ಉಡುಪಿ ಜಿಲ್ಲೆಯ ಕಾರ್ಕಳ ಪಡುಬಿದ್ರಿ ಟೋಲ್ ಸಂಗ್ರಹಣಾ ಕೇಂದ್ರವನ್ನು ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಇದನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್‌ಗೇಟ್ ಹೋರಾಟ ಸಮಿತಿ ಬೃಹತ್ ಪ್ರತಿಭಟನಾ ಸಭೆ ನಡೆಸಿತು.
ಈ ವೇಳೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಲೋಕೋಪಯೋಗಿ ಇಲಾಖೆ ಸಚಿವರು ಈಗಾಗಲೇ ತಾತ್ಕಾಲಿಕ ರದ್ದು ಎಂಬ ಆದೇಶ ಹೊರಡಿಸಿದ್ದಾರೆ. ಆದರೆ ಈ ಅದೇಶ ಶಾಶ್ವತ ರದ್ದಾಗಬೇಕು. ರಾಜ್ಯಪತ್ರದಲ್ಲಿ, ಆದೇಶ ಪತ್ರದಲ್ಲಿ ಇದನ್ನು ಪ್ರಕಟಿಸಬೇಕು. ಈ ಬಗ್ಗೆ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು” ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, “ನಮ್ಮ ಊರಿಗೆ ಬಂದಿರುವ ಟೋಲ್‌ಗೇಟ್ ಎಂಬ ಕಂಟಕವನ್ನು ಒದ್ದೋಡಿಸುವ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಿರುವುದು ಹೋರಾಟಕ್ಕೆ ಬಲ ಬಂದಿದೆ. ಕಾರ್ಯಾದೇಶಕ್ಕೆ ತಾತ್ಕಾಲಿಕ ತಡೆ ಸ್ವಾಗತಾರ್ಹವೇ ಆಗಿದ್ದು, ಕಾರ್ಕಳ–ಪಡುಬಿದ್ರಿ ನಡುವಿನ ರಸ್ತೆಯಿಂದ ಸಂಪೂರ್ಣ ಎತ್ತಂಗಡಿಯಾಗುವವರೆಗೂ ಈ ಹೋರಾಟ ಮುಂದುವರಿಯಲಿದೆ. ರಾಜ್ಯ ಸರ್ಕಾರ ಕೂಡಲೇ ಸಂಪೂರ್ಣ ರದ್ದುಪಡಿಸಿ ಆದೇಶ ಹೊರಡಿಸಬೇಕು” ಎಂದು ಆಗ್ರಹಿಸಿದರು.
ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, “ಟೋಲ್ ಹೋರಾಟವು ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇಲ್ಲಿ ಎಲ್ಲ ಪಕ್ಷಗಳು ಹಾಗೂ ಎಲ್ಲ ಜಾತಿಯ ಜನರೂ ಒಗ್ಗೂಡಿದ್ದು, ರಾಜಕೀಯ ರಹಿತ ಹೋರಾಟಕ್ಕೆ ಸರ್ಕಾರವೂ ತಲೆಬಾಗುವುದು ನಿಶ್ಚಯವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಟೋಲ್ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ನಾವೆಲ್ಲರೂ ಒಗ್ಗೂಡೋಣ” ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕೆ ರಘುಪತಿ ಭಟ್, ಪ್ರಮುಖರಾದ ಯೋಗೀಶ್ ಶೆಟ್ಟಿ ಬಾಲಾಜಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಅನ್ಸಾರ್ ಅಹಮದ್ ಮೊದಲಾದವರು ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕೆಎಂಎಫ್ ಅಧ್ಯಕ್ಷ ಕೆ ಸುಚರಿತ ಶೆಟ್ಟಿ, ಮಧ್ವರಾಯ ಭಟ್ ನಂದಿಕೂರು, ಮುಖಂಡರಾದ ಸತೀಶ್ ಶೆಟ್ಟಿ ಮುಟ್ಟುಪಾಡಿ, ಕುಯಿಲಾಡಿ ಸುರೇಶ್ ನಾಯಕ್, ಸಾಂತೂರು ಭಾಸ್ಕರ ಶೆಟ್ಟಿ, ರಾಮಕೃಷ್ಣ ಶರ್ಮ ಬಂಟಕಲ್ಲು, ಅನ್ಸಾರ್ ಅಹಮದ್ ಉಡುಪಿ, ರೇಷ್ಮಾ ಉದಯ ಶೆಟ್ಟಿ, ನವೀನ್ ಚಂದ್ರಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಉದಯ್ ಶೆಟ್ಟಿ ಇನ್ನ, ದೀಪಕ್ ಕೋಟ್ಯಾನ್ ಇನ್ನ, ಶೀಲಾ ಕೆ ಶೆಟ್ಟಿ ಎರ್ಮಾಳು, ವೆಂಕಟರಮಣ ಮುಚ್ಚಿಂತಾಯ, ದಿನೇಶ್ ಕೋಟ್ಯಾನ್ ಪಲಿಮಾರು, ದಿನಕರ ಬಾಬು, ಅಶೋಕ್ ಕುಮಾರ್ ಶೆಟ್ಟಿ, ಶಶಿಧರ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಸದಾಶಿವ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶಶಿಕಾಂತ್ ಪಡುಬಿದ್ರಿ, ಲಕ್ಷ್ಮಣ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಲಾ ಸೇರಿದಂತ ಬಹುತೇಕರು ಇದ್ದರು.
