ನಟ ದರ್ಶನ್ ವಿಚಾರದಲ್ಲಿ ಪರಪ್ಪನ ಅಗ್ರಹಾರ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೊಲೆ ಪ್ರಕರಣದಂತಹ ಗಂಭೀರ ಆರೋಪ ಹೊತ್ತು ಜೈಲು ಸೇರಿರುವ ನಟನಿಗೆ ವಿಐಪಿ ಸೌಲಭ್ಯಗಳನ್ನು ನೀಡಲಾಗಿದೆ. ಆ ಮೂಲಕ ಕಾನೂನಿನ ಉಲ್ಲಂಘನೆ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಈ ಮೂರೂ ಎಫ್ಐಆರ್ಗಳಲ್ಲಿ ದರ್ಶನ್ ಹೆಸರು ಪ್ರಸ್ತಾಪ ಆಗಿದೆ. ಇದರಿಂದ ನಟನಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ.
ಜೈಲಿನಲ್ಲಿ ದುಡ್ಡು ಇರುವ ವ್ಯಕ್ತಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದನ್ನು ಸಾಕ್ಷಿ ಎಂಬಂತೆ ದರ್ಶನ್ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕರ ದೂರು ಆಧರಿಸಿ ಮೂರು ಎಫ್ಐಆರ್ ದಾಖಲು ಮಾಡಲಾಗಿದೆ. ಕೊಲೆ ಆರೋಪಿಗಳಾದ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ದರ್ಶನ್ ಆಪ್ತ ನಾಗರಾಜ್ ವಿರುದ್ಧ ಒಂದು ಎಫ್ಐಆರ್ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ದರ್ಶನ್ ಫೋಟೊವನ್ನು ಬಹಿರಂಗಪಡಿಸಿದ್ದು ಜೈಲಿನಲ್ಲಿದ್ದ ಮತ್ತೊಬ್ಬ ಪಾತಕಿ
ಆರೋಪಿ ದರ್ಶನ್ಗೆ ಸಿಗರೇಟ್ ಕೊಟ್ಟಿದ್ದಕ್ಕೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ವಿಡಿಯೋ ಮಾಡಿ ವೈರಲ್ ಮಾಡಿದ್ದಕ್ಕೆ 3ನೇ ಎಫ್ಐಆರ್ ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟು 3 ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೂರು ಎಫ್ಐಆರ್ಗಳಲ್ಲೂ ಕೂಡ ದರ್ಶನ್ ಆರೋಪಿ ಆಗಿದ್ದಾರೆ. ಇದರಿಂದ ಅವರಿಗೆ ಜಾಮೀನು ಪಡೆಯುವಲ್ಲಿ ಸಂಕಷ್ಟ ಎದುರಾಗಲಿದೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನಿಂದ ಅಶ್ಲೀಲ ಸಂದೇಶ ಬಂದಿತ್ತು. ಆ ಕಾರಣಕ್ಕಾಗಿ ಆತನಿಗೆ ಬೆಂಗಳೂರಿನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿಸಿದ ಆರೋಪ ದರ್ಶನ್ ಹಾಗೂ ಸಹಚರರ ಮೇಲಿದೆ. ಇದೇ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಈಗ ಜೈಲಿನಲ್ಲಿ ಅವರು ಪ್ರಭಾವ ಬಳಸಿ ನಿಯಮಗಳನ್ನು ಮುರಿದಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ಜೈಲಿನ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಅನುಮಾನ ಮೂಡುವ ರೀತಿಯಲ್ಲಿ ನಟನ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.
