ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಖಂಡಿಸಿರುವ ಎಸ್‌ಎಫ್‌ಐ, ಕೂಡಲೇ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭವಾಗಿ 2-3 ತಿಂಗಳು ಕಳೆದರೂ ಕೂಡ ಹಾಸ್ಟೆಲ್ ಬಯಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಾಗಿ ಅರ್ಜಿ ಹಾಕಿದ್ದಾರೆ. ಆದರೆ ಇನ್ನೂ ಕೂಡ ಆಯ್ಕೆ ಪಟ್ಟಿ ಪ್ರಕಟಿಸಿಸಲ್ಲ. ಇದರಿಂದಾಗಿ ಪ್ರತಿದಿನ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ಹಣ ಕೊಟ್ಟು ಬರುತ್ತಿದ್ದಾರೆ. ಒಂದೆಡೆ ಅನೇಕ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ ಮತ್ತು ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಹಾಕಿ ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ದೂರದ ಊರಿನಿಂದ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ ಎಸ್‌ಎಫ್‌ಐ ಹಾವೇರಿ ಮುಖಂಡ ಬಸವರಾಜ್ ಎಸ್ ಹೇಳಿದರು.
2024-25ನೇ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆ ವಿಳಂಬ ನೀತಿಯನ್ನು ಖಂಡಿಸಿ, ಅಧಿಕಾರಿಗಳ ನಿರ್ಲಕ್ಷ್ಯತನ ವಿರೋಧಿಸಿ, ಕೂಡಲೇ ಆಯ್ಕೆ ಬಿಡುಗಡೆ ಹಾಗೂ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಸೌಕರ್ಯ ಕಲ್ಪಿಸಲು ಹಾಗೂ ಹೆಚ್ಚುವರಿ ಹಾಸ್ಟೆಲ್ ಮಂಜೂರು ಮಾಡುವಂತೆ ಒತ್ತಾಯಿಸಿ ಎಸ್ಎಫ್ಐ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮೂರು ತಿಂಗಳು ಕಳೆದರು ಈವರೆಗೂ ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ನಡೆಸದೆ ಇಷ್ಟೊಂದು ನಿರ್ಲಕ್ಷ್ಯತನ ತೋರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಡೆ ಸರಿಯಲ್ಲ. ಅಧಿಕಾರಿಗಳು ಮುಂಜಾಗ್ರತೆಯ ವಹಿಸಿ ಕಾಲೇಜು ಪ್ರಾರಂಭವಾಗುವ ಸಂದರ್ಭದಲ್ಲಿಯೇ ಹಾಸ್ಟೆಲ್ ಆಯ್ಕೆ ನಡೆಯಬೇಕು. ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಕಲ್ಪಿಸಬೇಕು ಎಂದು ಬಸವರಾಜ್ ಎಸ್ ಒತ್ತಾಯಿಸಿದರು.
ಮೆನು ಚಾರ್ಟ್ ಪ್ರಕಾರ ಉತ್ತಮ ಗುಣಮಟ್ಟದ ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಹಾಗೂ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 3.500 ರೂ ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸುಲೈಮಾನ್ ಮತ್ತಿಹಳ್ಳಿ ಮಾತನಾಡಿ, ಪ್ರತಿ ನಿತ್ಯವು ಕಾಲೇಜ್, ಹಾಸ್ಟೆಲ್, ಕಚೇರಿ ಓಡಾಡಿ ಸಾಕಾಗಿದೆ ಸಾಮಾನ್ಯ ಬಡ ವಿದ್ಯಾರ್ಥಿಗಳನ್ನು ಅಲೆದಾಡಿಸುವುದು ಖಂಡನೀಯ. ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಕಾಲೇಜ್ ಹಾಸ್ಟೆಲ್ ಏಕಕಾಲದಲ್ಲಿ ಪ್ರಾರಂಬಿಸಿಬೇಕು. ಕೂಡಲೇ ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕು ಒಂದುವೇಳೆ ಇದೆ ನಿರ್ಲಕ್ಷ್ಯತನ ಮುಂದುವರೆದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮಾಲತೇಶ್ ಬ ದೊಡ್ಡಮನಿ, ನೇಹಾಲ್ ಖಾನ್ ಗಂಗಾವತಿ, ಗೌತಮ್ ಸಾವಕ್ಕನವರ, ವಿಜಯ ಶಿರಹಟ್ಟಿ ಉಪಸ್ಥಿತರಿದ್ದರು.
