ಅಕ್ರಮವಾಗಿ ಸಾರಾಯಿ ಮಾರಾಟ ಹಾಗೂ ಜಾತಿ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಎಸ್‌ಸಿ/ಎಸ್‌ಟಿ ಪ್ರಕರಣ ಬಂದಾಗ ರಾಜಕೀಯ ಹಾಗೂ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಶೋಷಿತರ ಮೇಲಾಗುವ ಅನ್ಯಾಯವನ್ನು ತಡೆಗಟ್ಟಬೇಕು ಎಂದು ಬಸವರಾಜ್ ಹಿರೇಮನಿ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಸ್‌ಸಿ/ಎಸ್‌ಟಿ ಕುಂದು ಕೊರತೆ ಸಭೆಯನ್ನು ಪ್ರಥಮ ಬಾರಿಗೆ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿತ್ತು. ಜತೆಗೆ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಶಾಂತಿಸಭೆ ನಡೆಸಿದರು.
ಈ ವೇಳೆ ನಾಗರಾಜ ದೊಡ್ಡಮನಿ ಮಾತನಾಡಿ, “ಗೋವಿನಾಳ ಗ್ರಾಮದಲ್ಲಿ ಎಸ್‌ಸಿ ಸಮುದಾಯದವರಿಗೆ ದೇವಸ್ಥಾನಗಳಿಗೆ ಮತ್ತು ಕಟ್ಟಿಂಗ್ ಶಾಪ್‌ಗಳಿಗೆ ಹೋಗಲು ಇವತ್ತಿಗೂ ಅವಕಾಶ ಕೊಡುತ್ತಿಲ್ಲ. ಇದರ ಕುರಿತು ದಲಿತರೇ ಪ್ರಕರಣ ದಾಖಲಿಸುವ ಪೂರ್ವದಲ್ಲಿ ಪೊಲೀಸ್ ಇಲಾಖೆಯವರೇ ಖುದ್ದು ಪರಿಶೀಲಿಸಿ ದಲಿತರಿಗೆ ನ್ಯಾಯ ದೊರೆಕಿಸಿಕೊಡಲು ಮುಂದಾಗಬೇಕು” ಎಂದರು.
ಫಕಿರೇಶ ಭಜಂತ್ರಿ ಮಾತನಾಡಿ, “ದಲಿತ ಸಮುದಾಯಗಳಿಗೆ ಕಾನೂನಿನ ಅರಿವಿನ ಅಗತ್ಯವಿದೆ. ಆ ನಿಟ್ಟಿನಲ್ಲಿ ಶೋಷಿತ ಸಮುದಾಯಗಳಿಗೆ ಕಾನೂನು ಜಾಗೃತಿ ಸಭೆಗಳಾಗಬೇಕು” ಎಂದರು.
ರಾಘವೇಂದ್ರ ಪೂಜಾರ ಮಾತನಾಡಿ, “ಸಾರಿಗೆ ವಾಹನದಲ್ಲಿ ಅಲೆಮಾರಿ/ಅರೆಅಲೆಮಾರಿ ಜನರು ವ್ಯಾಪಾರಕ್ಕೆಂದು ಹೋಗುವಾಗ ಸಾರಿಗೆ ನಿರ್ವಾಹಕರು ಮತ್ತು ಚಾಲಕರು ಅವರ ಲಗೇಜ್ ಎತ್ತಿ ಹೊರಗೆ ಎಸೆಯುತ್ತಿದ್ದಾರೆ. ಇಂತಹ ಜಾತಿ ನಿಂದನೆ ವರ್ತನೆಗಳನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿಲ್ಲಿಸಿ: ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ
ಲಕ್ಷ್ಮೇಶ್ವರ ಪಿಎಸ್‌ಐ ಈರಣ್ಣ ರಿತ್ತಿ ಮಾತನಾಡಿ, “ಲಕ್ಷ್ಮೇಶ್ವರ ಪಟ್ಟಣದ ಮುನ್ಸಿಪಲ್ ಕಾಲೇಜ್ ಹಿಂಬಾಗದಲ್ಲಿ ಗುಡಿಸಲಲ್ಲಿ ವಾಸಿಸುವ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ಗುಡಿಸಲುಗಳಲ್ಲಿ ಬೆಳಕಿಲ್ಲದೆ ಕತ್ತಲಲ್ಲಿ ವಾಸವಿದ್ದಾರೆ. ಈ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಲೈಟ್ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಸಭೆಯಲ್ಲಿ ಅನೇಕ ಸಮಸ್ಯೆಗಳ ಕುರಿತು ಚರ್ಚೆಯಾಗಿವೆ. ಅವೆಲ್ಲವುಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ವರದಿ : ಕೇಶವ ಕಟ್ಟಿಮನಿ ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್
