ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರಿ ಕಸಿಯುವ ರಾಜಕೀಯ ಷಡ್ಯಂತ್ರದಿಂದ ರಾಜ್ಯಪಾಲರು ಕಾನೂನು ವಿಚಾರಣೆಗೆ ಅವಕಾಶ ನೀಡಿರುವುದು ಖಂಡಿಸಿ ಆಗಸ್ಟ್ 27 ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮಾಡಲಾಗುವುದು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿತನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನೀಡಿರುವ ನಿವೇಶನದ ಕುರಿತಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಪಪ್ರಚಾರ ಎಬ್ಬಿಸುತ್ತಿದ್ದಾರೆ. ಸುಳ್ಳು ಆರೋಪ ಮಾಡಿ ಹೋರಾಟ, ಪ್ರತಿಭಟನೆಗಳು ಮಾಡುತ್ತಿದ್ದಾರೆ. ಹಿಂದುಳಿದ ವರ್ಗ ನಾಯಕರೆಂದು ಜನಮನ್ನಣೆ ಪಡೆದು ಎಲ್ಲಾ ವರ್ಗಗಳ ಬೆಂಬಲ ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಷಡ್ಯಂತ್ರ, ಕುತಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ದೇಶದ ಪ್ರಧಾನಿ ಹಾಗೂ ಗೃಹ ಸಚಿವರು ಸೇರಿದಂತೆ ಅನೇಕರು ಸಿದ್ದರಾಮಯ್ಯನವರ ಬೆಳವಣಿಗೆಯನ್ನು ಸಹಿಸುತ್ತಿಲ್ಲ ಹೇಗಾದರೂ ಮಾಡಿ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಕುತಂತ್ರಗಳು ನಡೆಸಲಾಗುತ್ತಿದೆ. ಖಾಸಗಿ ವ್ಯಕ್ತಿಯೊಬ್ಬರು ಬೆಳಗ್ಗೆ ದೂರು ನೀಡಿದರೆ ಸಂಜೆಯೇ ಕಾನೂನು ವಿಚಾರಣೆಗೆ ಅವಕಾಶ ನೀಡಿರುವ ರಾಜ್ಯಪಾಲರ ನಡೆಯೇ ಸಂಶಯದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ನಾಯಕರ ವಿರುದ್ದ ಕಾನೂನು ವಿಚಾರಣೆಗೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ ರಾಜ್ಯಪಾಲರು ಅನುಮತಿ ನೀಡದೇ ಯಾವುದೇ ತನಿಖಾ ಸಂಸ್ಥೆಗಳು ವರದಿ ನೀಡದೇ ಇದ್ದರೂ, ಕಾನೂನು ವಿಚಾರಣೆಗೆ ಅವಕಾಶ ನೀಡಿರುವುದು ರಾಜಕೀಯ ದುರುದ್ದೇಶ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಸಿದ್ರಾಮೋತ್ಸವ ಕಾರ್ಯಕ್ರಮದ ನಂತರ ರಾಜ್ಯ ಮತ್ತು ಪಕ್ಕದ ರಾಜ್ಯದಲ್ಲಿ ಸಿದ್ದರಾಮಯ್ಯನವ ಜನಮನ್ನಣೆ ಹೆಚ್ಚಳವಾಗಿರುವುದನ್ನು ಸಹಿಸಿಕೊಳ್ಳದೇ ಬಿಜೆಪಿ ನಾಯಕರು ರಾಜಕೀಯ ಕುತಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರ ನಿಷ್ಕ್ರಿಯಗೊಳಿಸಲು ಎಲ್ಲ ವರ್ಗದ ಜನರು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಎಲ್ಲ ಸಮುದಾಯಗಳ ಜನರು ಭಾಗವಹಿಸುವಂತೆ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ : ಸಾಹಿತಿ ಜಿ ಸಿದ್ದರಾಮಯ್ಯ
ನಂತರ ಮಾತನಾಡಿದ ಹಿರಿಯ ನ್ಯಾಯವಾದಿ ಶ್ರೀಕಾಂತರಾವ್, ಮೈಸೂರು ಪ್ರಾಧಿಕಾರ ನೀಡಿರುವ ನಿವೇಶನದ ಕುರಿತಾಗಿ ಅನಗತ್ಯ ಗೊಂದಲ ಸೃಷ್ಟಿಸಿ ಸುಳ್ಳು ಆರೋಪಗಳನ್ನು ಮುಖ್ಯಮಂತ್ರಿಗಳ ವಿರುದ್ದ ಹರಿಹಾಯುತ್ತಿದ್ದಾರೆ. 1998ರಲ್ಲಿಯೇ ಡಿನೋಟಿಫಿಕೇಷನ್ ಆಗಿರುವ ನಿವೇಶನವನ್ನು 2004ರಲ್ಲಿ ಸಿಎಂ ಕುಟುಂಬದವತು, ಎನ್‌ಎ ಮಾಡಿಸಿ ಅನುಮತಿ ಪಡೆದಿದ್ದಾರೆ ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಕ್ರಮವನ್ನು ಸಿಎಂ ಕುಟುಂಬದ ಮೇಲೆ ಹೇರುವ ಕೆಲಸವಾಗುತ್ತಿದೆ. ಮುಖ್ಯಮಂತ್ರಿಗಳ ವಿರುದ್ದ ಕೇಳಿಬಂದಿರುವ ಆರೋಪಗಳಿಗೆ ರಾಜ್ಯಪಾಲರು ವಿಚಾರಣೆಗೆ ಅವಕಾಶ ನೀಡುವ ಮುಂಚೆ ಯಾವುದೇ ಕಾನೂನು ವಿಧಿಗಳನ್ನು ಅನುಸರಿಸಿಲ್ಲ. ನಿಯಮ ಉಲ್ಲಂಘಿಸಿ ವಿಚಾರಣೆಗೆ ಅವಕಾಶ ನೀಡಿರುವುದು ಸಂವಿಧಾನ ವಿರೋಧಿಯಾಗಿದೆ. ಕಾನೂನಾತ್ಮಕ ಹೋರಾಟದೊಂದಿಗೆ ಹೋರಾಟ ನಡೆಸಲಾಗುತ್ತದೆ ಎಂದರು.
ಈ ಸಂರ್ಭದಲ್ಲಿ ಯಕ್ಲಾಸಪುರು, ಜಿ.ಸುರೇಶ, ಪಾಗುಂಟಪ್ಪ, ಪಂಪಾಪತಿ, ಪಾಂಡುರಂಗ ವಕೀಲ, ಸುರೇಖಾ, ಸುರೇಂದ್ರಬಾಬು ಇನ್ನಿತರರು ಇದ್ದರು.
ವರದಿ: ಹಫೀಜುಲ್ಲ
