- ನಮಾಜ್ ಮಾಡುತ್ತಿದ್ದವರ ವಿರುದ್ಧ ಮೂರು ಜಿಲ್ಲೆಗಳಲ್ಲಿ ಪ್ರಕರಣ
- ಕಾನ್ಪುರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಅಪರಿಚಿತರ ವಿರುದ್ಧ ದೂರು
ನಮಾಜ್ ಅನ್ನು ಅನುಮತಿ ಪಡೆಯದೆ ರಸ್ತೆಯಲ್ಲಿ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ವಾರದಲ್ಲಿ ಸಾವಿರಾರು ಮಂದಿ ವಿರುದ್ದ ಆರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ವಾರ ಏಪ್ರಿಲ್ 22ರಂದು ಈದ್ ಸಂದರ್ಭದಲ್ಲಿ ಕಾನ್ಪುರದ ಈದ್ಗಾದ ಹೊರಗೆ ರಸ್ತೆಯಲ್ಲೇ ನಮಾಜ್ ಮಾಡುತ್ತಿದ್ದ 1700ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಮಾಜ್ ಸಂಬಂಧ ಉತ್ತರ ಪ್ರದೇಶದ ನಾನಾಕಡೆ ಸಾವಿರಾರು ಜನರ ವಿರುದ್ದ ಆರು ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಾದವರಲ್ಲಿ ಈದ್ಗಾ ಸಮಿತಿ ಸದಸ್ಯರೂ ಸೇರಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡಿದ ಆರೋಪದಲ್ಲಿ ಕಾನ್ಪುರ, ಹಾಪುರ ಮತ್ತು ಅಲಿಗಢದಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲು ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 26ರಂದು ಕಾನ್ಪುರದ ಬಜಾರಿಯಾ, ಬಾಬು ಪೂರ್ವಾ ಮತ್ತು ಜಜ್ಮೌ ಎಂಬ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಮೂರು ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ದಾಖಲಿಸಿದ್ದಾರೆ. ಆದರೆ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.
ಪೊಲೀಸರು ನಮಾಜ್ ಮಾಡುತ್ತಿರುವವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಅದರ ಮಾಹಿತಿ ಆಧಾರದಲ್ಲಿ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186 (ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 188 (ಜನಪ್ರತಿನಿಧಿಗಳು ಘೋಷಿಸಿದ ಆದೇಶಕ್ಕೆ ಅವಿಧೇಯತೆ ತೋರಿರುವುದು), 283 (ಸಾರ್ವಜನಿಕರಿಗೆ ಅಪಾಯ ಉಂಟುಮಾಡುವುದು), 341 ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಧರ್ಮದ ಆಧಾರದ ಮೇಲೆ ವ್ಯಕ್ತಿಗಳನ್ನು ಗುರಿಯಾಗಿಸಲಾಗುತ್ತಿದೆ. ಅನೇಕ ಜನರು ಈದ್ಗಾದ ಹೊರಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೊಹಮ್ಮದ್ ಸುಲೇಮಾನ್ ನಿರಾಕರಿಸಿದ್ದಾರೆ.
ಆವರಣದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಕೆಲವರು ಮಾತ್ರ ಹೊರಗಡೆಯೇ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನಮಾಜ್ ಮಾಡುತ್ತಿದ್ದ ಸುಮಾರು 300 ಮಂದಿ ವಿರುದ್ಧ ಜಾಜ್ಮೌದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಬುಪುರ ಪೊಲೀಸ್ ಠಾಣೆಯಲ್ಲಿ, 50 ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.
ಬಜಾರಿಯಾ ಪೊಲೀಸ್ ಠಾಣೆಯಲ್ಲಿ, ಈದ್ಗಾ ನಿರ್ವಹಣಾ ಸಮಿತಿಯ ಕೆಲವು ಸದಸ್ಯರು ಸೇರಿದಂತೆ 1,000 ರಿಂದ 1,500 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಮಾಜ್ ಮಾಡುತ್ತಿದ್ದವರ ವಿರುದ್ಧ ಹಿರಿಯ ಸಬ್ ಇನ್ಸ್ಪೆಕ್ಟರ್ (ಎಸ್ಎಸ್ಐ) ಓಂವೀರ್ ಸಿಂಗ್ ಅವರು ದೂರು ದಾಖಲಿಸಿದ್ದಾರೆ.
ಏಪ್ರಿಲ್ 23 ರಂದು ಹಾಪುರ ಜಿಲ್ಲೆಯ ಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಈದ್ಗಾ ಮೈದಾನದ ಬಳಿಯ ರಸ್ತೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಸುಮಾರು 200-250 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
“ನಮಾಜ್ ಮಾಡುತ್ತಿದ್ದವರ ವಿರುದ್ಧ ನಾನಾ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ತೊಂದರೆ ಮತ್ತು ಸಿಆರ್‌ಪಿಸಿ ಸೆಕ್ಷನ್ 144ರ ನಿಷೇಧಾಜ್ಞೆ ಉಲ್ಲಂಘನೆ ಆರೋಪವನ್ನೂ ಮಾಡಲಾಗಿದೆ” ಎಂದು ಹಾಪುರ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಕುಮಾರ್ ಪಾಂಡೆ ಹೇಳಿದರು.
ಆಲೀಗಢ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಇರುವಾಗ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಅಪರಿಚಿತರ ವಿರುದ್ಧ ಏಪ್ರಿಲ್ 21 ಮತ್ತು 22 ರಂದು ಎರಡು ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅತೀಕ್ ಅಹ್ಮದ್ ಮಾಧ್ಯಮಗಳ ಮುಂದೆ ಬಂದಿದ್ದೇಕೆ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ನಮಾಜ್ ಮಾಡುತ್ತಿದ್ದ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.
ಕೊತ್ವಾಲಿ ಮತ್ತು ದೆಹಲಿ ಗೇಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.