“ರಾಜ್ಯಪಾಲರು ಪ್ರಜಾಪ್ರಭುತ್ವದ ಆಶಯವನ್ನು ಭಗ್ನಗೊಳಿಸಿ ಸಂವಿಧಾನ ವಿರೋಧಿಗಳಂತೆ ನಡೆದುಕೊಂಡಿರುವುದು ಖಂಡನೀಯ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ವಿರೋಧಿ ಹಾಗೂ ಜನ ವಿರೋಧಿ ನಡತೆ ಖಂಡನೀಯ. ಕಾಂಗ್ರೆಸ್ ಪಕ್ಷ ತನ್ನ ಮಂಪರಿನಿಂದ ಹೊರಬರಬೇಕು. ದೇಶ ಒಡೆಯುವ ಶಕ್ತಿಗಳ ಮೇಲೆ ಕಠಿಣ ಕ್ರಮಗಳಿಗೆ ಮುಂದಾಗಬೇಕು. ಜನಪರ ಆಡಳಿತ ನೀಡುವ ಮೂಲಕ ಅವರ ಸಂಚುಗಳನ್ನು ವಿಫಲಗೊಳಿಸಬೇಕು” ಎಂದು ಎದ್ದೇಳು ಕರ್ನಾಟಕದ ಸದಸ್ಯರು ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ನ್ಯಾಯಾಲಯವು ರಾಜ್ಯಪಾಲರ ಕೀಳುಮಟ್ಟದ ರಾಜಕೀಯ ನಡೆಯನ್ನು ತಿರಸ್ಕರಿಸುವ ಮೂಲಕ ದೇಶದ ಸಂವಿಧಾನಿಕ ಮೌಲ್ಯಗಳ ಘನತೆಯನ್ನು ಕಾಪಾಡಬೇಕು. ರಾಜ್ಯ ಸರ್ಕಾರ ಜನಪರ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಜವಾಬ್ದಾರಿ. ಜನರ ಪರವಾದ ಆಡಳಿತ ನೀಡುವಂತೆ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಳುವ ಪಕ್ಷದ ಮೇಲೆ ವಿರೋಧ ಪಕ್ಷ ಒತ್ತಡ ಹಾಕಿದರೆ ಅದು ರಚನಾತ್ಮಕ ಕೆಲಸವಾಗುತ್ತದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರ ಬದುಕಿನ ಒಂದೇ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ವಿಧಾನಸಭೆಯಲ್ಲಿ ಗಟ್ಟಿ ದನಿ ಎತ್ತಿಲ್ಲ ಅಥವಾ ಬೀದಿಗಿಳಿದು ಹೋರಾಟ ನಡೆಸಿಲ್ಲ. ಅದು ಮಾಡುತ್ತಿರುವ ಏಕೈಕ ಕೆಲಸವೆಂದರೆ ಜನರು ಆಯ್ಕೆ ಮಾಡಿರುವ ಸಂವಿಧಾನಿಕ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುವುದು. ಇದು ರಾಜ್ಯದ್ರೋಹಿ ಹಾಗೂ ಜನ ವಿರೋಧಿ ಕೆಲಸವಾಗಿದೆ ಎಂದು ಆರೋಪಿಸಿದರು.
ಭ್ರಷ್ಟ ವ್ಯಕ್ತಿಗಳಿಗೆ ಹಾಗೂ ದುಷ್ಟ ಶಕ್ತಿಗಳಿಗೆ ಆಶ್ರಯತಾಣವಾಗಿರುವ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ವಿಚಾರವಾಗಿದೆ. ಸಿಬಿಐ, ಇಡಿ, ಐಟಿಗಳಂತಹ ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳುವುದು, ಆಪರೇಷನ್ ಕಮಲ ಮಾಡಿ ಜನರು ಆಯ್ಕೆ ಮಾಡಿದ ಸರ್ಕಾರಗಳನ್ನು ಕೆಡವುವುದು ಅದರ ಹವ್ಯಾಸವಾಗಿಬಿಟ್ಟಿದೆ. ಇಲ್ಲಿ ಈ ಬಾರಿ ರಾಜ್ಯಪಾಲರನ್ನು ಬಳಸಿಕೊಂಡು ಜನರು ಆರಿಸಿದ ಸರ್ಕಾರವನ್ನು ಕೆಡವುವ ಪ್ರಯತ್ನದಲ್ಲಿ ತೊಡಗಿದೆ. ಅವಕಾಶವಾದವನ್ನು ಅರೆದು ಕುಡಿದಿರುವ ಜೆಡಿಎಸ್ ಆತ್ಮವಂಚನೆ ಮಾಡಿಕೊಳ್ಳುತ್ತಾ ಬಿಜೆಪಿಯ ದುಷ್ಟ ರಾಜಕಾರಣಕ್ಕೆ ವೇದಿಕೆಯನ್ನು ಒದಗಿಸುತ್ತಿದೆ. ಈ ಎರಡು ಪಕ್ಷಗಳ ಕಪಟ ರಾಜಕಾರಣವನ್ನು ನಾವು ತೀವ್ರ ರೀತಿಯಲ್ಲಿ ಖಂಡಿಸುತ್ತೇವೆ. ಈ ನಡತೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಕೂಡಲೇ ತಿದ್ದಿಕೊಳ್ಳದಿದ್ದಲ್ಲಿ ರಾಜ್ಯದ ಜನತೆಯಿಂದ ಇನ್ನೂ ತೀವ್ರ ಸ್ವರೂಪದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆದರೆ, ನಾವು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಸಂತುಷ್ಟರಾಗಿದ್ದೇವೆ ಎಂದಲ್ಲ. 2023ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುವುದರಲ್ಲಿ ನಾಗರಿಕ ಸಂಘಟನೆಗಳ ದೊಡ್ಡ ಪಾತ್ರವಿದೆ. ನಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಆಡಳಿತ ನೀಡುತ್ತಿಲ್ಲ ಎಂಬ ಪ್ರಜ್ಞೆ ನಮಗಿದೆ. ಸೂಕ್ತ ಸಂದರ್ಭದಲ್ಲಿ ನಾವದನ್ನು ಮುಂದಿಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗಮನಕ್ಕೆ ಒಂದು ಮುಖ್ಯ ವಿಚಾರ ತರಲೇಬೇಕಿದೆ. “ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳ ಬಗೆಗಿನ ನಿಮ್ಮ ಮೃದು ಧೋರಣೆಯನ್ನು ಈಗಲಾದರೂ ಕೈಬಿಡಿ. ನಿಮ್ಮ ಪಕ್ಷದ ಹಲವು ಸ್ತರಗಳಲ್ಲಿ ಬಲಪಂಥೀಯ ಶಕ್ತಿಗಳ ಜೊತೆ ಮುಂದುವರೆಸಿಕೊಂಡು ಬರುತ್ತಿರುವ ಒಳ ಸಂಬಂಧಗಳನ್ನು, ಒಳ ಒಪ್ಪಂದಗಳನ್ನು ಈಗಲಾದರೂ ತುಂಡರಿಸಿಕೊಳ್ಳಿ. ಸಂವಿಧಾನಿಕ ಆಶಯಗಳ ಜೊತೆ ದೃಢವಾಗಿ ನಿಲ್ಲಿ. ದೇಶ ಒಡೆಯುವ ಶಕ್ತಿಗಳ ಮೇಲೆ ಕಠಿಣ ಕ್ರಮಗಳಿಗೆ ಮುಂದಾಗಿ. ನಿಜವಾಗಿಯೂ ನೀವು ಬಿಜೆಪಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸುವಂತಹ ಜನಪರ ನಡತೆಗಳ ಮೂಲಕ ಆ ಶಕ್ತಿಗಳಿಗೆ ಈ ರಾಜ್ಯದಲ್ಲಿ ಜಾಗವಿಲ್ಲದಂತೆ ಮಾಡಿ” ಎಂದು ಒತ್ತಾಯಿಸಿದರು.
ಎದ್ದೇಳು ಕರ್ನಾಟಕದ ಪರವಾಗಿ ವೀರಸಂಗಯ್ಯ – ಕಾರ್ಯಾಧ್ಯಕ್ಷರು; ಕರ್ನಾಟಕ ರಾಜ್ಯ ರೈತ ಸಂಘ, ಯೂಸೂಫ್ ಕನ್ನಿ – ಉಪಾಧ್ಯಕ್ಷರು; ಜಮಾತೆ ಇಸ್ಲಾಮಿ ಹಿಂದ್, ಕೆ.ಎಲ್. ಅಶೋಕ್ – ರಾಜ್ಯ ಕಾರ್ಯದರ್ಶಿಗಳು; ಕರ್ನಾಟಕ ಜನಶಕ್ತಿ, ಬಿ.ಟಿ. ಲಲಿತಾ ನಾಯ್ಕ್ – ಮಾಜಿ ಸಚಿವರು, ಎನ್. ವೆಂಕಟೇಶ್ – ದಲಿತ ಸಂಘರ್ಷ ಸಮಿತಿ, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ಕ್ರೈಸ್ತ ಸಮುದಾಯದ ಹಿರಿಯ ಮುಖಂಡ ಡಾ. ರೆವರೆಂಡ್ ಮನೋಹರ್ ಚಂದ್ರಪ್ರಸಾದ್ ಉಪಸ್ಥಿತರಿದ್ದರು.