ಐವತ್ತು ವರ್ಷಗಳ ಹಿಂದೆ ಮುಂಬೈನ ಆಸ್ಪತ್ರೆಯಲ್ಲಿ ದಾದಿ ಅರುಣಾ ಮೇಲೆ ಅತ್ಯಾಚಾರಗೈದವ ಸೋಹನ್‌ಲಾಲ್. ಇಂದು ಕೋಲ್ಕತ್ತದ ಆಸ್ಪತ್ರೆಯಲ್ಲಿ ಅಂತಹದ್ದೇ ಕೃತ್ಯ ಎಸಗಿದವ ಸಂಜಯ್ ರಾಯ್. ಈ ಮಧ್ಯೆ ಇಂತಹ ಸಾವಿರಾರು ಕೃತ್ಯಗಳು ನಡೆದಿವೆ. ಹೆಸರುಗಳಷ್ಟೇ ಬೇರೆ ಬೇರೆ. ಮನಸ್ಥಿತಿ ಒಂದೇ…
ಕೋಲ್ಕತ್ತಾದಲ್ಲಿ ಯುವ ವೈದ್ಯೆಯನ್ನು ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಗೆ ನುಗ್ಗಿ ಅಮಾನುಷವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ, ಐವತ್ತು ವರ್ಷಗಳ ಹಿಂದೆ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೊಳಗಾಗಿ 42 ವರ್ಷ ಕೋಮಾದಲ್ಲಿದ್ದ ಕನ್ನಡತಿ ಅರುಣಾ ಶಾನುಭಾಗ್ ಪ್ರಕರಣ ನೆನಪಿಗೆ ತಂದಿದೆ.
ತುರ್ತು ಕರ್ತವ್ಯದ ಮೇರೆಗೆ ಹಾಜರಾಗಲು, ಆಸ್ಪತ್ರೆಯ ಸರ್ಜರಿ ಲ್ಯಾಬ್ ನ ಬಳಿಯಿರುವ ದಾದಿಯರ ಡ್ಯೂಟಿ ರೂಂನಲ್ಲಿ ಬಟ್ಟೆ ಬದಲಿಸುತ್ತಿದ್ದ ಅರುಣಾರನ್ನು ವಾರ್ಡ್ ಕ್ಲೀನಿಂಗ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೋಹನ್ ಲಾಲ್ ಭಾರ್ತಾ ವಾಲ್ಮೀಕಿ ಅಡಗಿ ಕುಳಿತು, ಕುತ್ತಿಗೆಗೆ ಸರಪಳಿ ಬಿಗಿದು ಭೀಕರವಾಗಿ ಅತ್ಯಾಚಾರ ಎಸಗಿದ್ದ. ಕತ್ತಿಗೆಗೆ ಬಿಗಿದ ಸರಪಳಿಯಿಂದಾಗಿ ಮಿದುಳಿಗೆ ಆಮ್ಲಜನಕ ಪೂರೈಕೆಯಾಗದೇ ಕೋಮಾಗೆ ಜಾರಿದ್ದ ಅರುಣಾ ಅವರನ್ನು ಆಸ್ಪತ್ರೆಯ ಸಿಬ್ಬಂದಿ ನವಜಾತ ಶಿಶುವಿನಂತೆ 42 ವರ್ಷಗಳ ಕಾಲ ಅದೇ ಆಸ್ಪತ್ರೆಯ ವಾರ್ಡಿನಲ್ಲೇ ಆರೈಕೆ ಮಾಡಿದ್ರು. ಆಕೆ ಇನ್ನು ಎಂದಿಗೂ ಮೇಲೇಳಲ್ಲ ಎಂಬ ಸತ್ಯ ಗೊತ್ತಿದ್ದರೂ ಜೋಪಾನ ಮಾಡಿದ್ದರು.
ಆಸ್ಪತ್ರೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ನರ್ಸ್ ಅರುಣಾ, ದಿನಾ ತಡವಾಗಿಯೇ ಕೆಲಸಕ್ಕೆ ಹಾಜರಾಗುವ ವಾರ್ಡ್ ಕ್ಲೀನಿಂಗ್ ಬಾಯ್ ವಾಲ್ಮೀಕಿಗೆ ಹಲವು ಬಾರಿ ಬೈದಿದ್ದರು. ಆ ಸಿಟ್ಟಿಗೆ ಆತ 1973 ನವೆಂಬರ್ 27ರಂದು ಅರುಣಾರ ಮೇಲೆ ಅತ್ಯಾಚಾರವೆಸಗಿ ಸೇಡು ತೀರಿಸಿಕೊಂಡಿದ್ದ. ನಮ್ಮ ಉತ್ತರ ಕರ್ನಾಟಕದ ಯುವತಿ ಅರುಣಾರನ್ನು ಅದೇ ಆಸ್ಪತ್ರೆಯ ಯುವ ವೈದ್ಯ ಡಾ. ಸಂದೀಪ್ ಸರ್‌ದೇಸಾಯಿ ಅವರನ್ನು ಪ್ರೀತಿಸುತ್ತಿದ್ದರು. ಡಾಕ್ಟರ್ ಸಂದೀಪ್ ಜೊತೆಗೆ ಅರುಣಾ ಅವರ ಮದುವೆ ಕೆಲವೇ ದಿನಗಳಲ್ಲಿ ನಡೆಯಬೇಕಿತ್ತು. ಆದರೆ, ವಾಲ್ಮೀಕಿಯ ಜೊತೆ ಆದ ಸಣ್ಣ ಜಗಳವನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೇ ಆಕೆಯ ಜೀವಕ್ಕೆ ಮುಳುವಾಗಿತ್ತು. ಹೊಂಚು ಹಾಕಿ ಕಾದಿದ್ದ ಅತ್ಯಾಚಾರಿ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರ ಗ್ರಾಮದವರಾದ ಅರುಣಾ 18ನೇ ವಯಸ್ಸಿನಲ್ಲಿ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ ಜೂನಿಯರ್ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದರು. ಆಕೆ ಅತ್ಯಾಚಾರಕ್ಕೆ ಬಲಿಯಾದಾಗ 25ರ ಹರೆಯದ ಯುವತಿ. ವಾಲ್ಮೀಕಿ ಎಂಬ ಮೃಗ ನಾಯಿಯ ಕುತ್ತಿಗೆಗೆ ಹಾಕುವ ಸರಪಳಿ ಹಿಡಿದೇ ಅರುಣಾರನ್ನು ಹಿಂಬಾಲಿಸಿ ಬಂದು ಪೈಶಾಚಿಕ ಕೃತ್ಯ ಎಸಗಿತ್ತು. ಅದಾಗಿ 36 ವರ್ಷಗಳ ನಂತರ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತೆಯಾಗಿದ್ದ ಪಿಂಕಿ ವಿರಾನಿ 2009ರಲ್ಲಿ ಅರುಣಾ ಕುರಿತ ವರದಿ ಮಾಡಿದ ನಂತರ ಇಡೀ ಜಗತ್ತಿಗೆ ಈ ಭೀಕರ ಘಟನೆ ಗೊತ್ತಾಗಿತ್ತು. ಪಿಂಕಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅರುಣಾಗೆ ದಯಾಮರಣ ನೀಡಬೇಕು ಎಂದು ಕೋರಿದ್ದರು. 2011ರಲ್ಲಿ ಆ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿತ್ತು. 2015ರ ಮೇ 18ರಂದು ನ್ಯುಮೋನಿಯಾಗೆ ತುತ್ತಾಗಿ ಕೊನೆಯುಸಿರೆಳೆವಾಗ ಅರುಣಾ ವಯಸ್ಸು 67. ದುರಂತವೆಂದರೆ ಸೋಹನ್ ಲಾಲ್ ಕೇವಲ ಏಳು ವರ್ಷಗಳಲ್ಲೇ ಜೈಲಿನಿಂದ ಬಿಡುಗಡೆಗೊಂಡಿದ್ದನು.

ಎಂದಿನಂತೆ ಡ್ಯೂಟಿ ಮುಗಿದು ಹಾಸ್ಟೆಲ್‌ಗೆ ಹೋಗಿದ್ದ ಅರುಣಾ ಅವರಿಗೆ ಆಸ್ಪತ್ರೆಯಿಂದ ತುರ್ತು ಕರೆ ಹೋಗಿತ್ತು. ಹಾಗಾಗಿ ತರಾತುರಿಯಲ್ಲಿ ಮತ್ತೆ ಆಸ್ಪತ್ರೆಗೆ ಧಾವಿಸಿದ ಅರುಣಾ ಯುನಿಫಾರಂ ತೊಟ್ಟು ಇನ್ನೇನು ವಾರ್ಡ್‌ಗೆ ತೆರಳಬೇಕೆಂದಿದ್ದಾಗ ಮೃತ್ಯು ಸ್ವರೂಪಿ ಅತ್ಯಾಚಾರಿ ಪ್ರತ್ಯಕ್ಷವಾಗಿದ್ದ. ಆಗಲೇ ವಾರ್ಡ್‌ಗೆ ಹೋಗಿದ್ದ ಉಳಿದ ದಾದಿಯರು ಡ್ಯೂಟಿ ಮುಗಿಸಿ ಬಟ್ಟೆ ಬದಲಿಸಲು ರೂಮಿಗೆ ಬಂದಾಗ ಅರುಣಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೆ, ಅದಾಗಲೇ ಈ ಘಟನೆ ನಡೆದು ಬರೋಬ್ಬರಿ 11ಗಂಟೆ ಕಳೆದಿತ್ತು. ಹಾಗಾಗಿ ಆಕೆ ಬದುಕಿದ್ದರೂ, ಕಣ್ಣು ಬಿಟ್ಟು ನೋಡುತ್ತಿದ್ದರೂ ಜಗತ್ತಿನ ಅರಿವು ಇರಲಿಲ್ಲ. ಎಲ್ಲರ ಪ್ರೀತಿಯ ಅರುಣಾ ಸಿಸ್ಟರ್ ಆಘಾತದಿಂದ ಆಚೆ ಬರಲೇ ಇಲ್ಲ. ಅದಾಗಿ ನಾಲ್ಕು ವರ್ಷಗಳ ಕಾಲ ಡಾ. ಸಂದೀಪ್ ಜೀವಚ್ಛವವಾಗಿ ಮಲಗಿದ್ದ ತನ್ನ ಪ್ರೇಯಸಿ ಅರುಣಾರನ್ನು ಆರೈಕೆ ಮಾಡಿದ್ದರು. ಆಕೆ ಮತ್ತೆ ಎಂದಿನಂತಾಗುತ್ತಾಳೆ, ನಂತರ ಮದುವೆಯಾಗುತ್ತೇನೆ ಎಂದುಕೊಂಡೇ ಹತ್ತು ವರ್ಷ ಆ ಭರವಸೆಯಲ್ಲಿಯೇ ಕಳೆದಿದ್ದರು.
ಪಿಂಕಿ ವಿರಾನಿ ‘ಅರುಣಾಸ್ ಸ್ಟೋರಿ’ ಎನ್ನುವ ಪುಸ್ತಕ ಬರೆದರು. ಇದು ಮುಂದೆ ಅನೇಕ ಭಾರತೀಯ ಭಾಷೆಗಳಲ್ಲಿ ಭಾಷಾಂತರಗೊಂಡು, ಅರುಣಾ ಅವರ ಕರುಣಾಜನಕ ಕಥೆ ಜನರ ಮುಂದೆ ತೆರೆದುಕೊಂಡಿತು. ಅರುಣಾಗೆ ದಯಾ ಮರಣದ ಅವಕಾಶ ಕಲ್ಪಿಸಲು, ಆಕೆಯ ಅತ್ತಿಗೆ ಭಾಗೀರಥಿ ಶಾನುಭಾಗ್ ವಿರೋಧಿಸಿದ್ದರು. ಸುಪ್ರೀಂ ಕೋರ್ಟ್ ದಯಾಮರಣ ಅರ್ಜಿ ವಜಾ ಮಾಡಿದರೂ, ಕುಟುಂಬದ ಒಪ್ಪಿಗೆ ಪಡೆದು, ಜೀವ ಸಂರಕ್ಷಕ ವಿಧಾನಗಳನ್ನು ತೆಗೆಯುವ ಮೂಲಕ, ಅವರನ್ನು ನರಳಾಟದಿಂದ ಮುಕ್ತಗೊಳಿಸಲು ಆದೇಶಿಸಿತ್ತು. ಜೀವರಕ್ಷಕ ಉಪಕರಣಗಳನ್ನು ತೆಗೆದ ನಂತರ ನ್ಯುಮೊನಿಯಾದಿಂದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ವಾರ್ಡ್ ನಂ.4ರ ಸಮೀಪ ಇದ್ದ ವಿಶೇಷ ಕೊಠಡಿಯಲ್ಲಿಯೇ ಕೊನೆಯುಸಿರೆಳೆದರು. 42 ವರ್ಷಗಳ ಕಾಲ ಕೋಮಾದಲ್ಲಿದ್ದು, ವಿಶ್ವದಲ್ಲೇ ದೀರ್ಘ ಕಾಲ ಕೋಮಾದಲ್ಲಿದ್ದ ವ್ಯಕ್ತಿ ಎಂಬ ಕರಾಳ ದಾಖಲೆ ಅರುಣಾ ಶಾನ್‍ಭಾಗ್ ಅವರದ್ದು.

ಅಂದು ಸೋಹನ್ ಲಾಲ್, ಇಂದು ಸಂಜಯ್ ರಾಯ್…
ಐವತ್ತು ವರ್ಷಗಳ ಹಿಂದೆ ಮುಂಬೈನ ಆಸ್ಪತ್ರೆಯಲ್ಲಿ ಅರುಣಾ ಮೇಲೆ ಅತ್ಯಾಚಾರಗೈದ ಸೋಹನ್‌ಲಾಲ್ ಇಂದು ಕೋಲ್ಕತ್ತದ ಆಸ್ಪತ್ರೆಯಲ್ಲಿ ಅದೇ ಕೃತ್ಯ ಎಸಗಿದ ಸಂಜಯ್ ರಾಯ್. ಈ ಮಧ್ಯೆ ಇಂತಹ ಸಾವಿರಾರು ಕೃತ್ಯಗಳು ನಡೆದಿವೆ. ಹೆಸರುಗಳಷ್ಟೇ ಬೇರೆ ಬೇರೆ. ಮನಸ್ಥಿತಿ ಒಂದೇ. ಕೋಲ್ಕತ್ತಾದ ಯುವ ವೈದ್ಯೆಯನ್ನು ಅಮಾನುಷವಾಗಿ ಅತ್ಯಾಚಾರಗೈದು ಕೊಂದು ಹಾಕಿದ ಸಂಜಯ್ ರಾಯ್ ನಾಲ್ಕು ಮದುವೆಯಾಗಿದ್ದ, ದುಶ್ಚಟಗಳ ದಾಸನಾಗಿದ್ದ. ಅಚ್ಚರಿಯೆಂದರೆ ಈ ಸಕಲ ದುರ್ಗುಣಗಳ ವ್ಯಕ್ತಿ ಕೋಲ್ಕತ್ತಾ ಪೊಲೀಸರ ನಾಗರಿಕ ಸ್ವಯಂ ಸೇವಕವಾಗಿದ್ದ. ಆ ನೆಪದಲ್ಲಿ ತಾನು ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಆಸ್ಪತ್ರೆಗೆ ಸುಲಭವಾಗಿ ಪ್ರವೇಶಿಸುತ್ತಿದ್ದ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬೆಡ್ ಕೊರತೆ ಇದ್ದರೆ ಅವರನ್ನು ಪುಸಲಾಯಿಸಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಕಮಿಷನ್ ವಸೂಲಿ ಮಾಡುವ ದಂಧೆ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಎಂತಹ ವ್ಯಕ್ತಿಯನ್ನು ಪೊಲೀಸ್ ಇಲಾಖೆ ನಾಗರಿಕ ಸ್ವಯಂಸೇವಕನನ್ನಾಗಿ ನೇಮಿಸಿಕೊಂಡಿತ್ತು ಎಂಬುದು ಪ್ರಶ್ನಾರ್ಹ.
ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸುವುದು, ಟ್ರಾಫಿಕ್ ಕಂಟ್ರೋಲ್, ಪ್ರಾಕೃತಿಕ ವಿಕೋಪದಿಂದ ಜನರನ್ನು ರಕ್ಷಿಸುವುದು ಮುಂತಾದ ಕೆಲಸಗಳನ್ನು ಮಾಡಿಸಲು ನಾಗರಿಕ ಸ್ವಯಂಸೇವಕರನ್ನು ನೇಮಿಸಿಕೊಳ್ಳುವಾಗ ಸನ್ನಡತೆ ಅಪೇಕ್ಷಣೀಯ ಅಲ್ಲವೇ ? ದುಶ್ಚಟ, ದುರ್ನಡತೆಯ ವ್ಯಕ್ತಿಗಳನ್ನು ನಾಗರಿಕರ ರಕ್ಷಣೆಗೆ ನೇಮಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ.

ಆತ ಆ ರಾತ್ರಿ ಎರಡು ವೇಶ್ಯಾಗೃಹಗಳಿಗೆ ಹೋಗಿದ್ದ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಅದ್ಯಾವ ಸಿಟ್ಟು ಆವೇಶ ಇತ್ತೋ, ರಾತ್ರಿ ಪಾಳಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೈದ್ಯೆಯ ಮೇಲೆ ಆತ ಎರಗಿದ್ದು ಮಧ್ಯರಾತ್ರಿ ಕಳೆದು ಇನ್ನೇನು ಬೆಳಕು ಹರಿಯಬೇಕು ಎನ್ನುವ ಮೂರು ಗಂಟೆಯ ಸಮಯ. ಅತ್ಯಾಚಾರ ನಡೆಸುವ ಮುನ್ನ ಆಕೆಯನ್ನು ಕೊಂದು ಮುಗಿಸಿದ್ದ ಎಂದು ಹೇಳಲಾಗಿದೆ. ಅಷ್ಟು ದೊಡ್ಡ ಆಸ್ಪತ್ರೆಯೊಳಗೆ ಆಕೆಯ ಕಿರುಚಾಟ ಕೇಳಲಿಲ್ಲ! ಮುಂಜಾನೆ ಸಿಕ್ಕಿದ್ದು ಆಕೆಯ ಛಿದ್ರಗೊಂಡ ದೇಹ. ಕಣ್ಣೊಳಗೆ ಕನ್ನಡಕದ ಗಾಜಿನ ಚೂರು ಹೊಕ್ಕಿ ರಕ್ತ ಚಿಮ್ಮಿತ್ತು. ಎರಡೂ ತೊಡೆಯ ಕೀಲು ಮೂಳೆಗಳು ಮುರಿದು ಕಾಲುಗಳೆರಡನ್ನೂ ದೇಹದ ಅಕ್ಕಪಕ್ಕಕ್ಕೆ ಲಂಬ ಕೋನಕ್ಕೆ ತಿರುಚಲಾಗಿತ್ತು. ಅವನೊಬ್ಬನೇ ಮಾಡಿದ್ದಾನಾ ಅಥವಾ ಸಾಮೂಹಿಕ ಅತ್ಯಾಚಾರವೇ ಇನ್ನೂ ಖಚಿತಪಟ್ಟಿಲ್ಲ. ಗುಪ್ತಾಂಗದಲ್ಲಿ 150ಗ್ರಾಂನಷ್ಟು ವೀರ್ಯಾಣು ಇತ್ತು ಎಂಬುದು ಇದು ಸಾಮೂಹಿಕ ಅತ್ಯಾಚಾರ ಎಂಬ ಅನುಮಾನವನ್ನು ಮೂಡಿಸಿದೆ.
ಆಸ್ಪತ್ರೆಗಳಂತಹ ಹಗಲೂ – ರಾತ್ರಿ ಎಚ್ಚರವಿರುವ ಜಾಗಗಳಲ್ಲಿ ಇಂತಹ ಪಾತಕಿಗಳು ಭದ್ರತಾ ವ್ಯವಸ್ಥೆಯನ್ನು ದಾಟಿ ಬರುತ್ತಾರೆ ಎಂದರೆ ನಾವು ಅದೆಷ್ಟು ಬೇಜವಾಬ್ದಾರಿ ವ್ಯವಸ್ಥೆಯೊಳಗೆ ಇದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.