ಆಗಸ್ಟ್ 24 ರಂದು ಕೇಂದ್ರ ಸರ್ಕಾರ ಘೋಷಿಸಿರುವ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್)ಯನ್ನು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಖಂಡಿಸಿದೆ.
ಭಾನುವಾರ (ಆ.25) ಆನ್ ಲೈನ್ ವೇದಿಕೆಯಲ್ಲಿ ನಡೆದ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸಭೆಯಲ್ಲಿ ಯುಪಿಎಸ್ ಯೋಜನೆ ಕುರಿತ ವಿವರ ಪರಿಶೀಲಿಸಿದ ಬಳಿಕ ಇದು ದೇಶಾದ್ಯಂತ ನೌಕರರು ಮತ್ತು ಶಿಕ್ಷಕರನ್ನು ವಂಚಿಸುವ ಸಂಶಯಾಸ್ಪದ ಪ್ರಯತ್ನವಾಗಿದೆ ಎಂಬ ನಿಲುವಿಗೆ ಒಕ್ಕೂಟ ಬಂದಿದೆ.
ಎನ್ಪಿಎಸ್ ವಿರುದ್ಧ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ನೌಕರರ ಕಣ್ಣೊರೆಸುವ ಪಿತೂರಿ ಅಷ್ಟೇ. ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.
ಯುಪಿಎಸ್ ಅನ್ನು ಬೆಂಬಲಿಸುತ್ತಿರುವ ಇಂತಹ ಅವಕಾಶವಾದಿ ಸಂಘಟನೆಗಳ ಮತ್ತು ನೌಕರರ ಸಮುದಾಯವನ್ನು ವಂಚಿಸುವ ಯಾವುದೇ ನಾಯಕರೊಂದಿಗೆ ಅಖಿಲ ಭಾರತ ಒಕ್ಕೂಟವು ವೇದಿಕೆಯನ್ನು ಹಂಚಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ ಮರುಸ್ಥಾಪನೆಗಾಗಿ ನಮ್ಮ ಹೋರಾಟವನ್ನು ಮುಂದುವರೆಸಲು ರಾಜ್ಯಾದ್ಯಂತ ಎಲ್ಲಾ ನೌಕರರು ಮತ್ತು ಶಿಕ್ಷಕರಿಗೆ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮನವಿ ಮಾಡುತ್ತದೆ ಎಂದು ತಿಳಿಸಿದೆ.
ಯಾವುದೇ ಕಾರಣಕ್ಕೂ ಎನ್.ಪಿ.ಎಸ್ ರದ್ದು ಮಾಡುವುದಿಲ್ಲ ಎಂದು ಹೇಳುತ್ತಿದ್ದ ಎನ್ಡಿಎ ಸರ್ಕಾರವು ಹಿಂದಿನ ಅವಧಿಯಲ್ಲಿ ನೌಕರರ ನಿರಂತರ ಹೋರಾಟಗಳ ಕಾರಣದಿಂದಾಗಿ ಯು.ಪಿ.ಎಸ್ ಎಂಬ ಎನ್.ಪಿ.ಎಸ್ ನ ಮಾರ್ಪಡಿತ ಯೋಜನೆಯನ್ನು ತರಲು ಹೊರಟಿದೆ. ಹಾಗಾಗಿ, ದೇಶಾದ್ಯಂತ ನೌಕರರ ಒಗ್ಗಟ್ಟಿನ ಹೋರಾಟ ಮುಂದುವರಿದರೆ, ನಾವು PFRDA/NPS ಬದಲಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರಳಿ ತರಲು ಆಗ್ರಹಿಸುತ್ತೇವೆ ಎಂದು ಒಕ್ಕೂಟ ಹೇಳಿಕೊಂಡಿದೆ.
ಸೆಪ್ಟಂಬರ್ 26 ರಂದು ದೇಶಾದ್ಯಂತ ರಾಷ್ಟ್ರೀಯ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ನಿರ್ಧರಿಸಿದೆ. ಹಾಗಾಗಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಊಟದ ವಿರಾಮದ ವೇಳೆ ಧರಣಿ ನಡೆಸಲು ಕರೆ ನೀಡಿದೆ.