- ಲಿಂಗಾಯತರು ಬಿಜೆಪಿಗೆ ಪಾಠ ಕಲಿಸುವುದು ನಿಶ್ಚಿತ
- ಮೋದಿ ಲಿಂಗಾಯತ ನಾಯಕರ ಸಾವು ಬಯಸುತ್ತಿದ್ದೀರಾ?
ಬಿ ಎಸ್ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದೇಕೆ ಎಂಬ ಒಂದೇ ಪ್ರಶ್ನೆಗೆ ಮೋದಿ ಉತ್ತರಿಸಲಿ ಸಾಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯ ಬಿಜೆಪಿ, “ಲಿಂಗಾಯತ ಸಮುದಾಯವನ್ನು ಬಿಜೆಪಿ ಅವಹೇಳನ ಮಾಡಿದೆ ಎಂದ ಪ್ರಧಾನಿ ಮೋದಿ” ಎಂದು ಹೇಳುವ ಮೂಲಕ ಯಡವಟ್ಟು ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ಸತ್ಯವನ್ನೇ ಹೇಳಿದೆ” ಎಂದು ವ್ಯಂಗ್ಯವಾಡಿದೆ.
“ಹಿಂದೆ ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆ ಪಡೆದು, ಜೈಲಿಗೆ ಕಳಿಸಿದ್ದು ಬಿಜೆಪಿಯೇ. ನಂತರವೂ ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ, ಅಧಿಕಾರ ಕಸಿದಿದ್ದೂ ಬಿಜೆಪಿಯೇ. ಸಂತೋಷ ಕೂಟದ ಆಟಕ್ಕೆ ಲಿಂಗಾಯತರು ಬಲಿಯಾಗಿದ್ದು ಸುಳ್ಳೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಲಿಂಗಾಯತರ ಮತ ಬೇಡ ಎಂಬ ಸಂದೇಶವಲ್ಲವೇ ಇದು. ಯಡಿಯೂರಪ್ಪ ಅವರ ರಾಜೀನಾಮೆ ಪಡೆದಿದ್ದೇಕೆ ಎಂಬ ಒಂದೇ ಪ್ರಶ್ನೆಗೆ ಮೋದಿ ಉತ್ತರಿಸಲಿ ಸಾಕು” ಎಂದಿದೆ.
“ಬಿಜೆಪಿಯ ಲಿಂಗಾಯತ ದ್ವೇಷ ಲಿಂಗಾಯತ ನಾಯಕರ ಮೇಲಷ್ಟೇ ಅಲ್ಲ, ಐತಿಹಾಸಿಕ ವ್ಯಕ್ತಿಗಳ ಮೇಲೂ ಇದೆ. ಈ ಹಿಂದೆ ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ಮಣೆಕ್ ಶಾ ಪರೇಡ್ ಮೈದಾನದ ದ್ವಾರಕ್ಕೆ ಇದ್ದ ಕಿತ್ತೂರು ರಾಣಿ ಚೆನ್ನಮ್ಮ ಹೆಸರನ್ನು ತೆಗೆದುಹಾಕಿತ್ತು ಬಿಜೆಪಿ. ಪಠ್ಯದಲ್ಲಿ ಶರಣರ ವಚನಗಳನ್ನು ತೆಗೆದುಹಾಕಿದಂತೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಬಸವಣ್ಣನ ತತ್ವಗಳಿಗೂ ಬಿಜೆಪಿ ನಂಬಿರುವ ಮನುವಾದಕ್ಕೂ ವೈರುಧ್ಯಗಳಿವೆ. ಹೀಗಾಗಿಯೇ ಪಠ್ಯದಲ್ಲಿ ಬಸವಣ್ಣನವರನ್ನು ಅವಮಾನಿಸಿದ ಬಿಜೆಪಿ ಈಗ ಲಿಂಗಾಯತ ನಾಯಕರನ್ನೇ ಮುಗಿಸಲು ಹೊರಟಿದೆ” ಎಂದು ಕಾಂಗ್ರೆಸ್ ಹೇಳಿದೆ.
“ಬಿ ಎಸ್ ವೈ, ಶೆಟ್ಟರ್, ಸವದಿಯಂತಹ ನಾಯಕರನ್ನು ರಾಜಕಾರಣದಿಂದಲೇ ಹೊರದಬ್ಬುವ ಬಿಜೆಪಿ ಪ್ರಯತ್ನಕ್ಕೆ ಲಿಂಗಾಯತರು ಪಾಠ ಕಲಿಸುವುದು ನಿಶ್ಚಿತ” ಎಂದು ವ್ಯಂಗ್ಯವಾಡಿದೆ.
“ಹೌದು ಮೋದಿ ಹೇಳಿದ್ದು ನಿಜವೇ. ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತರಿಗೆ ಅಪಮಾನಿಸಿದೆ. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿತು. ಶೆಟ್ಟರ್ – ಸವದಿಯವರನ್ನು ಕಿಕ್ ಔಟ್ ಮಾಡಿತು. ಸೋಮಣ್ಣರನ್ನು ಬಲಿಪಶು ಮಾಡುತ್ತಿದೆ. ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಕುಹಕವಾಡಿದೆ.
“ಜಗದೀಶ್ ಶೆಟ್ಟರ್ ಸಾಯಲಿ ಎಂದು ಈಶ್ವರಪ್ಪನವರ ಬಾಯಲ್ಲಿ ಹೇಳಿಸಿರುವ ಬಿಜೆಪಿ ಲಿಂಗಾಯತರ ನಾಯಕತ್ವದ ನಾಶವನ್ನಷ್ಟೇ ಅಲ್ಲ, ಲಿಂಗಾಯತ ಸಮುದಾಯವು ಬದುಕಿಯೇ ಇರಬಾರದು ಎನ್ನುವ ಧೋರಣೆ ಹೊಂದಿದೆಯೇ?” ಎಂದು ಕೇಳಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಭರ್ಜರಿ ಮತ ಬೇಟೆಗಿಳಿದ ರಾಜ್ಯ, ರಾಷ್ಟ್ರ ನಾಯಕರು
“ಪ್ರಧಾನಿ ಮೋದಿ ಅವರೇ, ತಾವು ಲಿಂಗಾಯತ ನಾಯಕರ ಸಾವನ್ನು ಬಯಸುತ್ತಿದ್ದೀರಾ? ತಮ್ಮ ಪಕ್ಷ ಲಿಂಗಾಯತರನ್ನು ಮುಗಿಸಲು ಹೊಂಚು ಹಾಕಿದೆಯೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.