ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ 16 ಮಂದಿ ಸಹಚರರ ಜೊತೆ ಬಂಧಿತನಾಗಿ ಕಳೆದ 65 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಆತನ ತಂಡಕ್ಕೆ ವಿಐಪಿ ಸೌಲಭ್ಯ ಸಿಗುತ್ತಿರುವುದು ಫೋಟೋ ಹಾಗೂ ವಿಡಿಯೋ ಮೂಲಕ ವೈರಲ್ ಆಗಿದೆ.
ಫೋಟೊದಲ್ಲಿ ಜೈಲಿನ ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತಿರುವ ದರ್ಶನ್, ಒಂದು ಕೈಯಲ್ಲಿ ಕಾಫಿ ಮಗ್ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದಿರುವುದು ಬಹಿರಂಗ ಗೊಂಡಿರುವ ಫೋಟೊದಲ್ಲಿ ಕಾಣಿಸುತ್ತಿದೆ. ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್, ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್ ಮ್ಯಾನೇಜರ್ ನಾಗರಾಜ್ ಹಾಗೂ ಮತ್ತೊಬ್ಬ ಆರೋಪಿ ಕುಳ್ಳ ಸೀನಾ ಜೊತೆಯಲ್ಲಿ ನಗುತ್ತಾ ಮಾತುಕತೆ ನಡೆಸಲಾಗುತ್ತಿದೆ.
ರೌಡಿ ಶೀಟರ್ ವೇಲು ಎಂಬ ಕೈದಿ ದರ್ಶನ್ ಮತ್ತು ಸಹಚರರು ವಿಶೇಷ ಬ್ಯಾರಕ್ ಎದುರಿನ ನಡಿಗೆ ಪಥದ ಬಳಿ ಕುಳಿತು ಹರಟುತ್ತಿದ್ದ ಫೋಟೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ತನ್ನ ಪತ್ನಿಗೆ ಕಳುಹಿಸಿದ್ದ. ಆತನ ಪತ್ನಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದರು. ಹೀಗೆ ಆ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ದರ್ಶನ್‌ಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ; ಏಳು ಅಧಿಕಾರಿಗಳ ಅಮಾನತಿಗೆ ಸೂಚನೆ
ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 7 ಸಿಬ್ಬಂದಿಯನ್ನು ಗೃಹ ಸಚಿವ ಜಿ ಪರಮೇಶ್ವರ್ ಆದೇಶದ ಮೇಲೆ ಅಮಾನತುಮಾಡಲಾಗಿದೆ.
ದರ್ಶನ್ ವಿಡಿಯೊ ಕರೆ ವೈರಲ್
ಜೈಲಿನಲ್ಲಿ ಸಹಚರರ ಜತೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ಹರಿದಾಡಿದ ಬೆನ್ನಲ್ಲೇ ದರ್ಶನ್ ಅವರು ಸಹ ಕೈದಿಯೊಬ್ಬರ ಮೊಬೈಲ್‌ನಿಂದ ಆಪ್ತರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ದೃಶ್ಯಾವಳಿಯ ತುಣುಕು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ‘ಊಟ ಆಯಿತಾ, ಆರಾಮವಾಗಿದ್ದೀನಿ’ ಎಂದು ಆಪ್ತನಿಗೆ ಹೇಳಿರುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ದಾಳಿ ನಡೆಸಿದಾಗ ದೊರೆಯದ ಅನಧಿಕೃತ ವಸ್ತುಗಳು
ಅಕ್ರಮ ಚಟುವಟಿಕೆ ನಡೆಯುತ್ತಿರುವ ಶಂಕೆಯಲ್ಲಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿ, ಕೈದಿಗಳ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದ್ದರು. ದರ್ಶನ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇರುವ ಬ್ಯಾರಕ್‌ಗಳು ಸೇರಿದಂತೆ ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಹಲವು ಗಂಟೆ ಶೋಧಿಸಿದ್ದರು.
‘ಜೈಲಿನಲ್ಲಿ ಮೊಬೈಲ್ ಸೇರಿ ಯಾವುದೇ ಅನಧಿಕೃತ ವಸ್ತುಗಳು ದೊರೆತಿಲ್ಲ’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಸಹಚರರ ಜತೆ ಕುಳಿತು ಚರ್ಚಿಸುತ್ತಿರುವ ಫೋಟೊ ಈಗ ಬಹಿರಂಗವಾಗಿದೆ.
ವಿಲ್ಸನ್ ಗಾರ್ಡನ್ ನಾಗನ ವಿರುದ್ಧ ದರೋಡೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿಯೇ ಕುಳಿತು ಅಕ್ರಮ ಚಟುವಟಿಕೆಗೆ ಸಂಚು ರೂಪಿಸುತ್ತಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವು ರೌಡಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಸಿಸಿಬಿ ಪೊಲೀಸರು ಪತ್ರವನ್ನೂ ಬರೆದಿದ್ದರು.
