ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ ಮಂಗಳೂರು ವಿಶ್ವ ವಿದ್ಯಾನಿಲಯದ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಕಡೆಯಿಂದ ದೊರಕಬೇಕಾದ ಭೌತಿಕ ಅಂಕಗಳನ್ನು ಹೊಂದಿದ ಅಂಕಪಟ್ಟಿ ದೊರೆಯುತ್ತಿರಲಿಲ್ಲ. ಈ ಸಮಸ್ಯೆಗೆ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ತೆರೆ ಎಳೆದಿದ್ದಾರೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
ಪ್ರಸ್ತುತ ಅಂಕಪಟ್ಟಿಗಳನ್ನು ಸರಕಾರದ ಹಲವಾರು ದಾಖಲೆಗಳನ್ನು ಹೊಂದಿರುವಮ ಪಡೆದುಕೊಳ್ಳಲು ಬಳಸುವ ಡಿಜಿಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯ ಸೂಚಿಸುತ್ತಿತ್ತು. ಆದರೆ ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ ಸಂಬಂದಪಟ್ಟ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ
ವಿಷಯಗಳು ಮತ್ತು ಪ್ರೊಜೆಕ್ಟ್ ವಿಷಯಗಳು, ಮತ್ತು ಉತ್ತೀರ್ಣ- ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದೇ, ಡಿಜಿಟಲ್ ಅಂಕಪಟ್ಟಿಗಳು ಕೇವಲ ಆನ್‌ಲೈನ್ ವ್ಯವಹಾರಗಳಿಗೆ ಸೀಮಿತವಾಗಿದೆ ಎಂಬ ಸೂಚನೆಯನ್ನೂ ಹೊಂದಿದೆ.

ಹತ್ತು ಹಲವು ದೋಷಗಳನ್ನು ಒಳಗೊಂಡ ಡಿಜಿಟಲ್ ಅಂಕಪಟ್ಟಿಗಳನ್ನು ಯಾವುದೇ ಕಂಪನಿಗಳು ಉದ್ಯೋಗಕ್ಕೆ ಸಂಬಂಧಿಸಿದ ಪರಿಶೀಲನೆ ವೇಳೆ ಮಾನ್ಯ ಮಾಡುತ್ತಿಲ್ಲ. ವಿಶೇಷವಾಗಿ ಹೊರದೇಶಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಭೌತಿಕ ಅಂಕಪಟ್ಟಿ ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು.
ಈ ಬಗ್ಗೆ ಎನ್ ಎಸ್ ಯು ಐ ಮುಖಂಡರಾದ ಸಾಹಿಲ್ ಮಂಚಿಲ ಮುಂತಾದವರು ಸಭಾಧ್ಯಕ್ಷ ಯು ಟಿ ಖಾದರ್ ರವರ ಬಳಿ ತಮ್ಮ ಸಮಸ್ಯೆಯನ್ನು ತಿಳಿಸಿದಾಗ ತಕ್ಷಣ ಸ್ಪಂದಿಸಿದ ಸಭಾಧ್ಯಕ್ಷರು ಉನ್ನತ ಶಿಕ್ಷಣ ಸಚಿವರ ಜೊತೆಯಲ್ಲಿ ಮಾತುಕತೆ ನಡೆಸಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಕರೆದು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ರಸ್ತೆ ಮೇಲೆಯೇ ಹರಿಯುತ್ತಿದೆ ಚರಂಡಿ ನೀರು; ಗಮನ ಹರಿಸದ ಗ್ರಾಮ ಪಂಚಾಯತ್ ಅಧಿಕಾರಿಗಳು!
ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಶ್ರೀಕರ್ ಎಂ.ಎಸ್, ಉನ್ನತ ಶಿಕ್ಷಣ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿ ಡಾ. ಭಾಗ್ಯವನ ಮುದಿಗೌಡ್ರ, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಇವಾಲ್ಯುವೇಷನ್ ಅಧಿಕಾರಿ ದೇವೇಂದ್ರಪ್ಪ ಹಾಗೂ ಎನ್ ಎಸ್ ಯು ಐ ನ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಒಂದು ವಾರದ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು, ಇದರಿಂದಾಗಿ ಸಮಸ್ಯೆಯಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
