ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರ ಪಾಳಯದಲ್ಲಿ ತೆರೆಮರೆಯಲ್ಲಿ ಭಾರೀ ರಾಜಕೀಯ ಬೆಳವಣಿಗೆ ಗರಿಗೆದರಿದೆ.
ಒಟ್ಟು 14 ಸದಸ್ಯರ ಬಲ ಹೊಂದಿರುವ ನಾಲತವಾಡ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರ 4 ಸದಸ್ಯರನ್ನು ಒಳಗೊಂಡಿದೆ. ಕಾಂಗ್ರೆಸ್ ಬೆಂಬಲವಿರುವವರಿಗೆ ನಿಚ್ಚಳ ಬಹುಮತವಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿ 4 ಜನರ ಪ್ರಬಲ ಪೈಪೋಟಿ ಇದ್ದು, ಯಾರನ್ನು ಅಧ್ಯಕ್ಷ ಮಾಡಬೇಕೆಂಬ ಸವಾಲು ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ.
ವಾರ್ಡ್ ನಂಬರ್ 8 ರ ಅಭ್ಯರ್ಥಿ ಬಸಿರಾ ಬೇಗಮ್ ಮೂಲಿಮನಿ, ವಾರ್ಡ್ ನಂ.7 ರ ಅಭ್ಯರ್ಥಿ ಲಲಿತಾ ದೊಡ್ಡನಗೌಡ ಗೊರಬಾಳ, ವಾರ್ಡ್ ನಂ.4 ವಿಜಯಲಕ್ಷ್ಮಿ ಇಲಕಲ್ಲ, ವಾರ್ಡ್ ನಂ.1 ರಾಜಬಿ ನಡದಾಳ ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿ ಬರುತ್ತಿದೆ.
ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದಕ್ಕೆ ಈಗಾಗಲೇ ಲಾಬಿ ಕೂಡ ಜೋರಾಗಿದೆ. ನಾಲ್ಕು ಜನರಲ್ಲಿ ಶಾಸಕರಿಗೆ ಒಲವು ಯಾರಿಗೆ? ಅಧ್ಯಕ್ಷ ಸ್ಥಾನ ಯಾರಿಗೆ ಸಿಗುವುದು ಎನ್ನುವುದೇ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಚರ್ಚೆ
ಸಾಮಾನ್ಯ ಕ್ಷೇತ್ರದ ಉಪಾಧ್ಯಕ್ಷ ಸ್ಥಾನದ ಬಗ್ಗೆ ಪಟ್ಟಣದಲ್ಲಿ ಈಗ ಹೆಚ್ಚು ಚರ್ಚೆ ಶುರುವಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಯುವಕರ ತಂಡ ಪಕ್ಷೇತರವಾಗಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಇವರಿಬ್ಬರ ಕಾರ್ಯತಂತ್ರ ವರ್ಕೌಟ್ ಆಗಿ ಬಿಜೆಪಿಗೆ ಖಾತೆ ತೆರೆಯದಂತೆ ಮಾಡಿದ್ದರು. ಅದಾದ ನಂತರ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ಸೇರಿದಂತೆ ಪ್ರತಿಷ್ಠಿತ ದೇಶಮುಖ ಮನೆತನವು ಕೊಡಾ ಕಾಂಗ್ರೆಸ್ಗೆ ಬೆಂಬಲ ಸೂಚಿಸಿತ್ತು.
ಪಕ್ಷೇತರರನ್ನು ಕಟ್ಟಿದ್ದ ಮುಖಂಡ ಮಹಾಂತೇಶ ಗಂಗನಗೌಡರ ಕೊಡಾ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಆದರೆ, ಈಗ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಎಲ್ಲಿಲ್ಲದ ಪೈಪೋಟಿ ಶುರುವಾಗಿದೆ.
ಇದರಲ್ಲಿ ಪ್ರಮುಖವಾಗಿ ಪಕ್ಷೇತರ ( ಕಾಂಗ್ರೆಸ್ ಬೆಂಬಲಿತ) ಸದಸ್ಯರಾದ ಶರಣಬಸು ಗಂಗನಗೌಡರ, ಬಸವರಾಜ ಗಂಗನಗೌಡರ, ಕಾಂಗ್ರೆಸ್ ಸದಸ್ಯ ಸಂಗಪ್ಪ ಬಾರಡ್ಡಿ ಮತ್ತು ಜೆಡಿಎಸ್ ಸದಸ್ಯ( ಕಾಂಗ್ರೆಸ್ ಬೆಂಬಲಿತ ) ಬಾಬು ಕ್ಷತ್ರಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಪಟ್ಟಣ ಪಂಚಾಯಿತಿ ಚುನಾವಣೆ ನಂತರ ಪಕ್ಷೇತರ ಟೀಮ್ ದೇಶಮುಖ ವಾಡೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಾಸಕರ ಗೆಲುವಿಗೆ ಶ್ರಮಿಸಿದ್ದರು. ಬಳಿಕದ ಎಲ್ಲಾ ಸಭೆ ಸಮಾರಂಭದಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದರು.ಆದರೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಹೊರಬಿದ್ದ ಬಳಿಕ ಪಕ್ಷೇತರರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕೆಂಬ ಲಾಭ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಮೂಲ ಕಾಂಗ್ರೆಸ್ಸಿಗರು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷೇತರರು ಅಂತ ಹೇಳಿಕೊಂಡು ತಿರುಗಾಡಿದರೆ ಹೇಗೆ? ಸಾಮಾನ್ಯ ಸ್ಥಾನಕ್ಕೆ ಲಾಬಿ ಮಾಡಿ.ಆದರೆ, ಪಕ್ಷೇತರ ಟೀಮ್ ಅನ್ನುವುದು ಸೂಕ್ತ ಕಾಣುವುದಿಲ್ಲಾ ಎಂಬ ಆಕ್ಷೇಪಗಳು ಕೂಡ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ರಾಯಚೂರು | ಚಿಕ್ಕಲಪರ್ವಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಶೀಘ್ರವೇ ಆರಂಭ: ಸಚಿವ ಬೋಸರಾಜು
ಒಟ್ಟಿನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಈಗ ಶಾಸಕರಾದ ಸಿ ಎಸ್ ನಾಡಗೌಡ ಹಾಗೂ ದೇಶಮುಖ ಮನೆತನದವರು ಕೂಡಿಕೊಂಡು ನಿರ್ಣಯ ಮಾಡುತ್ತಾರೆ. ಇವರು ಯಾರನ್ನು ಆಯ್ಕೆ ಮಾಡುತ್ತಾರೆ ಅವರೇ ಅಧ್ಯಕ್ಷ-ಉಪಾಧ್ಯಕ್ಷ. ಯಾರಿಗೆ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು