ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ-ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆ.27 ರಂದು ರಾಜಭವನ ಚಲೋ ನಡೆಸಲಾಗುವುದು ಎಂದು
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡ ಆರ್ ಕೆ ಸರ್ದಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಪ್ಯೂಡಲ್ವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳ ಕಛೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನು ವಿರೋಧಿಸಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಕ್ಕೂಟದಿಂದ ಹಾಗೂ ಎಲ್ಲಾ ಜನಪರ ಸಂಘಟನೆಗಳ ವತಿಯಿಂದ ರಾಜಭವನ ಚಲೋ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೇ ಅಲ್ಲ, ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ-ಪಡ್ಯಂತ್ರಗಳ ಭಾಗವಾಗಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬಿಜೆಪಿ-ಜೆಡಿಎಸ್ ಪಕ್ಷಗಳ ಹಿತಾಸಕ್ತಿಗೆ ಅಡ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಲೋಕಾಯುಕ್ತ, ಎಸ್ ಐಟಿ ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ಪ್ರಮುಖ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಹಗರಣಗಳಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದೆ ಯಾವುದೇ ಪಾತ್ರ ಇರದ ಮುಡ ಹಗರಣದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಲಾಗಿದ್ದು ರಾಜಭವನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದರ ವಿರುದ್ಧವಾಗಿ ಆಗಸ್ಟ್ 27 ರಂದು ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರು ಸೇರಿ ರಾಜಭವನಕ್ಕೆ ತೆರಳಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ಅಧ್ಯಕ್ಷರು ಸಿಟಿಕೆ ಕೃಷ್ಣಮೂರ್ತಿ, ಸಂಚಾಲಕ ಜಗದೀಶ್, ಮುಖಂಡರಾದ ಮೊಹಮ್ಮದ್ ಯಾಸಿನ್, ಮಹಾಬೂಬ್ ಖಾನ್ , ಝಾಕೀರ್ ಹುಸೈನ್, ಮಂಜು , ದುರ್ಗೆಷ್ , ರಘು ಸೇರಿದಂತೆ ಹಲವು ಅಹಿಂದ ಮುಖಂಡರು ಉಪಸ್ಥಿತರಿದ್ದರು.
