ಅಡುಗೆ ಮನೆಯಲ್ಲಿ ಉಪಯೋಗಿಸುವ ಕಲ್ಲಿನ ಉಪಕರಣಗಳಾದ ಬೀಸುವ ಕಲ್ಲು, ರುಬ್ಬುಗುಂಡು, ಖಲಗಲ್(ಅಸಗಲ್ಲ) ಸೇರಿದಂತೆ ಹಲವು ಕಲ್ಲಿನ ಉಪಕರಣಗಳು ಮಾರಾಟವಾಗದೆ ಸಂಕಷ್ಟದಲ್ಲಿದ್ದ ವಡ್ಡರ ಸಮುದಾಯದ ಬಳಿಗೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಮತ್ತು ಸಾಮಾಜ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿಗಳು ಭೇಟಿ ನೀಡಿದ್ದು, ವಡ್ಡರ ಸಮುದಾಯದ ಸಂಕಷ್ಷ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
ಕಲ್ಲು ಒಡೆದು, ಅದಕ್ಕೆ ಸುಂದರ ಆಕೃತಿ ಕೊಟ್ಟು ಅಡುಗೆ ಮನೆಯಲ್ಲಿ ಉಪಯೋಗಿಸುವ ಉಪಕರಣ ತಯಾರಕರ ಕುರಿತು ಈ ದಿನ.ಕಾಮ್ ಕಳೆದ ಆಗಸ್ಟ್ 17ರಂದು ಜೇವರ್ಗಿ | ಮಾರಾಟವಾಗದ ಅಡುಗೆ ಮನೆಯಲ್ಲಿ ಉಪಯೋಗಿಸುವ ಕಲ್ಲಿನ ಉಪಕರಣಗಳು; ಸಂಕಷ್ಟದಲ್ಲಿ ವ್ಯಾಪಾರಿಗಳು ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಅಲ್ಲದೇ, ಆ.20ರಂದು ವಿಡಿಯೋ ವರದಿ ಕೂಡ ಪ್ರಕಟಿಸಲಾಗಿತ್ತು.
ಈ ವರದಿಯನ್ನು ಗಮನಿಸಿದ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ್ ಅವರು ವಡ್ಡರ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ್ದು, ಸರ್ಕಾರದಿಂದ ಸೂಕ್ತ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

“ಸದ್ಯಕ್ಕೆ ಈ ವ್ಯಾಪ್ತಿಯಲ್ಲಿ ಎಲ್ಲಿಯೂ ಸರ್ಕಾರಿ ಜಾಗವಿಲ್ಲ. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಿವೇಶನ ಒದಗಿಸುವ ಯಾವುದೇ ಯೋಜನೆ ಇಲ್ಲದಿರುವುದರಿಂದ ಮುಂಬರುವ ದಿನಗಳಲ್ಲಿ ನಿವೇಶನ ವಂಚಿತರ ಪಟ್ಟಿಯಲ್ಲಿ ವಡ್ಡರ ಸಮುದಾಯದ ಐದು ಕುಟುಂಬಗಳ ಹೆಸರನ್ನು ಸೇರಿಸುತ್ತೇವೆ. ನಂತರ ಈ ಯೋಜನೆಯಲ್ಲಿ ನಿವೇಶನ ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಹೇಳಿದ್ದು, “ನಾವು ಮತ್ತೊಮ್ಮೆ ಈ ಸಮುದಾಯಕ್ಕೆ ಭೇಟಿ ನೀಡುವಷ್ಟರಲ್ಲಿ ನಿಮ್ಮ ಮಕ್ಕಳನ್ನೆಲ್ಲ ಶಾಲೆಗೆ ದಾಖಲಿಸಿರಬೇಕು” ಎಂದು ಸೂಚನೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಮೈಷುಗರ್ ಸಕ್ಕರೆ ಕಾರ್ಖಾನೆಯ ₹181.84 ಕೋಟಿ ಸಾಲ ತೀರುವಳಿ: ಸಿ ಡಿ ಗಂಗಾಧರ್
ವಡ್ಡರ ಸಮುದಾಯದ ನಾಗುಬಾಯಿ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಧಿಕಾರಿಗಳು ಭೇಟಿ ನೀಡಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ವರದಿಯ ಮೂಲಕ ನಮ್ಮ ಸಮುದಾಯದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ಈ ದಿನ.ಕಾಮ್‌ಗೆ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸಿದರು.
ತಹಶೀಲ್ದಾರ್ ಭೇಟಿಯ ವೇಳೆ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.



ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.