ರೈತರು ಬದುಕಿಗಾಗಿ ಮಾಡಿರುವ ಕೃಷಿ ಒತ್ತುವರಿ ಜಮೀನನ್ನು ತೆರವು ಮಾಡಿದರೆ ಉಗ್ರ ಹೋರಾಟ ಹಮ್ಮಿಕೊಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರತುಪಡಿಸಿದ ಪ್ರದೇಶಗಳ ರೈತರುಗಳ ಮೇಲೆ ಹಾಕಿದ 64(ಎ) ರಡಿ ನೀಡಿದ ತೆರವು ನೋಟಿಸುಗಳನ್ನು ವಾಪಸ್ಸು ಪಡೆಯಬೇಕು ಮತ್ತು ಎಲ್ಲಾ ರೈತರುಗಳ ಮೇಲೆ ಹಾಕಿದ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಮಲೆನಾಡಿನ ಜನತೆಯು ಇಂದು ತನ್ನದೇ ಆದಂತಹ ಸಮಸ್ಯೆಗಳ ಸುಳಿವಿನಲ್ಲಿ ಸಿಲುಕಿದ್ದಾರೆ. ರೈತ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳು ನೂರಾರಿದೆ. ಅದೆಷ್ಟೋ ಕುಟುಂಬಗಳಿಗೆ ಇಂದಿಗೂ ತನ್ನ ಬದುಕಿಗೆ ಅಗತ್ಯವಾಗಿ ಬೇಕಾಗಿರುವ ವಸತಿ, ರಸ್ತೆ ಕುಡಿಯುವ ನೀರು ಹಾಗೂ ಅಗತ್ಯವಾಗಿ ಬೇಕಾಗಿರುವುದು ‘ಭೂಮಿಯ ಮೇಲೆ ಮಾಡಿರುವ ಕೃಷಿ ಮತ್ತು ವಸತಿಗೆ ಬೇಕಾಗಿರುವುದು ಹಕ್ಕುಪತ್ರ. ಭಾರತೀಯ ಪ್ರಜೆಯಾಗಿ ಪ್ರಜೆಗಳಿಂದಲೇ ರಚಿಸಲ್ಪಟ್ಟ ಕಾನೂನುಗಳನ್ನು ಬಡ ರೈತರ ಮೇಲೆ ಮಾತ್ರ ಕಾನೂನುಗಳ ತಪ್ಪು ಗ್ರಹಿಕೆಯ ಮೂಲಕ ಶೋಷಿಸುತ್ತಿವೆ ಎಂದು ದೂರಿದರು.
ಅರಣ್ಯ ಕಾನೂನುಗಳು ಕಠಿಣವಾಗಿದೆ ಎಂದು ಹೇಳುವ ಉದ್ದೇಶಪೂರ್ವಕವಾಗಿ ಕಾನೂನುಗಳ ತಪ್ಪು ಅರ್ಥ ವಿವರಣೆಯ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ರೈತರ ಹಾಗೂ ನಾಗರಿಕರ ಹಕ್ಕುಗಳಿಗೆ ಮೂಲಕ ಅರಣ್ಯ ಇಲಾಖೆಯವರು ಕಾನೂನಿನ ರಕ್ಷಣೆ ತಡೆಯೊಡ್ಡುತ್ತಿರುವುದು ಪ್ರಜಾ ಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಿದೆ. ಮಲೆನಾಡಿನ ಹೆಚ್ಚಿನ ರೈತರು ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದು ಇಲ್ಲಿನ ಕಾಡುಗಳನ್ನು ರಕ್ಷಿಸಿಕೊಂಡು ಬಂದಿರುತ್ತಾರೆ. ಆದರೆ ಪರಿಸರದ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ ವಿಶ್ವ ಪಾರಂಪರಿಕ ತಾಣ, ಮೀಸಲು ಅರಣ್ಯ, ಡೀಮ್ದ್ ಫಾರೆಸ್ಟ್ ಇನ್ನಿತರ ಅನೇಕ ಹೆಸರುಗಳಲ್ಲಿ ಮಲೆನಾಡನ್ನು ನರಳುವಂತೆ ಮಾಡಿದೆ. ಮಲೆನಾಡಿನ ಜನರು, ಅರಣ್ಯ ವಾಸಿಗಳು ಭೂಮಿಯ ತಾಪಮಾನದ ಏರಿಕೆಗೆ ಕಾರಣರಲ್ಲ. ಇವರನ್ನು ಕಾಡಿನಿಂದ ಹೊರಹಾಕಿದರೆ ಎಲ್ಲವು ಸರಿಯಾಗುತ್ತದೆ ಎಂಬುವುದು ಭ್ರಮೆಯಷ್ಟೇ ಎಂದು ಹೇಳಿದರು.
ಭೂ ತಾಪಮಾನದ ಏರಿಕೆಗೆ ಕಾರಣವಾಗಿರುವುದು ಮಾನವನ ಆಧುನಿಕ ಜೀವನ ಶೈಲಿಯಾಗಿದೆ. ಕಾರ್ಖಾನೆಗಳು ಮತ್ತು ಜನಸಂಖ್ಯಾ ಹೆಚ್ಚಳ ಮತ್ತು ವಾಹನಗಳ ಬಳಕೆಗಾಗಿ ಸುಡುತ್ತಿರುವ ಡೀಸೆಲ್, ಪೆಟ್ರೋಲ್ ಮತ್ತು ಇಂಧನಕ್ಕಾಗಿ ಸುಡುತ್ತಿರುವ ಕಲ್ಲಿದ್ದಲು, ಮತ್ತು ಆಧುನಿಕ ಸಂಪರ್ಕ ಸಾಧನಗಳು ಮದ್ದುಗಳು ಕ್ಷಿಪಣಿಗಳು ಇತ್ಯಾದಿಯಾಗಿದೆ” ಎಂದು ರೈತ ಸಂಘಟನೆ ಗೌರವಾಧ್ಯಕ್ಷರಾದ ಸುರೇಶ್ ಭಟ್ ಅವರು ತಿಳಿಸಿದರು.

ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅಗತ್ಯಕ್ಕೆ ತಕ್ಕಂತೆ ಅರಣ್ಯವಾಗಿ ಪರಿವರ್ತಿಸಿ, ಸಂಸೆ ಗ್ರಾಮದ ಸರ್ವೆ ನಂ.183ರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ರೈತರ ಅರಣ್ಯ ಕೃಷಿ ಭೂಮಿಯನ್ನು ಕಂದಾಯವನ್ನಾಗಿ ಪರಿವರ್ತಿಸಿ ಪಹಣಿ-ಪಟ್ಟಾ ನೀಡಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಗಿಟ್ಟ ಗ್ರಾಮಾಂತರ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ರೈತರು ಆಗ್ರಹಿಸಿದರು.

ಕಸ್ತೂರಿರಂಗನ್ ವರದಿ ಜಾರಯು ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೂ ಮತ್ತು ರೈತರುಗಳಿಗೆ ಕೆಲವು ನಿರ್ಬಂಧಗಳನ್ನು ಹೇರುವುದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಬಾರದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವು 56,319 ಹೆಕ್ಟರ್ ಪ್ರದೇಶವನ್ನು ಹೊಂದಿದ್ದು, ಮುಂದೆಯೂ ಜನರ ಸಹಕಾರದಿಂದ ಪ್ರಾಣಿ ವೈವಿದ್ಯತೆ ಮತ್ತು ಸಸ್ಯ ವೈವಿದ್ಯತೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶ್ರೀನಿವಾಸ್, ಟಿ ಎಲ್ ಕೃಷ್ಣೇಗೌಡ ಸೇರಿದಂತೆ ಮತ್ತಿತರರಿದ್ದರು.
