ಬೆಂಗಳೂರು ನಗರದಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ಕೆಎಚ್‌ಐಆರ್(Knowledge, Health, Innovation and Research) ಸಿಟಿಯನ್ನು ಕೊಪ್ಪಳ ಜಿಲ್ಲೆಗೆ ಸ್ಥಳಾಂತರಿಸಬೇಕು ಹಾಗೂ ಸ್ಥಾಪಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬೆಂಗಳೂರು ಸಮೀಪ 2 ಸಾವಿರ ಎಕರೆಯಲ್ಲಿ ಕೆಎಚ್‌ಐಆರ್ ಸಿಟಿ ಆರಂಭವಾಗಲಿದೆ. ಬೆಂಗಳೂರು ಈಗಾಗಲೇ ಅತಿಯಾದ ಜನದಟ್ಟಣೆಯಿಂದ, ಟ್ರಾಫಿಕ್ ಸಮಸ್ಯೆ ಸೇರಿದಂತೆ ಇನ್ನಿತರ ತೊಂದರೆಯಿಂದ ಬಳಲುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲಿ ಸ್ಥಾಪಿಸುವುದಕ್ಕಿಂತ ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಬೇಕು ಎಂದು ಮನವಿ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಿದರೆ ಇಲ್ಲಿನ ಜನರು ವಲಸೆ ಹೋಗುವ ಸಮಸ್ಯೆಯನ್ನು ತಡೆಗಟ್ಟಬಹುದು. ನಿರುದ್ಯೋಗ, ಬಡತನ ,ಆರ್ಥಿಕ ಸಮಸ್ಯೆಯಿಂದ ಭಾಗದ ಜನರು ವಲಸೆ ಹೋಗುತ್ತಿದ್ದಾರೆ. ಒಂದು ವೇಳೆ ಕೆಎಚ್‌ಐಆರ್ ಸಿಟಿ ಕೊಪ್ಪಳದಲ್ಲಿ ಸ್ಥಾಪಿಸಿದರೆ ಯುವ ಸಬಲೀಕರಣಕ್ಕೆ ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ವೇಳೆ ಪ್ರಗತಿಪರ ಚಿಂತಕ ಅಲ್ಲಮ ಪ್ರಭು ಬೆಟ್ಟದೂರು, ಗಫ್ಫಾರ್, ಬಸವರಾಜ್ ಶೀಲವಂತ, ಲೋಹಿತ್, ಸಂಜೀವ್, ತುಕಾರಾಮ್, ಯಮನೂರು ಇನ್ನಿತರರು ಹಾಜರಿದ್ದರು.
ಇದನ್ನು ಓದಿದ್ದೀರಾ? ರಾಯಚೂರು | ದೇವದಾಸಿ ಮಹಿಳೆಯರಿಗೆ ನಿವೇಶನ ಹಂಚಿಕೆ ಮಾಡಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ
ಸರಕಾರ ಕೆಎಚ್‌ಐಆರ್ ಸಿಟಿ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ಸ್ಥಾಪಿಸಲು ಸಿದ್ಧವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿದೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲೇ ಇದನ್ನು ಪ್ರಾರಂಭಿಸಲಿದ್ದಾರೆ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈ ಯೋಜನೆಯು ನಾಲ್ಕು ವಿಭಾಗಗಳಲ್ಲಿ ₹ 40,000 ಕೋಟಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಮತ್ತು ಸುಮಾರು 80,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
