ಹಳ್ಳಿ ದಾರಿ | ಕೇಂದ್ರ ಸರಕಾರದ ಕೆವೈಸಿ ಎಡವಟ್ಟು; ಕಂಗಾಲದ ಜನರ ಕತೆಗಳು

Date:

Advertisements

ಇಂದಿನ ಕಾನೂನಿನ ಪ್ರಕಾರ, ರೇಶನ್ ಕಾರ್ಡಿನಲ್ಲಿ ಸೇರುವ ಎಲ್ಲರ ಕೆವೈಸಿ ಆಗಬೇಕು. ಅಂದರೆ, ಕುಟುಂಬದ ಎಲ್ಲರ ಹೆಸರು, ಭಾವಚಿತ್ರ, ಆಧಾರ್‌ ಕಾರ್ಡ್‌ಗಳು ಪಡಿತರ ಚೀಟಿಗೆ ಲಿಂಕ್‌ ಆಗಿರಬೇಕು. ಐದು ವರ್ಷದೊಳಗಿನವರನ್ನು ಬಿಟ್ಟು ಎಲ್ಲರೂ ಥಂಬ್‌ ಕೊಡಬೇಕು. ಹಾಗಾಗಿ, ಯಾವುದೇ ಗ್ರಾಮ ಒನ್‌ ಅಥವಾ ಆನ್‌ಲೈನ್‌ ಸೆಂಟರುಗಳ ಮುಂದೆ ಈಗ ಸದಾ ಜನಜಾತ್ರೆ. ಬೆಳಗ್ಗೆ ಎಂಟು ಗಂಟೆಯಿಂದಲೇ ಮಕ್ಕಳು-ಮರಿ, ಬಾಣಂತಿಯರೆನ್ನದೆ ಕಾದು ಕೂರುವವರ ದಂಡು. ಒಬ್ಬೊಬ್ಬರ ಕತೆಗಳೂ ಕರುಣಾಜನಕ

ದುಂಡವ್ವನಿಗೆ ಐವರು ಮಕ್ಕಳು. ನಾಲ್ಕು ಹೆಣ್ಣು ಹಡೆದಳೆಂದು ಗಂಡ ಮನೆಯಿಂದ ಹೊರಹಾಕಿದ್ದ. ಅಷ್ಟರಲ್ಲಾಗಲೇ ಒಡಲಲ್ಲಿ ಮೂಡಿದ್ದ ಭ್ರೂಣವನ್ನೂ, ನಾಲ್ಕು ಚಿಕ್ಕ ಮಕ್ಕಳನ್ನೂ ಕಟ್ಟಿಕೊಂಡು ತವರು ಸೇರಿದ್ದಳು. ತನ್ನ ಮತ್ತು ಮಕ್ಕಳ ಸಲುವಾಗಿ ಆಕೆ ಬೇರೆಯದೇ ಪಡಿತರ ಚೀಟಿಗಾಗಿ ಪ್ರಯತ್ನಿಸುತ್ತಿದ್ದಾಳೆ. ಹಾಗೂ ಹೀಗೂ ಪ್ರಯತ್ನ ಮಾಡಿ ತನ್ನದು ಮತ್ತು 14 ವರ್ಷದ ಹಿರಿಯ ಮಗಳ ರೇಶನ್‌ ಕಾರ್ಡ್‌ ಮಾಡಿಸಿದಳು. ಇಂದಿನ ಕಾನೂನಿನ ಪ್ರಕಾರ, ಕಾರ್ಡಿನಲ್ಲಿ ಸೇರುವ ಎಲ್ಲರ ಕೆವೈಸಿ ಆಗಬೇಕು. ಅಂದರೆ, ಕುಟುಂಬದ ಎಲ್ಲರ ಹೆಸರು, ಭಾವಚಿತ್ರ, ಆಧಾರ್‌ ಕಾರ್ಡ್‌ಗಳು ಪಡಿತರ ಚೀಟಿಗೆ ಲಿಂಕ್‌ ಆಗಿರಬೇಕು. ಐದು ವರ್ಷದೊಳಗಿನವರನ್ನು ಬಿಟ್ಟು ಎಲ್ಲರೂ ಥಂಬ್‌ ಕೊಡಬೇಕು. ದುಂಡವ್ವ ತನ್ನ ಕಿರಿ ಮಗನನ್ನು ಬಿಟ್ಟು ಉಳಿದವರನ್ನೆಲ್ಲ ಸರತಿಯ ಸಾಲಿನಲ್ಲಿ ತಂದು ಕೂಡ್ರಿಸಿದಳು. ಇಡೀ ದಿನ ಕಾದರೂ ಪಾಳಿ ಬರಲಿಲ್ಲ. ಮತ್ತೆ ಮರುದಿನ ಬಂದಾಗ, ಹಿರಿಯ ಮಗಳೊಬ್ಬಳದ್ದು ಮಾತ್ರ ಥಂಬ್‌ ತಗೊಂಡಿತು ಕಂಪ್ಯೂಟರ್.‌ ನಾಲ್ಕನೆಯತ್ತೆ ಕಲಿಯುತ್ತಿರುವ ಎರಡನೆಯ ಮಗಳದ್ದು ಹೆಬ್ಬೆರಳಿನ ಗುರುತೇ ಮೂಡಲಿಲ್ಲ. “ಅವಳ ಕೈಯಲ್ಲಿ ಇನ್ನೂ ಗೆರೇನೇ ಮೂಡಿಲ್ಲವಲ್ಲ!” ಎಂದಂದು, ಗ್ರಾಮ ಒನ್‌ದವರು ವಾಪಸ್‌ ಕಳಿಸಿದರು. ಮೂರನೆಯ, ನಾಲ್ಕನೆಯ ಮಕ್ಕಳದ್ದೂ ಅದೇ ಕತೆಯಾಯಿತು. ತಾಯಿ ಮತ್ತು ಒಬ್ಬ ಮಗಳಿಬ್ಬರ ರೇಶನ್ನಿನಲ್ಲಿಯೇ ಆರು ತಿಂಗಳು ಎಲ್ಲರೂ ಉಂಡರು. ಇದೀಗ ಆ ಬಾಲೆಯ ಅಂಗೈನಲ್ಲಿ ಗೆರೆಗಳು ಮೂಡಿ, “ಹೆಬ್ಬೆರಳ ಗುರುತ ಕಂಪ್ಯೂಟರಿನಾಗ ಮೂಡಿತ್ರೀ…” ಎಂದು ಬಹಳ ಖುಷಿಯಿಂದ ಫೋನ್‌ ಮಾಡಿದಳು ದುಂಡವ್ವ. ಅವರ ಊರಿನ ಗ್ರಾಮ ಒನ್‌ದ ಮುಂದೆ ನೂರಾ ಐವತ್ತು ಜನರ ಕ್ಯೂ ಇದ್ದ ಕಾರಣ, “ಬೆಳಗಾವಿಗೆ ಹೋಗಿ ಮಾಡಿಸಿಕೊಂಡು ಬಂದೆ,” ಎಂದೂ ಸೇರಿಸಿದಳು.

ಕೇಂದ್ರ ಸರಕಾರವು ಪಡಿತರ ತೆಗೆದುಕೊಳ್ಳಬಯಸುವ ಎಲ್ಲ ಪಡಿತರ ಚೀಟಿದಾರರಿಗೆ ಕೆವೈಸಿ ಮಾಡಿಸಲೇಬೇಕೆಂದು ತಂದಿರುವ ಹೊಸ ಆದೇಶ, ಬಡವರ ಬಾಳಿನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ದೇಶದಲ್ಲಿರುವ ಅಂದಾಜು 810 ದಶಲಕ್ಷ ರೇಶನ್‌ ಕಾರ್ಡುಗಳನ್ನಿಟ್ಟುಕೊಂಡವರೆಲ್ಲ ʻನಾನು ನಾನೇʼ ಎಂದು ಸರಕಾರಕ್ಕೆ ಖಚಿತಪಡಿಸಬೇಕೆಂದು ಈ ಮೂಲಕ ಕೇಂದ್ರ ಸರಕಾರವು ಬಯಸಿದೆ.

Advertisements

ತಮ್ಮ ಗ್ರಾಮದಲ್ಲಿ ಹೊಟ್ಟೆ ತುಂಬಿಸಲು ಆಗದ ಕಾರಣಕ್ಕಾಗಿ ಪಟ್ಟಣಕ್ಕೋ, ಇನ್ನೆಲ್ಲಿಗೋ ವಲಸೆ ಹೋಗಿರುವಂಥ ಜನರನ್ನಂತೂ ಇದು ಕಂಗಾಲು ಮಾಡಿದೆ. ಕಾರ್ಡುಗಳು ಕ್ಯಾನ್ಸಲ್‌ ಆಗುವ ಭಯದಿಂದ ಕೈಲಿದ್ದ ಕೆಲಸ ಬಿಟ್ಟು ಊರಿಗೆ ಓಡೋಡಿ ಬರುವಂತಾಗಿದೆ. ಓಡಿಬಂದು ತ್ವರಿತವಾಗಿ ತಮ್ಮ ಕೆವೈಸಿಯನ್ನು ರಿನ್ಯೂ ಮಾಡದಿದ್ದಲ್ಲಿ ಅವರ ಕಾರ್ಡ್‌ ಕ್ಯಾನ್ಸಲ್‌ ಆಗಿ ಇಡೀ ಕುಟುಂಬಕ್ಕೆ ಸಿಗುತ್ತಿದ್ದ ಅಕ್ಕಿ ಸಿಗದಂತಾಗಬಹುದು ಎಂಬ ಸುದ್ದಿ ಹಬ್ಬಿದ್ದರಿಂದ ಈ ಕಂಗಾಲುತನ.

2020ರಲ್ಲಿ ಕೋವಿಡ್‌ನಿಂದ ತೊಂದರೆ ಅನುಭವಿಸಿದ ಬಡಜನರೆಲ್ಲರಿಗೂ ಜನವರಿ 2024ರಿಂದ ಮುಂದಿನ ಐದು ವರ್ಷಗಳ ಕಾಲ ಉಚಿತ ಆಹಾರ ಪೂರೈಕೆಯನ್ನು ಮುಂದುವರಿಸಲಾಗುವುದೆಂದು ಪ್ರಧಾನ ಮಂತ್ರಿಗಳು ಘೋಷಿಸಿದ್ದರು. ಆದರೆ, ‘ಆಹಾರದ ಹಕ್ಕಿಗಾಗಿ ಆಂದೋಲನʼದ ಪ್ರಕಾರ, ಕೇಂದ್ರ ಸರಕಾರವು ಒಂದೆಡೆ ಜನಗಣತಿಯನ್ನೂ ಪೂರ್ಣಗೊಳಿಸದೆ, ದೇಶದ ಇಂದಿನ ಜನಸಂಖ್ಯೆಯ ನಿಜ ಲೆಕ್ಕವನ್ನು ಪರಿಗಣಿಸದೆ ಸಾಕಷ್ಟು ಜನರಿಗೆ ಪಡಿತರ ಸಿಗದಂತೆ ಮಾಡಿದೆ, ಈಗ ಕೆವೈಸಿಯನ್ನು ಪೂರ್ಣಗೊಳಿಸಿರೆಂದು ಆದೇಶ ಮಾಡುವ ಮೂಲಕ ಕಾರ್ಡ್‌ ಇದ್ದವರಿಗೂ ಪಡಿತರ ಸಿಗದಂತೆ ಮಾಡುತ್ತಿದೆ.

ಕೆವೈಸಿ ಮಾಡಿಸುವುದು ಸುಲಭದ ಕೆಲಸವಾಗಿದ್ದರೆ ಸಮಸ್ಯೆ ಇರಲಿಲ್ಲ. ಈಗ ಕಾರ್ಡಿನಲ್ಲಿ ಕುಟುಂಬದ ಸದಸ್ಯರೆಲ್ಲರ ಹೆಸರುಗಳಿರಬೇಕಷ್ಟೇ ಅಲ್ಲ, ಅವರವರ ಆಧಾರ್‌ ನಂಬರು ರೇಶನ್‌ ಕಾರ್ಡಿಗೆ ಜೋಡಣೆಯಾಗಬೇಕು. ಸರಕಾರ ಕೊಡುವ ಉಚಿತ ಪಡಿತರದ ಅನ್ನ ಉಣ್ಣುವ ಎಲ್ಲಾ ಜನಗಳ, ಮಕ್ಕಳ ಗುರುತು ಸರಕಾರಕ್ಕಿರಬೇಕು.

ಯಾವುದೇ ಗ್ರಾಮ ಒನ್‌ ಅಥವಾ ಆನ್‌ಲೈನ್‌ ಸೆಂಟರುಗಳ ಮುಂದೆ ಈಗ ಸದಾ ಜನಜಾತ್ರೆ. ಕುಟುಂಬದ ಒಬ್ಬರು ಬಂದರೆ ಸಾಲುವುದಿಲ್ಲ ಎಂದು ಮಕ್ಕಳು ಮರಿಗಳನ್ನೂ, ಬಾಣಂತಿಯರನ್ನೂ ಕಟ್ಟಿಕೊಂಡೇ ಕುಟುಂಬದ ಮುಖ್ಯಸ್ಥರು ಬೆಳಗ್ಗೆ ಎಂಟು ಗಂಟೆಯಿಂದ ಕುಳಿತಿರಬೇಕು. ಅವರವರ ನಂಬರು ಬಂದಾಗ ಹೋಗಿ ಥಂಬ್‌ ಕೊಡಬೇಕು. ವೃದ್ಧ ದಂಪತಿಗಳಿದ್ದರಂತೂ ಗೋಳು ಇನ್ನೂ ಹೆಚ್ಚಿನದು. ಇಬ್ಬರಲ್ಲಿ ಒಬ್ಬರು ತೀರಿಹೋದಾಗ ಇನ್ನೊಬ್ಬರ ಪಡಿತರ ಚೀಟಿಯೇ ಕ್ಯಾನ್ಸಲ್‌ ಆಗಿಹೋಗುತ್ತಿದೆ. ಅವರ ಕಾರ್ಡುಗಳು ಡಿಲೀಟಾಗಿ ಹೋಗಿದ್ದೂ ಯಾರ ಗಮನಕ್ಕೂ ಬಂದಿರುವುದಿಲ್ಲ, ತನಗೇಕೆ ರೇಶನ್‌ ಸಿಗುತ್ತಿಲ್ಲವೆಂದು ಅವರಿಗೆ ಅರ್ಥವೂ ಆಗುತ್ತಿರುವುದಿಲ್ಲ. ರುದ್ರಮ್ಮನದು ಅದೇ ಕತೆ. ಗಂಡನ ಹೆಸರಲ್ಲಿ ರೇಶನ್‌ ಕಾರ್ಡ್‌ ಇತ್ತು. ಆತ ತೀರಿಹೋದ ಕೂಡಲೇ ಕುಟುಂಬದ ಕಾರ್ಡೇ ರದ್ದಾಗಿಹೋಯಿತು. ವರ್ಷಾಂತರಗಳಿಂದ ಅವರಿವರಿಂದ ಬೇಡಿ ಈ ವೃದ್ಧೆ ತಿನ್ನುತ್ತಿದ್ದಾಳೆ. ಅವಳಿಗೆ ಈಗ ರೇಶನ್‌ ಕಾರ್ಡ್‌ ಮಾಡಿಸಬೇಕೆಂದರೆ ಅವಳ ರಹವಾಸಿ ಪತ್ರವನ್ನು ಗ್ರಾಮ ಲೆಕ್ಕಿಗ ಕೊಡಬೇಕು. ಆ ಪತ್ರಕ್ಕೆ ಪಂಚಾಯತಿ ಅಧಿಕಾರಿ ಸಹಿ ಮಾಡಬೇಕು. ಅದನ್ನು ಆಹಾರ ತಹಶೀಲ್ದಾರರಿಗೆ ಒಯ್ದು ಅವಳು ಕೊಡಬೇಕು. ಅಲ್ಲಿಗೆ ಮುಗಿಯಿತೇ? ಇಲ್ಲ, ಸರಕಾರವು ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ಕರೆದಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು. ಹಳ್ಳಿಗಳ ವೃದ್ಧ ಮಹಿಳೆಯರು, ಅಂಗವಿಕಲರ ಸಂಕಟವಿದು. ಕೇಳುವವರಿಲ್ಲ. ಹಿಂದೆ ಹಿಟ್ಲರ್‌ ಮಾಡಿದ್ದಂತೆ ಇಂಥವರನ್ನು ಡಿಲೀಟ್‌ ಮಾಡುವುದೇ ಸರಕಾರದ ಉದ್ದೇಶವೇ?

ಉದ್ಯೋಗ ಅರಸಿ ಊರು ತೊರೆದ ಯುವಜನರು ಪಕ್ಕದ ಪಟ್ಟಣದಲ್ಲೋ, ಹತ್ತಿರದ ಊರಲ್ಲೋ ಇರುವರೆಂಬ ಕಾಲ ಹೋಯಿತು. ಇಂದು ನಮ್ಮ ನೆರೆಯ ವೃದ್ಧರಿಗೆ ಸೇವೆ ಮಾಡುತ್ತಿರುವವ ಒಬ್ಬ ಬೆಂಗಾಲಿ, ನಾವು ಯಾವುದೇ ಹೊಟೆಲಿಗೆ ಹೋದರೂ ನೀರು ತಂದಿಡುವವ ಒಬ್ಬ ಬಿಹಾರಿ ಅಥವಾ ಓಡಿಶಾದವ. ಅವರಿಗೂ ಫೋನಿನಲ್ಲಿ ಮೆಸೇಜ್‌ ಬರುತ್ತದೆ, ‘ನಿಮ್ಮ ಕೆವೈಸಿ ಪೂರ್ತಿ ಮಾಡದಿದ್ದರೆ ಪಡಿತರ ಚೀಟಿ ಬಂದಾಗುತ್ತದೆ’ ಎಂದು. ಆದರೆ, ಕೆವೈಸಿಗೆ ಏನೇನು ದಾಖಲೆಗಳನ್ನು ಕೊಡಬೇಕೆಂಬ ಮಾಹಿತಿಯೇನೂ ಫೋನ್‌ ಮೆಸೇಜಿನಲ್ಲಿ ಇರುವುದಿಲ್ಲ. ಅಲ್ಲಿ ಗ್ರಾಮ ಒನ್‌ ಸೇವಾ ಕೇಂದ್ರಕ್ಕೆ ಹೋದಾಗಲೇ, ಅವರು ಹೇಳಿದ ದಾಖಲೆಗಳನ್ನೆಲ್ಲ ಹೊಂದಿಸಬೇಕು. ದುಡಿದು ದುಡಿದೂ ಅಂಗೈನ ಗೆರೆಗಳೆಲ್ಲ ಮಾಸಿಹೋಗಿರುವಾಗ ಥಂಬ್‌ ಅನ್ನು ಆ ಕಂಪ್ಯೂಟರ್‌ ಗುರುತಿಸುವುದಿಲ್ಲ.

ಸಾವಿರಾರು ರೂಪಾಯಿ ವ್ಯಯಿಸಿ, ಇಷ್ಟೆಲ್ಲ ದಾಖಲೆಗಳನ್ನೊದಗಿಸಿ, ಆಧಾರನ್ನು ಜೋಡಿಸಿ, ಹೆಬ್ಬೆರಳನ್ನು ಕೊಟ್ಟು ರೇಶನ್‌ ಕಾರ್ಡ್‌ ಸರಿ ಮಾಡಿಸಿದ ನಂತರ ಸಿಗುವ ಆಹಾರ ಧಾನ್ಯವಾದರೂ ಎಷ್ಟು? ಒಬ್ಬರಿಗೆ ಕೇವಲ ಐದು ಕೆ.ಜಿ ಅಕ್ಕಿ. ಅದೂ ಸಂಪೂರ್ಣ ಪಾಲಿಶ್ ಮಾಡಿಸಿದ ಅಕ್ಕಿ. ಗೋಧಿಯೂ ಇಲ್ಲ, ಬೇಳೆಕಾಳುಗಳೂ ಇಲ್ಲ, ರಾಗಿ-ಜೋಳವೂ ಇಲ್ಲ, ಎಣ್ಣೆ-ಬೆಲ್ಲವೂ ಇಲ್ಲ. ಯಾವುದೇ ರೀತಿಯಲ್ಲಿ ಆಹಾರದ ಭದ್ರತೆ ಮಾಡದ, ಕೇವಲ ಐದು ಕೆ.ಜಿ ಅಕ್ಕಿಗಾಗಿ ಹಳ್ಳಿಹಳ್ಳಿಗಳಲ್ಲಿ ಕೆವೈಸಿಯ ಕೋಲಾಹಲವನ್ನೇ ಎಬ್ಬಿಸಲಾಗಿದೆ. ದುಡಿಯಲು ಹೋದವರು ಊರಿಗೋಡಿ ಬರುವಂತಾಗಿದೆ, ಅಂಗವಿಕಲರು, ವೃದ್ಧರು ಎದ್ದೋಡಿಬಂದು ಸರತಿಯ ಸಾಲಿನಲ್ಲಿ ನಿಲ್ಲುವಂತಾಗಿದೆ.

ಸರಕಾರ ಕೇಳಿರುವ ದಾಖಲೆಗಳನ್ನೆಲ್ಲ ಒದಗಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಈ ಕುಟುಂಬಗಳಿಗೆ ಸರಕಾರ, ತಾನೇ ಕಾನೂನಿನ ಮೂಲಕ ವಚನವಿತ್ತಿರುವ ʻಆಹಾರ ಭದ್ರತೆʼಯನ್ನು ಕಸಿದುಕೊಳ್ಳುತ್ತದೆಯೇ? ಇದು ‘ಆಹಾರದ ಹಕ್ಕಿಗಾಗಿ ಆಂದೋಲನ’ದ ಪ್ರಶ್ನೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X