ಕೊಡಗು ಹಾಗೂ ಮೈಸೂರು ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಬಸವನತ್ತೂರು ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದೆ.
ಬೆಳಗ್ಗೆ 6:30ರ ವೇಳೆಗೆ 2 ರಿಂದ 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಪಿರಿಯಾಪಟ್ಟಣ ತಾಲೂಕಿನ ಅಡುಗೂರು ಮತ್ತು ಕಣಗಾಲು ಸುತ್ತಮುತ್ತ ಭಾಗದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.
ಭೂಮಿ ಕಂಪಿಸುವ ವೇಳೆ ಗುಂಡಿಗಳಿರುವ ರಸ್ತೆಯಲ್ಲಿ ಲಾರಿ ಚಲಿಸುವಾಗ ಉಂಟಾಗುವ ಶಬ್ಧದಂತೆ ಸದ್ದು ಉಂಟಾಗಿದೆ. ಕೆಲವೆಡೆ ಡ್ಯಾಂನಲ್ಲಿ ನೀರು ಬಿಟ್ಟಾಗ ಆಗುವ ಶಬ್ಧ ಕೇಳಿದ ಅನುಭವ ಉಂಟಾಗಿದೆ. ಭೂಮಿಯಿಂದ ಬಂದ ವಿಚಿತ್ರ ಶಬ್ಧದಿಂದ ಜನ ಆತಂಕಕ್ಕೊಳಗಾಗಿದ್ದರು.
ಕುಶಾಲನಗರ, ಮುಳ್ಳುಸೋಗೆ, ಕೂಡುಮಂಗಳೂರು, ಹೆಬ್ಬಾಲೆಭಾಗದಲ್ಲಿ ಭಾರೀ ಶಬ್ದ ಉಂಟಾಗಿರುವುದಾಗಿ ವರದಿಯಾಗಿದೆ. ಕುಶಾಲನಗರದ ಜ್ಞಾನಭಾರತಿ ಶಾಲೆ ಹಿಂಭಾಗ, ಬಸವನತ್ತೂರು, ಹೆಬ್ಬಾಲೆಯ ಹಕ್ಕೆ, ಹುಲುಸೆ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿರುವ ಬಗ್ಗೆ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಗೂಗಲ್ನಲ್ಲಿ ತಪ್ಪು ಮಾಹಿತಿ: ‘ರಾಣಿಝರಿ’ ಬಿರುಕು ಬಿಟ್ಟಿತ್ತೆಂದು ಅಧಿಕಾರಿಗಳ ದೌಡು!
ಬೆಳಗ್ಗೆ 6.35 ರ ಸಮಯದಲ್ಲಿ ಎರಡು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವ ಉಂಟಾದ ಬಗ್ಗೆ ಕುಶಾಲನಗರದ ಮೋಹನ್ ಹಾಗೂ ಬಸವನತ್ತೂರಿನ ಮಂಜುನಾಥ್, ಹಕ್ಕೆಯ ಸುರೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಹುತೇಕ ಮಂದಿ ನಿದ್ರೆಯಲ್ಲಿದ್ದ ಕಾರಣ ಕೆಲವರಿಗಷ್ಟೇ ಕಂಪನದ ಅನುಭವ ಆಗಿದ್ದು, ಭೂಕಂಪನ ಉಂಟಾಗಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕಿದೆ.
