ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ವಿಶೇಷ ಜನಪ್ರತಿನಿಗಳ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿದೆ.
2,144 ಪುಟಗಳ ದೋಷಾರೋಪ ಪಟ್ಟಿಯಲ್ಲಿ 123 ಸಾಕ್ಷ್ಯಗಳನ್ನು ಸಂಗ್ರಹ ಮಾಡಿ, ಜನಪ್ರತಿನಿಧಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿ ಸುಮಾರಾಣಿ ಅವರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ ಇನ್ನು ಎರಡು ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಬೇಕಿದೆ.
“ಪ್ರಮುಖವಾಗಿ ಮನೆ ಕೆಲಸ ಸಂತ್ರಸ್ತ ಮಹಿಳೆಗೆ ರೇವಣ್ಣ ಮನೆಯಲ್ಲಿ ಮೈ ಕೈ ಮುಟ್ಟಿ ದೌರ್ಜನ್ಯ, ಹಣ್ಣುಕೊಡುವ ನೆಪದಲ್ಲಿ ಸೊಂಟ ಚಿವುಟಿ, ಸೀರೆ ಎಳೆದು ದೌರ್ಜನ್ಯ ಮಾಡಿದ್ದಾರೆ. ಪುತ್ರ ಪ್ರಜ್ವಲ್ ಹೊಳೆನರಸೀಪುರ, ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆಸಿದ್ದಾರೆ. ಹೊತ್ತಿಲ್ಲದ ಹೊತ್ತಿನಲ್ಲಿ ಸಂತ್ರಸ್ತೆಯ ಜೊತೆ ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು” ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅಪಹರಣ ಪ್ರಕರಣದಲ್ಲಿ ಸಮನ್ಸ್
ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಗುರುವಾರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಸೇರಿದಂತೆ 9 ಆರೋಪಿಗಳಿಗೆ ಆ.28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಸತೀಶ್‌ಬಾಬು, ಮನುಗೌಡ, ಕೆ.ಎ. ರಾಜಗೋಪಾಲ್ ಎಚ್.ಕೆ. ಸುಜಯ್, ಎಚ್.ಎನ್. ಮಧು, ಎಸ್.ಟಿ. ಕೀರ್ತಿ ಮತ್ತು ಅಜಿತ್ ಕುಮಾರ್‌ಗೆ ಐಪಿಸಿ ಸೆಕ್ಷನ್ 364 ‘ಎ’ ಕೈಬಿಟ್ಟು ಉಳಿದ ಆರೋಪಿಗಳಿಗೂ ಸಮನ್ಸ್ ನೀಡಲಾಗಿತ್ತು.
ಆರೋಪಿ ಭವಾನಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಎಸ್‌ಐಟಿ ಅಧಿಕಾರಿಗಳು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್ ವಿರುದ್ದ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.