ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ತೇಜೋವಧೆ ಖಂಡಿಸಿ ಆಗಸ್ಟ್ 27ರಂದು ರಾಜಭವನ ಚಲೋ ಹಮ್ಮಿಕೊಂಡಿದ್ದು, ವಿಜಯಪುರ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಈ ಚಳುವಳಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ(ಗಣಿಹಾರ) ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ-ಜೆಡಿಎಸ್ ತಂತ್ರಗಳನ್ನು ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಈ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಪೂರ್ವಗ್ರಹ ಪೀಡಿತರಾಗಿ, ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“ಆದಾಯಕ್ಕೂ ಮಿತಿಮೀರಿದ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ತನಿಖೆಗೆ ಅನುಮತಿ ಕೊಡಿರೆಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ” ಎಂದು ಕಿಡಿಕಾರಿದರು.
ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಮುಖಂಡ ರವಿ ಬಿರಾದಾರ ಮಾತನಾಡಿ, “ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ಒಂದು ಸೂಜಿ ಮೊನೆಯಷ್ಟು ತಪ್ಪು ಮಾಡಿಲ್ಲವೆಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ. ಸರ್ಕಾರಿ ದಾಖಲೆಗಳು ಹೇಳುತ್ತಿವೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ಗಳು ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಲೇ ಹೊರಟಿದ್ದಾರೆ. ಇತ್ತೀಚೆಗೆ ಪ್ರಕರಣದ ವಿಚಾರಣೆಯಾಗಿ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು, ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರಾ? ಯಾವುದಾದರೂ ದಾಖಲೆಗಳು ಇವೆಯಾ? ಎಂದು ಕೇಳಿದಾಗ ವಿರೋಧ ಪಕ್ಷಗಳ ಬಳಿ ಉತ್ತರವೇ ಇರಲಿಲ್ಲ” ಎಂದರು.
ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಜು ಕಾಂಬೂಗಿ ಮಾತನಾಡಿ, “ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ಬಹುಮತದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೇ ವಾಪಸ್ಸು ಕರೆಸಿಕೊಳ್ಳಬೇಕು. ಸಿದ್ದರಾಮಯ್ಯರವರ ತನಿಖೆ ಅನುಮತಿ ಹಿಂಪಡೆಯಬೇಕ. ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಜಭವನ ಚಲೋ : ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ
“ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ಲಕ್ಷಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು” ಎಂದರು.
ಕಾಂಗ್ರೆಸ್ಸಿನ ಮುಖಂಡರುಗಳಾದ ಫಯಾಜ್ ಕಲಾದಗಿ, ಮಲ್ಲು ಬಿದರಿ ಇದ್ದರು.