ವೈಶ್ಯಾವಾಟಿಕೆ ಕಾನೂನಾತ್ಮಕವಾಗಿ ಅವಕಾಶವಿದೆ. ಆದರೆ ಒತ್ತಾಯಪೂರ್ವಕ ವೇಶ್ಯಾವಾಟಿಕೆ ದಂಧೆ ಅಪರಾಧವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿಯ ನ್ಯಾಯಾಧೀಶ ಎಚ್.ಎನ್.ಸಾತ್ವಿಕ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಮಹಿಳಾ ಒಕ್ಕೂಟ, ನ್ಯಾಷನಲ್ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕ್ಸಸ್, ಸಂಗಮ ಮತ್ತು ಬೆಳದಿಂಗಳು ಮಹಿಳಾ ಒಕ್ಕೂಟಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಕಾಲತ್ತು ಸಭೆ ಉದ್ಘಾಟಿಸಿ ಮಾತನಾಡಿದರು.
ʼವೈಶ್ಯಾವಾಟಿಕೆ ಮಹಿಳೆಯರಿಗೆ ಕಾನೂನಿನ ರಕ್ಷಣೆಯಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಸಂವಿಧಾನ ಹಕ್ಕುಗಳಿವೆ. ಸಾರ್ವಜನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಅವಶ್ಯಕವಾಗಿದೆ. ವೈಶ್ಯವಾಟಿಕೆ ಹೆಸರಿನಲ್ಲಿ ಮಹಿಳೆಯರ ಶೋಷಣೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವೈಶ್ಯವಾಟಿಕೆ ಮಹಿಳೆಯರ ಮೇಲೆ ಶೋಷಣೆಯಾದರೆ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆʼ ಎಂದರು.
ಡಿವೈಎಸ್‌ಪಿ ಸತ್ಯನಾರಾಯಣ ಮಾತನಾಡಿ, ʼಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ಸ್ವಇಚ್ಚೆಯಿಂದ ವೇಶ್ಯಾವಾಟಿಕೆಯಲ್ಲಿ ತೊಡಗಿರುವದಿಲ್ಲ. ಅವರ ನೋವು, ಸಂಕಷ್ಟಗಳಿಂದ ಶೋಷಣೆಗೆ ಒಳಪಡುತ್ತಾರೆ. ಶೋಷಣೆಗೆ ಒಳಗಾದ ಮಹಿಳೆಯರನ್ನು ರಕ್ಷಿಸಿ ಸರ್ಕಾರದ ಸೌಲಭ್ಯಗಳು ಒದಗಿಸಬೇಕುʼ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಸೀರ್, ಮುಕ್ತಾ ಪೂಜಾರ, ವಂದನಾ, ಹುಲಿಗೆಮ್ಮ ಸೇರಿದಂತೆ ಅನೇಕರಿದ್ದರು. ಅನೇಕರು ಎದುರಿಸುತ್ತಿರುವ ಸಮಸ್ಯೆಗಳ, ಸವಾಲುಗಳ ಕುರಿತು ಅಭಿಪ್ರಾಯ ತಿಳಿಸಿದರು.
ವರದಿ: ಹಫೀಜುಲ್ಲ
