ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದ ವ್ಯಾಪ್ತಿಗೆ ಬರುವ ಕುದುರೆ ಮುಖಕ್ಕೆ ಸೇರುವ ಒಂದು ಪುಟ್ಟ ಗ್ರಾಮ ಕುನ್ನಿಹಳ್ಳ. ಈ ಗ್ರಾಮದಲ್ಲಿ ಮೂರು ಮನೆ, ಮೂರೇ ಜನ ವಾಸ ಮಾಡುತ್ತಿದ್ದಾರೆ. ಆ ಮೂರು ಜನ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಈ ದಿನ.ಕಾಮ್ ಕಳೆದ ಆಗಸ್ಟ್ 3ರಂದು ‘ಈ ಹಳ್ಳಿಯಲ್ಲಿರುವುದು ಮೂರೇ ಮನೆ, ಮೂರೇ ಜನ’ ಎಂದು ವಿಡಿಯೋ ಸಹಿತ ವರದಿ ಮಾಡಿತ್ತು.
ಈ ವರದಿಯ ಬಳಿಕ ಎಚ್ಚೆತ್ತ ಕುನ್ನಿಹಳ್ಳಕ್ಕೆ ಭೇಟಿ ನೀಡಿರುವ ಕಳಸ ತಾಲೂಕಿನ ಅಧಿಕಾರಿಗಳು, ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ಈ ದಿನ.ಕಾಮ್ ವಿಡಿಯೋ ಮೂಲಕ ಮಾಡಿದ್ದ ವರದಿ ಗಮನಿಸಿದ ಕೂಡಲೇ ಕಳಸ ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ಅಧಿಕಾರಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಕುನ್ನಿಹಳ್ಳಕ್ಕೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿರುವ ಕಳಸ ತಾಲೂಕು ತಹಶೀಲ್ದಾರ್ ದಯಾನಂದ ಹಾಗೂ ಶರತ್ ಕುಮಾರ್ (ಎಫ್.ಡಿ.ಎ), “ಅಲ್ಲಿನ ಮೂವರ ಸಮಸ್ಯೆಗಳನ್ನು ಆಲಿಸಿದ್ದೇವೆ. ನಮ್ಮ ಕಡೆಯಿಂದ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಈಗ ಪರಿಹಾರ ಮತ್ತು ಮೂಲಭೂತ ಸೌಕರ್ಯ ವ್ಯವಸ್ಥೆಗೆ ಅರಣ್ಯ ಇಲಾಖೆಯವರು ಈ-ಸ್ವತ್ತು ಕೊಡಬೇಕೆಂದು ಕೇಳುತ್ತಿದ್ದಾರೆ. ಆದರೆ ಈ-ಸ್ವತ್ತನ್ನು ಪಟ್ಟಣ ಪಂಚಾಯಿತಿಯಿಂದ ಒದಗಿಸಬೇಕಾಗಿದೆ. ನಾವು ಅವರ ಗಮನಕ್ಕೆ ತಂದಿದ್ದೇವೆ ಭೇಟಿ ನೀಡಿದ ದಿನ ಅರ್ಜಿ ಸಲ್ಲಿಸಿದ್ದಾರೆ” ತಿಳಿಸಿದ್ದಾರೆ.
‘ನಮ್ಮನ್ನು ಸ್ಥಳಾಂತರ ಮಾಡಿ’ ಎಂದು ಗೋಗರೆದಿದ್ದ ಮೂವರು
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರಾಷ್ಟ್ರೀಯ ಉದ್ಯಾನವನದ ಅಂಚಿನ ಕುನ್ನಿಹಳ್ಳ ಗ್ರಾಮದಲ್ಲಿ ದೇವರಾಜ್, ನಾಗರತ್ನ, ಶ್ಯಾಮಲಾ ಎಂಬುವರು ಮಾತ್ರ ವಾಸಿಸುತ್ತಿದ್ದಾರೆ.
ಕುದುರೆಮುಖ ಕಂಪನಿ ಆರಂಭವಾದಾಗಿನಿಂದಲೂ ಈ ಮೂವರು ಇಲ್ಲೇ ವಾಸವಿದ್ದಾರೆ. ಇವರಿಗೆ ರಸ್ತೆ, ನೀರು, ಕರೆಂಟ್ ಯಾವ ವ್ಯವಸ್ಥೆಯೂ ಇಲ್ಲ. ಸರ್ಕಾರದಿಂದ ಕೊಟ್ಟಿರುವ ಸೋಲಾರ್ ಲೈಟ್ ಇದೆ. ಆದರೆ, ವರ್ಷದ 6 ತಿಂಗಳು ಯಥೇಚ್ಛವಾಗಿ ಮಳೆ ಬೀಳುವ ಕಾರಣ ಸೋಲಾರ್ ಲೈಟ್ ಕೂಡ ಕೈಕೊಡುತ್ತಿತ್ತು. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕಾಟ ಕೂಡ ಹೆಚ್ಚಾಗಿಯೇ ಇದೆ. ಇಲ್ಲಿಂದ ಸ್ಥಳಾಂತರಿಸಿ ಎಂದು ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದರು.

“ಪ್ರತಿಯೊಂದು ವಸ್ತು ಖರೀದಿ ಮಾಡಲು ಕಳಸಕ್ಕೆ ಹೋಗಬೇಕಾಗುತ್ತದೆ. ರೇಷನ್ ಒಂದು ಕುದುರೆಮುಖದಲ್ಲಿ ಸಿಗುತ್ತದೆ. ಅದನ್ನ ಬಿಟ್ಟು ಎಲ್ಲದಕ್ಕೂ ಕಳಸಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಮನೆ-ಜಾಗ ಎಲ್ಲದಕ್ಕೂ ಹಕ್ಕು ಪತ್ರಗಳಿವೆ. ಮನೆಯಲ್ಲಿ ಜನರಿಗಿಂತ ಜಾಸ್ತಿ ಹಾವು ಕಪ್ಪೆಗಳೇ ಕಾಣಿಸಿಕೊಳ್ಳುತ್ತವೆ. ತಮ್ಮನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲು ಮನವಿ ಮಾಡುತ್ತಲೇ ಇದ್ದರೂ ಇದಕ್ಕೆ ಯಾರು ಸ್ಪಂದಿಸುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದರು.
ಇವರ ಸಮಸ್ಯೆಯನ್ನು ಈ ದಿನ.ಕಾಮ್ ಕಳೆದ ಆಗಸ್ಟ್ 3ರಂದು ವಿಡಿಯೋ ವರದಿಯ ಮೂಲಕ ಪ್ರಕಟಿಸಿತ್ತು. ಈ ವಿಡಿಯೋ ವರದಿಯನ್ನು ಯೂಟ್ಯೂಬ್‌ನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಅಲ್ಲದೇ, 100ಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿ, ಅವರಿಗೆ ಅಧಿಕಾರಿಗಳು ನೆರವಾಗುವಂತೆ ವಿನಂತಿಸಿದ್ದರು.


ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.