ರೈತರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅಂತರ್ಜಲ ಕುಸಿದು ಬೆಳೆಗಳ ಇಳುವರಿ ಕುಂಠಿತವಾಗಲಿದೆ ಎಂದು ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಎಚ್ಚರಿಸಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ನಿರಂತರವಾಗಿ 323 ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಹೊಂಗನೂರು ಗ್ರಾಮದ ಕೆರೆ ಕೋಡಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಮುಂದಿನ ತಿಂಗಳ ಹಂಚಿಕೆ ನೀರು ಸೇರಿದಂತೆ 50 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಹರಿಸಿದ್ದು, ಈ ನೀರು ಸಮುದ್ರದ ಪಾಲಾಗಿದೆ. ಆದರೆ ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಕೆರೆಗಳು ನೀರಿಲ್ಲದೆ ಬರಿದಾಗಿದ್ದು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಮೇಶ್‌ಗೌಡ ಆರೋಪಿಸಿದರು.
ತಾಲೂಕಿನಲ್ಲಿ ಮಳೆ ಆಗದಿದ್ದರೆ ಅಂತರ್ಜಲ ಮತ್ತಷ್ಟ ಕುಸಿಯುತ್ತದೆ. ಇದರಿಂದ ರೇಷ್ಮೆ, ತೆಂಗು, ಬಾಳೆ, ಮಾವು, ಹೈನೋದ್ಯಮ ಎಲ್ಲವೂ ಇಳುವರಿ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಆಮೆಗತಿಯಲ್ಲಿ ಸಾಗುತ್ತಿರುವ ಸತ್ತೇಗಾಲ ಯೋಜನೆಗೆ ವೇಗ ನೀಡಬೇಕಿದೆ. ಇದರ ಕಾಮಗಾರಿ ಮುಗಿಸಿದರೆ 3.3 ಟಿಎಂಸಿ ನೀರು ಇಗ್ಗಲೂರು ಜಲಾಶಯಕ್ಕೆ ಬರಲಿದ್ದು, ಇದರಿಂದ ರಾಮನಗರ ಜಿಲ್ಲೆಯ 560 ಕೆರೆಗಳಿಗೆ ನೀರು ತುಂಬಿಕೊಳ್ಳಬಹುದು. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆಶಿ ಅವರು ಸತ್ತೇಗಾಲ ಯೋಜನೆ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಿದರು.

ಹೊಂಗನೂರು ಡೈರಿ ಸಿಇಒ ಪುಟ್ಟರಾಜು ಅವರು ಮಾತನಾಡಿ, ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಪಕ್ಷಗಳು ಸಹ ಇದನ್ನು ಮರೆತು, ರೈತರ ಹಿತವನ್ನು ಕಡೆಗಣಿಸಿ ಸ್ವಾರ್ಥ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಸಾರ್ವಜನಿಕರಿಗೆ, ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತಿದೆ ಎಂದರು ವಿಷಾದಿಸಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ನಿಂಗೇಗೌಡರು(ಎನ್‌ಜಿ) ಮಾತನಾಡಿ, ನೀರು ಕೊಟ್ಟರೆ ರೈತರು ಬೆಳೆಗಳನ್ನು ಬೆಳೆದು ಆಹಾರ ಉತ್ಪತ್ತಿಯಾಗುತ್ತದೆ. ವ್ಯರ್ಥವಾಗಿ ಹರಿಯುವ ನೀರನ್ನು ಮೇಕೆದಾಟು ಯೋಜನೆ ಮೂಲಕ ತಡೆ ಹಿಡಿದು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳುವ ಅವಕಾಶ ಇದೆ. ರಾಜಕಾರಣಿಗಳು ಈ ಬಗ್ಗೆ ಗಮನ ನೀಡದೆ, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿದ್ದಾರೆ. ರಾಜಕಾರಣಿಗಳನ್ನು ಆಯ್ಕೆ ಮಾಡಿದ ನಾವೇ ಅವರ ಎದುರು ಹೋರಾಟ ಮಾಡುವಂತಾಗಿದೆ ಎಂಬುದು ನಮ್ಮ ದೌರ್ಭಾಗ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ನೀರಾವರಿ ಬಗ್ಗೆ ಇಚ್ಚಾಶಕ್ತಿ ತೋರಲಿಲ್ಲ. ಇದೀಗ ಕ್ಷೇತ್ರ ಶಾಸಕರಿಲ್ಲದೆ ಅನಾಥವಾಗಿದೆ. ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದ ಕೆಆರ್‌ಎಸ್ ಜಲಾಶಯದ ನೀರನ್ನು ಅವಲಂಬಿಸಿರುವ ತಮಿಳುನಾಡಿನಲ್ಲಿ ವರ್ಷಕ್ಕೆ 3 ಬೆಳೆ ಬೆಳೆಯುತ್ತಾರೆ. ನಾವು 1 ಬೆಳೆ ಬೆಳೆಯಲು ನೀರಿಲ್ಲವಾಗಿದೆ. ರಾಜ್ಯದ 28 ಸಂಸದರು ಹಾಗೂ 224 ಶಾಸಕರು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮೇಕೆದಾಟು ಅಣೆಕಟ್ಟೆ ಕಟ್ಟಲು ಅನುಮತಿ ಪಡೆಯಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ನಿಂಗೇಗೌಡರು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಹಾಸನ | ಕೋಟಿ ವಿಮೆಗಾಗಿ ಸತ್ತಂತೆ ನಟನೆ; ನಾಪತ್ತೆಯಾಗಿದ್ದವ ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅನಂತಕೃಷ್ಣರಾಜೇ ಅರಸು, ಗ್ರಾ.ಪಂ. ಮಾಜಿ ಸದಸ್ಯ ಜಮೀರ್ ಪಾಷಾ, ನಿವೃತ್ತ ಶಿಕ್ಷಕರಾದ ಮುರಳೀಧರ್, ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಕುಮರ್, ಬಾಬು, ಪಟೇಲ್ ಸ್ವಾಮಿ, ದಿನೇಶ್ ಕುಮಾರ್, ಸಿದ್ದರಾಜು, ಕೃಷ್ಣ, ಶಿವು, ನಾಗೇಶ್ ಬಿ, ಸಿದ್ದರಾಜು, ಮಲ್ಲೇಶ್, ಮೋಹನ್ ರಾಜ್ ಅರಸ್, ಮಂಜು, ಹರೀಶ್ ರಾಜೇ ಅರಸ್, ಸೋಮಶೇಖರ್ ರಾಜೇ ಅರಸ್, ನಂಜೇಗೌಡ, ಹೆಚ್.ಹೆಚ್. ಹಳ್ಳಿ, ಭೈರಶೆಟ್ಟಿಹಳ್ಳಿ ದೇವರಾಜು, ಭಾಸ್ಕರ್ ರಾಜೇ ಅರಸ್, ಪರಶುರಾಮ್ ಅಂಬಾಡಹಲ್ಳಿ, ಪರಮೇಶ್, ಕೃಷ್ಣಮೂರ್ತಿ, ಜಮೀರ್ ಪಾ಼, ನಿಂಗೇಗೌಡ, ಪಿ. ರಾಜು, ಬೀರೇಶ್, ಚಂದ್ರು, ಸಿದ್ದಪ್ಪ , ರಂಜಿತ್‌ಗೌಡ, ಆರ್. ಶಂಕರ್, ಯೋಗೇಶ್‌ಗೌಡ, ಹನುಮಂತು, ಕೋಟೆ ಚಂದ್ರು, ಸಂತೋಷ್, ವೇಣುಗೋಪಾಲ್, ಮುರಳಿಧರ್, ಸಾಲುಮನ್ ಪಾಷಾ, ವರದರಾಜ್ ಗ್ರಾ.ಪಂ. ಸದಸ್ಯರು, ಹೊಂಗನೂರು ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
