡೆಯಲ್ಲಿ ಬುದ್ಧಿ ಇಲ್ಲ. ‘ಹುಲಿಯಾ..’ ಎಂದಾಗ ಖುಷಿ ಪಡುತ್ತಿದ್ದ ನೀವೀಗ ‘ಕರಿಯ’ ಆಗಿ ಕೂತಿದ್ದೀರಲ್ಲಾ. ಎಷ್ಟು ವೈಟ್ನರ್ ಹಾಕಿದ್ರೂ ಬಿಳಿ ಆಗೋದಿಲ್ಲ ಮಾರಾಯರೇ. ದಯವಿಟ್ಟು ರಾಜೀನಾಮೆ ಕೊಟ್ಟು ಹೋಗಿಬಿಡಿ” ಎಂದು ವ್ಯಂಗ್ಯವಾಡಿದರು.
“ಇಡೀ ರಾಜ್ಯ ಸಿದ್ದರಾಮಯ್ಯನವರ ವಿರುದ್ಧ ಇದೆ. ದಲಿತರಿಗೆ ಮೀಸಲಿಟ್ಟ ಹಣ ವರ್ಗಾವಣೆ ಪ್ರಕರಣ, ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ- ಇವೆಲ್ಲವೂ ದಲಿತ ಸಮುದಾಯಕ್ಕೆ ಸೇರಿದ ವಿಚಾರಗಳು. ಕಾಂಗ್ರೆಸ್ ಪಕ್ಷ ದಲಿತರ ಸಮಾಧಿ ಮಾಡುತ್ತಿದ್ದರೆ ಸ್ವಾಮೀಜಿಗಳು ಆ ಸಮಾಧಿ ಮೇಲೆ ಕುಳಿತು ಅವರಿಗೆ ಬೆಂಬಲ ಕೊಡುವುದು ಸರಿಯೇ” ಎಂದು ಪ್ರಶ್ನಿಸಿದರು.
ಜನಹಿತಕ್ಕಾಗಿ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ
“ಜನಹಿತ, ರಾಜ್ಯದ ಹಿತ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಭ್ರಷ್ಟ ಸರಕಾರದ ವಿರುದ್ಧ ನಾವು ಜನಜಾಗೃತಿ ಮೂಡಿಸಬೇಕು. ಪ್ರತಿನಿತ್ಯ ಹೋರಾಟ ಮಾಡುವುದೇ ನಮ್ಮ ಕರ್ತವ್ಯವಾಗಿದೆ” ಎಂದು ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
“ಇವರು ಸಂವಿಧಾನ ಕೈಯಲ್ಲಿ ಹಿಡಿದು ಹಕ್ಕುಗಳ ಮಾತನಾಡುತ್ತಾರೆ. ಆದರೆ, ತಮ್ಮ ಕರ್ತವ್ಯ, ಜವಾಬ್ದಾರಿಗಳ ಕುರಿತು ಮಾತನಾಡುವುದಿಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸುವುದಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಬಿಐ ತನಿಖೆಗೆ ಎನ್.ರವಿಕುಮಾರ್ ಒತ್ತಾಯ
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, “ಸಿದ್ದರಾಮಯ್ಯನವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ ಹಗರಣಗಳ ತನಿಖೆಯನ್ನು ಸಿಬಿಐಗೆ ಕೊಡಬೇಕು. ವೈಟ್ನರ್ ಹಚ್ಚಿದ್ದು ತಮ್ಮ ಸರಕಾರದ ಅವಧಿಯಲ್ಲಿ ಅಲ್ಲ ಎಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳಬೇಕು” ಎಂದು ಸವಾಲು ಹಾಕಿದರು.
ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರಾದ ಮುನಿರತ್ನ, ಗೋಪಾಲಯ್ಯ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಜನಿವಾರ ಕಟ್ಟಿಕೊಂಡ ದಲಿತ ನಾಯಕರೆ,, ಸಿದ್ದರಾಮಯ್ಯ ಅಹಿಂದ ನಾಯಕನೇ ಎರಡು ಮಾತಿಲ್ಲ,,ನೀನೇನಾಗಿದಿ ತಿರುಗಿ ನೋಡಿಕೊಂಡರೆ,,ಮನುವ್ಯಾದಿಗಳ ಚೌಕಿದಾರ ಅಗಿರುವಿ,, ಕೇಂದ್ರದಲ್ಲಿ UPSC ಹುದ್ದೆಗಳಿಗೆ ಮೀಸಲಾತಿ ಪಬ್ಲಿಷ್ ಮಾಡೇಯಿಲ್ಲ,,ಕೀ ಹುದ್ದೆಗಳಿಗೆ ಎಲ್ಲಾ ಗರ್ಭಗುಡಿಯ ಅರ್ಚಕರನ್ನು ತುಂಬುವ ವ್ಯವಸ್ಥಿತ ಕುತಂತ್ರ ನಡೆದಿದೆ,, ಒಂಚೂರು ಬಾಯಿಬಿಡಪ್ಪಾ ದಲಿತ ನಾಯಕ,,